ಪ್ರಜ್ವಲ್ ಜಿ.ಆರ್ ಮಡಿಕೇರಿ, ಜ. ೨೦: ನಿಸರ್ಗ ಸೃಷ್ಟಿತ ಸಮಸ್ಯೆಗಳಾದ ಪ್ರಾಕೃತಿಕ ವಿಕೋಪ, ವನ್ಯಪ್ರಾಣಿ ಹಾವಳಿ ನಡುವೆ ಜೀವಿಸುತ್ತಿರುವ ಬೆಳೆಗಾರರಿಗೆ ಇದೀಗ ಸರಕಾರ ಗಾಯದ ಮೇಲೆ ಬರೆ ಬೀಸಿದೆ. ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಇಲಾಖೆಯ ಇತ್ತೀಚಿನ ಮಾರ್ಗಸೂಚಿ ಅನುಷ್ಠಾನ ಮಾಡುವ ಸಂಬAಧ ವಿವಿಧ ಇಲಾಖೆ, ಬೆಳೆಗಳ ಮಂಡಳಿಗಳು ಗೊಂದಲದಲ್ಲಿದ್ದರೆ, ಮಾರ್ಗಸೂಚಿ ಅನುಷ್ಠಾನಗೊಂಡಲ್ಲಿ ದೇಶದ ಬೆಳೆಗಾರರು, ಮುಖ್ಯವಾಗಿ ಕಾಫಿ ಬೆಳೆಗಾರರು ಹೈರಾಣಾಗಲಿದ್ದಾರೆ.ಮಾರ್ಗಸೂಚಿ ಅನ್ವಯ ಸಬ್ಸಿಡಿ ರಸಗೊಬ್ಬರ ಖರೀದಿಸಲು ಬೆಳೆಗಾರರು ಸಂಬAಧಿಸಿದ ಮಂಡಳಿಗಳಡಿ ಯಲ್ಲಿ ನೋಂದಾಯಿಸಿಕೊಳ್ಳುವುದಲ್ಲದೆ ಜಿ.ಎಸ್.ಟಿ ನೋಂದಣಿ ಕೂಡ ಮಾಡಬೇಕೆಂದು ಕೇಂದ್ರ ಸರ್ಕಾರ ಆದೇಶಿಸಿದೆ. ಬೆಳೆಗಾರರ ಜಿ.ಎಸ್.ಟಿ ಆಧಾರದಲ್ಲಿ ಅವರನ್ನು ಗುರುತಿಸಿ ನಂತರ ಸಬ್ಸಿಡಿ ರಸಗೊಬ್ಬರ ಖರೀದಿಸ ಬೇಕೆಂಬುದು ಮಾರ್ಗ ಸೂಚಿಯ ಪ್ರಮುಖ ಅಂಶವಾಗಿದ್ದು, ಸಬ್ಸಿಡಿ ಆಧಾರದಲ್ಲಿ ಪಡೆಯುವ ರಸಗೊಬ್ಬರಕ್ಕೂ ಜಿ.ಎಸ್.ಟಿ ಪಾವತಿಸಬೇಕೆ ಇಲ್ಲವೇ ಎಂಬುದು ಗೊಂದಲಕ್ಕೆ ಎಡೆಮಾಡಿದೆ.

ಜಿಲ್ಲೆಯ ಹಲವಾರು ಬೆಳೆಗಾರರಲ್ಲಿ ಸಮರ್ಪಕ ದಾಖಲಾತಿಗಳು ಇಲ್ಲದಿರುವುದು ಮತ್ತಷ್ಟು ಸಮಸ್ಯೆ ಸೃಷ್ಟಿ ಮಾಡಲಿದೆ. ಆರ್.ಟಿ.ಸಿ ದಾಖಲಾತಿಯಲ್ಲಿ ನಮೂದಿಸ ಲಾದ ವಿಸ್ತೀರ್ಣದನುಸಾರ ಮಾತ್ರ ಸಬ್ಸಿಡಿ ರಸಗೊಬ್ಬರ ಸರಬರಾಜಾಗಲಿದೆ. ದಾಖಲಾತಿಗಳು ನಮೂದಿಸಲಾಗದೆ ಇರುವ ಪೈಸಾರಿ ಜಾಗಗಳಲ್ಲಿ ಬೆಳೆಗಳನ್ನು ಬೆಳೆದಿದ್ದರೆ, ಜಾಗ ಒತ್ತುವರಿಯಾಗಿದ್ದರೆ ಇಂತಹ ಜಾಗದಲ್ಲಿನ ಬೆಳೆಗಳಿಗೆ ಸಬ್ಸಿಡಿ ದರದಲ್ಲಿ ರಸಗೊಬ್ಬರ ದೊರಕದೇ ಹೋಗುತ್ತದೆ.

ಕಳೆದ ವರ್ಷವೇ ಬಿಡುಗಡೆಯಾದ ಮಾರ್ಗಸೂಚಿ

ಕೇಂದ್ರ ರಸಗೊಬ್ಬರ ಇಲಾಖೆಯಿಂದ ಕಳೆದ ನವೆಂಬರ್ ೯ ರಂದೇ ಕೃಷಿ ಇಲಾಖೆಯ ಎಲ್ಲಾ ಆಯುಕ್ತರು, ನಿರ್ದೇಶಕರು, ರಸಗೊಬ್ಬರ ಉತ್ಪಾದನೆಯ ಸಂಸ್ಥೆಗಳು ಹಾಗೂ ಬೆಳೆಗಳ ಮಂಡಳಿಗಳಿಗೆ ಮಾರ್ಗಸೂಚಿ ತಲುಪಿದ್ದರೂ, ಇದು ಇದುವರೆಗೂ ಬಹಿರಂಗವಾಗದೆ ಇರುವುದು ಸಂಶಯಕ್ಕೆ ಎಡೆಮಾಡಿ ಕೊಟ್ಟಿದೆ.