ಸೋಮವಾರಪೇಟೆ, ಜ. ೨೦: ಕಳೆದ ಮೂರು ದಿನಗಳ ಹಿಂದೆ ಕೂತಿ ಗ್ರಾಮದಿಂದ ನಾಪತ್ತೆಯಾಗಿದ್ದ ವೃದ್ಧರೋರ್ವರು ಹಾಸನ-ದಕ್ಷಿಣ ಕನ್ನಡ ಜಿಲ್ಲೆಯ ಬಿಸಿಲೆ ಗಡಿಯಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿ ರೆಳೆದಿದ್ದಾರೆ.

ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಕೂತಿ ಗ್ರಾಮದ ನಿವಾಸಿ ತಂಗಮ್ಮ ಎಂಬವರ ಪತಿ ಎಂ.ಪಿ. ಸುಬ್ಬಯ್ಯ (೬೮) ಎಂಬವರೇ ಸಾವನ್ನಪ್ಪಿದ ದುರ್ದೈವಿ. ಕಳೆದ ೧೫ ದಿನಗಳ ಹಿಂದೆಯೂ ಮನೆಯಿಂದ ತೆರಳಿದ್ದ ಇವರನ್ನು ಸೋಮವಾರಪೇಟೆ ಪೊಲೀಸರ ಸಹಕಾರದಿಂದ ಹುಡುಕಿ ಗೊದ್ದು ಸಮೀಪದ ಕೂಡುರಸ್ತೆಯ ಅರಣ್ಯಪ್ರದೇಶದಿಂದ ಕರೆತರಲಾಗಿತ್ತು.

ಮನೆಯಲ್ಲಿಯೇ ಇದ್ದ ಸುಬ್ಬಯ್ಯ ಅವರು ಕಳೆದ ೩ ದಿನಗಳ ಹಿಂದೆ ಮತ್ತೆ ನಾಪತ್ತೆಯಾಗಿದ್ದರು. ನಿನ್ನೆ ದಿನ ಬಿಸಿಲೆ ಅರಣ್ಯ ವ್ಯಾಪ್ತಿಯ ಗಡಿಚೌಡೇಶ್ವರಿ ದೇವಾಲಯ ಸಮೀಪದ ಹೊಳೆ ಬದಿಯಲ್ಲಿ ನಗ್ನವಾಗಿ ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದು, ದಾರಿಹೋಕರು ಸುಬ್ರಹ್ಮಣ್ಯದ ಯುವತೇಜಸ್ಸು ಟ್ರಸ್ಟ್ಗೆ ಮಾಹಿತಿ ನೀಡಿದ್ದಾರೆ.ತಕ್ಷಣ ಆಂಬ್ಯುಲೆನ್ಸ್ ಸಹಿತ ಆಗಮಿಸಿದ ಯುವತೇಜಸ್ಸು ಟ್ರಸ್ಟ್ನ ಪದಾಧಿಕಾರಿಗಳು ಸುಬ್ಬಯ್ಯ ಅವರನ್ನು ಸುಬ್ರಹ್ಮಣ್ಯ ಆಸ್ಪತ್ರೆಗೆ ಕರೆತಂದಿದ್ದು, ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸುಳ್ಯದ ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿದ್ದು, ಮೃತರ ಬಾಯಿಯಿಂದ ನೊರೆಯೊಂದಿಗೆ ಕೀಟನಾಶಕದ ವಾಸನೆ ಬರುತ್ತಿದ್ದ ಹಿನ್ನೆಲೆ, ಯಾವುದೋ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಅಂದಾಜಿಸಲಾಗಿದೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂತಿ ಗ್ರಾಮದಿಂದ ಸಂಬAಧಿಕರು ತೆರಳಿ ಮೃತದೇಹವನ್ನು ಗುರುತಿಸಿದ್ದು, ಅಲ್ಲಿನ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.