ವೀರಾಜಪೇಟೆ, ಜ. ೨೧: ಗೋವನ್ನು ಕದ್ದು ಮಾಂಸ ಮಾಡಿ ಮಾರಾಟಕ್ಕೆ ಯತ್ನಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚೊಕಂಡಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ವೀರಾಜಪೇಟೆ ತಾಲೂಕಿನ ಬಿಳುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ವತೊಕ್ಲು ಗ್ರಾಮದ ಡಿ.ಎಸ್. ರಫೀಕ್ (೩೫) ಮತ್ತು ಪೊನ್ನಪ್ಪಸಂತೆ ಬಿಳೂರು ನಿವಾಸಿ ಬಾಷ (೩೦) ಬಂಧಿತ ಆರೋಪಿಗಳು.

ಚೊಕಂಡಳ್ಳಿ ಕಾಫಿ ತೋಟ ಒಂದರಲ್ಲಿ ಗೋವನ್ನು ಹತ್ಯೆಗೈದು ಅದನ್ನು ಮಾಂಸ ಮಾಡಿ ಮಾರಾಟ ಮಾಡುತ್ತಿರುವುದಾಗಿ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಗಳು ನಲ್ವತ್ತೋಕ್ಲು ಸಮೀಪದ ಚೋಕಂಡಳ್ಳಿಯ ಆರೋಪಿ ರಫೀಕ್ ಎಂಬವರ ತೋಟಕ್ಕೆ ದಾಳಿ ನಡೆಸಿದ ಸಂದರ್ಭ ಸುಮಾರು ೧೫೦ ಕೆ.ಜಿ ಗೋಮಾಂಸ ಇರುವುದು ಪತ್ತೆಯಾಗಿದ್ದು, ಆರೋಪಿಗಳನ್ನು ಸ್ಥಳದಲ್ಲಿಯೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮಾಂಸ ಮತ್ತು ಕೃತ್ಯಕ್ಕೆ ಬಳಸಿದ್ದ ಉಪಕರಣಗಳನ್ನು ವಶಪಡಿಸಿಕೊಂಡು ಆರೋಪಿಗಳ ಮೇಲೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ರಾಜ್ಯ ಗೋ ಹತ್ಯೆ ಮತ್ತು ಅಕ್ರಮ ಗೋಮಾಂಸ ಮಾರಾಟ ನಿಷೇಧ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ. ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಧೀಶರು ೧೫ ದಿನಗಳ ಕಾಲ ನ್ಯಾಯಾಂಗ ಬಂಧÀನದಲ್ಲಿಡಲು ಆದೇಶ ಮಾಡಿದ್ದಾರೆ.

ವೀರಾಜಪೇಟೆ ಉಪ ವಿಭಾಗ ಡಿವೈಎಸ್ಪಿ ಸಿ.ಟಿ. ಜಯಕುಮಾರ್ ಅವರ ಆದೇಶದಂತೆ ವೃತ್ತ ನಿರೀಕ್ಷಕರಾದ ಬಿ.ಎಸ್.ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಸಿದ್ದಲಿಂಗ ಬಿ ಬಾಣಸೆ ಮತ್ತು ಅಪರಾದ ವಿಭಾಗದ ಪಿ.ಎಸ್.ಐ. ಸಿ.ಶ್ರೀಧರ್ ಹಾಗೂ ಸಿಬ್ಬಂದಿಗಳಾದ ತೀರ್ಥ ಕುಮಾರ್, ರಾಮಪ್ಪ, ಶ್ರೀಕಾಂತ್, ಮೂರ್ತಿ, ಪ್ರವೀಣ್ ಮತ್ತು ಚಾಲಕ ಸಂದೀಪ್ ಭಾಗವಹಿಸಿದ್ದರು.

-ಕಿಶೋರ್ ಕುಮಾರ್ ಶೆಟ್ಟಿ