ರಾಜ್ಯದಲ್ಲಿ ಮುಂದುವರೆದ ಕೊರೊನಾರ್ಭಟ

ಬೆಂಗಳೂರು, ಜ. ೨೦: ರಾಜ್ಯದಲ್ಲಿ ಮಹಾಮಾರಿ ಕೊರೊನಾ ಆರ್ಭಟ ಮುಂದುವರೆದಿದ್ದು, ಕಳೆದ ೨೪ ಗಂಟೆಯಲ್ಲಿ ಬರೋಬ್ಬರಿ ೪೭,೭೫೪ ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ೪೭ ಸಾವಿರ ದಾಟುವ ಮೂಲಕ ಪಾಸಿಟಿವ್ ಪ್ರಮಾಣ ಶೇ. ೧೮.೪೮ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಎಂಟು ಮಂದಿ ಸೇರಿದಂತೆ ರಾಜ್ಯದಲ್ಲಿ ಕೊರೊನಾದಿಂದ ೨೯ ಮಂದಿ ಮೃತಪಟ್ಟಿದ್ದಾರೆ ಎಂದು ಸುಧಾಕರ್ ತಿಳಿಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ೩೦ ಸಾವಿರದ ಗಡಿ ದಾಟಿದ್ದು, ೩೦,೫೪೦ ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವರು ಟ್ವೀಟ್ ಮಾಡಿದ್ದಾರೆ. ರಾಜ್ಯದಲ್ಲಿ ೨೨,೧೪೩ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ೨,೯೩,೨೩೧ ಸಕ್ರಿಯ ಪ್ರಕರಣಗಳಿವೆ. ಒಟ್ಟು ೨,೫೮,೨೯೦ ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ ಎಂದು ಸುಧಾಕರ್ ಹೇಳಿದ್ದಾರೆ.

ಫಾರ್ಮ್ಹೌಸ್‌ನಲ್ಲಿ ಬೃಹತ್ ಸ್ಫೋಟಕಗಳ ಸಂಗ್ರಹ ಪತ್ತೆ

ಬಾಗಲಕೋಟೆ, ಜ. ೨೦: ಬಾಗಲಕೋಟೆ ಸಮೀಪದ ಹೊನ್ನಕಟ್ಟಿ ಗ್ರಾಮದ ತೋಟದ ಮನೆಯಲ್ಲಿ ಸಂಗ್ರಹಿಸಲಾಗಿದ್ದ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳನ್ನು ಬಾಗಲಕೋಟೆ ಗ್ರಾಮಾಂತರ ಪೊಲೀಸರು ಗುರುವಾರ ಪತ್ತೆ ಮಾಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಜಿಲ್ಲಾ ಕೇಂದ್ರದಿAದ ೭ ಕಿ.ಮೀ. ದೂರದಲ್ಲಿರುವ ಹೊನ್ನಕಟ್ಟಿ ಗ್ರಾಮದ ಹೊರವಲಯದಲ್ಲಿರುವ ತೋಟದ ಮನೆಯ ಮೇಲೆ ದಾಳಿ ನಡೆಸಿದ್ದು, ಫಾರ್ಮ್ಹೌಸ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಸುಮಾರು ೫೦೦ ಕೆ.ಜಿ. ಸ್ಫೋಟಕಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಸಂಬAಧ ಇಬ್ಬರನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಬಂಧಿತ ಆರೋಪಿಗಳನ್ನು ಹಳೆ ಬಾಗಲಕೋಟೆ ಪಟ್ಟಣದ ನಿವಾಸಿಗಳಾದ ವಿಜಯ್ (೩೦) ಮತ್ತು ಮಂಜುನಾಥ್ (೩೦) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಲಾಯಿತು. ೨೫೦ ಕೆ.ಜಿ. ಗನ್‌ಪೌಡರ್, ೧೫೦ ಕೆ.ಜಿ. ಸೋಡಿಯಂ ನೈಟ್ರೇಟ್, ೫೨ ಕೆ.ಜಿ. ಇದ್ದಿಲುಪುಡಿ ಮತ್ತು ೫೦ ಕೆ.ಜಿ. ಸಲ್ಫರ್ ಸೇರಿದಂತೆ ಸುಮಾರು ೫೦೦ ಕೆ.ಜಿ. ಸ್ಫೋಟಕಗಳು ಪತ್ತೆಯಾಗಿವೆ. ಸ್ಫೋಟಕಗಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿದ್ದು, ಅವುಗಳನ್ನು ಸುತ್ತಮುತ್ತಲಿನ ಗ್ರಾನೈಟ್ ಮತ್ತು ಕಲ್ಲು ಕ್ವಾರಿಗಳಿಗೆ ಸರಬರಾಜು ಮಾಡಲಾಗುತ್ತಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಲಸಿಕೆಯಿAದಾಗಿ ಮೂರನೇ ಅಲೆಯಲ್ಲಿ ಸಾವಿನ ಪ್ರಮಾಣ ಇಳಿಕೆ

ನವದೆಹಲಿ, ಜ. ೨೦: ಕೊರೊನಾ ಎರಡನೇ ಅಲೆಗೆ ಹೋಲಿಸಿದರೆ ಮೂರನೇ ಅಲೆಯಲ್ಲಿ ಸಾವಿನ ಪ್ರಮಾಣ ಗಣನೀಯ ಇಳಿಕೆ ಕಂಡುಬAದಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಅದಕ್ಕೆ ಲಸಿಕೆ ಹಂಚಿಕೆಯೇ ಕಾರಣ ಎಂದು ಕೇಂದ್ರ ಅಭಿಪ್ರಾಯಪಟ್ಟಿದೆ. ಸದ್ಯ ಭಾರತದಲ್ಲಿ ಶೇ. ೯೪ ಪ್ರತಿಶತ ವಯಸ್ಕರು ಮೊದಲ ಡೋಸ್ ಕೊರೊನಾ ಲಸಿಕೆ ಪಡೆದಿದ್ದರೆ, ಶೇ. ೭೨ ಪ್ರತಿಶತ ಮಂದಿ ಎರಡೂ ಡೋಸ್‌ಗಳನ್ನು ಪೂರ್ತಿಯಾಗಿ ಪಡೆದುಕೊಂಡಿದ್ದಾರೆ. ಐಸಿಎಂಆರ್ ಮುಖ್ಯಸ್ಥ ಡಾ. ಬಲರಾಮ ಭಾರ್ಗವ ಅವರು ದೇಶದಲ್ಲಿ ಸಾವಿನ ಪ್ರಮಾಣ ಇಳಿಮುಖಗೊಳ್ಳುವುದಕ್ಕೆ ಲಸಿಕೆಯೇ ಪ್ರಮುಖ ಕಾರಣ ಎಂದಿದ್ದಾರೆ.

ಪಾಕಿಸ್ತಾನದ ಲಾಹೋರ್ ಮಾರುಕಟ್ಟೆಯಲ್ಲಿ ಭಾರೀ ಸ್ಫೋಟ

ಇಸ್ಲಾಮಾಬಾದ್, ಜ. ೨೦: ಪಾಕಿಸ್ತಾನದ ಲಾಹೋರ್ ನಗರದ ಪ್ರಸಿದ್ಧ ಅನಾರ್ಕಲಿ ಮಾರುಕಟ್ಟೆಯಲ್ಲಿ ಗುರುವಾರ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಟ ಮೂವರು ಸಾವಿಗೀಡಾಗಿದ್ದು, ೨೦ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಪೊಲೀಸರ ಪ್ರಕಾರ, ಭಾರತೀಯ ವಸ್ತುಗಳನ್ನು ಮಾರಾಟ ಮಾಡಲು ಪ್ರಖ್ಯಾತಿ ಪಡೆದಿರುವ ಲಾಹೋರ್‌ನ ಅನಾರ್ಕಲಿ ಮಾರುಕಟ್ಟೆಯ ಪಾನ್ ಮಂಡಿಯಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಮೂವರು ಮೃತಪಟ್ಟಿರುವುದನ್ನು ಲಾಹೋರ್ ಪೊಲೀಸ್ ವಕ್ತಾರ ರಾಣಾ ಆರಿಫ್ ಖಚಿತಪಡಿಸಿದ್ದಾರೆ. ಸ್ಫೋಟದಿಂದಾಗಿ ಹತ್ತಿರದ ಅಂಗಡಿಗಳು ಮತ್ತು ಕಟ್ಟಡಗಳ ಗಾಜುಗಳು ಪುಡಿಪುಡಿಯಾಗಿವೆ. ಆದರೆ, ಈವರೆಗೆ ಯಾವುದೇ ಉಗ್ರ ಸಂಘಟನೆ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ. ಸ್ಫೋಟದ ಸ್ವರೂಪವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಸದ್ಯ ೨೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತನಿಖೆ ಮುಂದುವರಿಸಲಾಗಿದೆ ಎಂದು ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಡಾ. ಮೊಹಮ್ಮದ್ ಅಬಿದ್ ತಿಳಿಸಿದ್ದಾರೆ.

ಅಪರಾಧ ಕೃತ್ಯಗಳಲ್ಲಿ ತೊಡಗುವ ಪೊಲೀಸ್ ಸಿಬ್ಬಂದಿಗಳ ವಜಾ

ಬೆಂಗಳೂರು, ಜ. ೨೦: ಸಮಾಜ ವಿರೋಧಿ ಶಕ್ತಿಗಳೊಂದಿಗೆ ಗುರುತಿಸಿಕೊಂಡು ಅಪರಾಧ ಕೃತ್ಯಗಳಲ್ಲಿ ಶಾಮೀಲಾಗಿರುವ ಪೊಲೀಸರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ. ನಗರದ ಚಾಮರಾಜಪೇಟೆಯ ಸಂಚಾರಿ ಪೊಲೀಸ್ ಠಾಣೆಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನಗರದ ಇಬ್ಬರು ಪೊಲೀಸ್ ಪೇದೆಗಳು ಗಾಂಜಾ ಮಾರಾಟ ಜಾಲದೊಂದಿಗೆ ಸಂಪರ್ಕ ಹೊಂದಿರುವುದಾಗಿ ದೂರುಗಳು ಕೇಳಿಬಂದಿದ್ದು, ಇಂತಹ ಕಾನೂನು ಬಾಹಿರ ಕೃತ್ಯಗಳನ್ನು ಸರ್ಕಾರ ಸಹಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೆಲವೇ ಕೆಲವು ಪೊಲೀಸರು ಇಂತಹ ಕೃತ್ಯದಲ್ಲಿ ಶಾಮೀಲಾಗುವುದರಿಂದ ಇತರ ದಕ್ಷ ಸಿಬ್ಬಂದಿಯಲ್ಲಿ ನಂಬಿಕೆಯೇ ಇಲ್ಲದಂತಾಗುತ್ತದೆ ಎಂದರು. ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದವರನ್ನು ಇಲಾಖೆಯಿಂದಲೇ ಶಾಶ್ವತವಾಗಿ ವಜಾ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು. ಗಾಂಜಾ ಮಾರಾಟದಲ್ಲಿ ಭಾಗಿಯಾಗಿರುವ ಪೊಲೀಸರ ಕುರಿತು ಸಂಪೂರ್ಣ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಕೋರಮಂಗಲ ಪೊಲೀಸ್ ಠಾಣೆಯ ಇಬ್ಬರು ಪೊಲೀಸರು ಮಾದಕ ದ್ರವ್ಯ ದಂಧೆಕೋರನೊಬ್ಬನ ಬಳಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು ಎನ್ನಲಾಗಿದ್ದು, ಈ ವೇಳೆ ಇಬ್ಬರನ್ನೂ ಬಂಧಿಸಲಾಗಿತ್ತು. ಬಂಧಿತ ಪೊಲೀಸರನ್ನು ಮುಖ್ಯ ಪೇದೆ ಶಿವಕುಮಾರ್ ಹಾಗೂ ಪೇದೆ ಸಂತೋಷ್ ಎಂದು ಗುರ್ತಿಸಲಾಗಿದೆ. ತಾ. ೧೩ ರಂದು ಮುಖ್ಯಮಂತ್ರಿಗಳ ಖಾಸಗಿ ನಿವಾಸದ ಬಳಿಯೇ ಘಟನೆ ನಡೆದಿದೆ.

ವಿದ್ಯಾರ್ಥಿ ಕಣ್ಣಿಗೆ ಗಾಯ ಮಾಡಿದ್ದ ಶಿಕ್ಷಕಿಗೆ ಮೂರು ವರ್ಷ ಜೈಲು

ತುಮಕೂರು, ಜ. ೨೦: ಸರಿಯಾಗಿ ವ್ಯಾಸಂಗ ಮಾಡದ ೭ ವರ್ಷದ ವಿದ್ಯಾರ್ಥಿಗೆ ೨೦೧೧ರಲ್ಲಿ ಕಠಿಣ ಶಿಕ್ಷೆ ವಿಧಿಸಿದ್ದಕ್ಕಾಗಿ ಆಕೆ ತನ್ನ ಎಡಗಣ್ಣಿನ ದೃಷ್ಟಿ ಕಳೆದುಕೊಂಡಿದ್ದಳು, ಈ ಹಿನ್ನೆಲೆಯಲ್ಲಿ ಖಾಸಗಿ ಶಾಲೆಯೊಂದರ ಶಿಕ್ಷಕಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ರೂ. ೧೦ ಸಾವಿರ ದಂಡ ವಿಧಿಸಿ ಇಲ್ಲಿನ ಮೂರನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ತುಮಕೂರಿನ ಭಾರತ್ ಮಾತಾ ಶಾಲೆಯ ಶಿಕ್ಷಕಿ ರಹತ್ ಫಾತಿಮಾ ಅವರಿಗೆ ಶಿಕ್ಷೆ ವಿಧಿಸಲಾಗಿದೆ. ಫೆಬ್ರವರಿ ೧೭, ೨೦೧೧ ರಂದು ಸರಿಯಾಗಿ ಓದುತ್ತಿಲ್ಲವೆಂಬ ಕಾರಣಕ್ಕೆ ಶಿಕ್ಷಕಿ ಬಾಲಕಿಗೆ ಕೋಲಿನಿಂದ ಹೊಡೆದಿದ್ದರು, ಇದರಿಂದ ಬಾಲಕಿಯ ಎಡಗಣ್ಣಿಗೆ ಗಾಯವಾಗಿತ್ತು. ಕೂಲಿ ಕಾರ್ಮಿಕನ ಮಗಳಾಗಿದ್ದ ಬಾಲಕಿ ಈಗ ಪ್ರಥಮ ಪಿಯುಸಿ ಓದುತ್ತಿದ್ದಾಳೆ. ಆಕೆಗೆ ಹಲವು ಬಾರಿ ಚಿಕಿತ್ಸೆ ನೀಡಿದರೂ ದೃಷ್ಟಿ ಬರಲಿಲ್ಲ. ಈ ಸಂಬAಧ ತಿಲಕ್ ಪಾರ್ಕ್ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿ ತನಿಖೆ ಕೈಗೊಂಡಿದ್ದರು.