ಸಿದ್ದಾಪುರ, ಜ. ೨೧: ಫೆಬ್ರವರಿ ೨೩ ಹಾಗೂ ೨೪ ರಂದು ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ದೆಹಲಿಯಲ್ಲಿ ನಡೆಯುವ ಕಾರ್ಮಿಕರ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಸಿದ್ದಾಪುರದ ಬಸ್ ನಿಲ್ದಾಣದಲ್ಲಿ ಕಾರ್ಮಿಕ ಸಂಘಟನೆ ಗಳಿಂದ ಪೂರ್ವಭಾವಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಕಾರ್ಮಿಕ ಸಂಘಟನೆಯ ಪ್ರಮುಖರು ಮಾತನಾಡಿ, ಭಾರತ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಕಾರ್ಮಿಕ ಸಂಘಟನೆಗಳು ಒಟ್ಟು ಸೇರಿ ಮೊದಲ ಸಾರ್ವತ್ರಿಕ ಮುಷ್ಕರವನ್ನು ೧೯೮೨ರಲ್ಲಿ ನಡೆಸಲಾಗಿತ್ತು. ಆಗ ನಡೆದ ಗೋಲಿಬಾರ್ನಲ್ಲಿ ೧೦ ಮಂದಿ ಕಾರ್ಮಿಕರು, ರೈತರು ವಿದ್ಯಾರ್ಥಿ ಮುಖಂಡರುಗಳು ಸಾವನ್ನಪ್ಪಿದ್ದರು. ಗೋಲಿಬಾರ್ನಲ್ಲಿ ಪ್ರಾಣತೆತ್ತ ದಿನವಾಗಿರುವ ಹಿನ್ನೆಲೆ ಸಿಐಟಿಯು ಸಂಘಟನೆ ನೇತೃತ್ವದಲ್ಲಿ ಪೂರ್ವಭಾವಿಯಾಗಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಪ್ರತಿಭಟನೆಯಲ್ಲಿ ಕಾರ್ಮಿಕ ಸಂಘಟನೆಯ ಪ್ರಮುಖರಾದ ಎನ್.ಡಿ. ಕುಟ್ಟಪ್ಪ, ಪಿ.ಆರ್. ಭರತ್, ಮಹದೇವ್, ಹೆಚ್.ಪಿ. ರಮೇಶ್, ಸಾಬೂ, ಶಾಜಿ ರಮೇಶ್ ಇನ್ನಿತರರು ಪಾಲ್ಗೊಂಡಿದ್ದರು.