ಮಡಿಕೇರಿ, ಜ. ೨೧: ಈಕೆ ಸುಮಾರು ೨೭ ವರ್ಷ ಪ್ರಾಯದ ಯುವತಿ. ಮಡಿಕೇರಿಯ ಕಾಲೇಜೊಂದರಲ್ಲಿ ದ್ವಿತೀಯ ವರ್ಷದ ಪದವಿಯನ್ನೂ ವ್ಯಾಸಂಗ ಮಾಡಿದ್ದಾಳೆ. ಆದರೆ ಈ ಯುವತಿ ಕೆಲವು ವರ್ಷಗಳಿಂದ ನರಕಸದೃಶ ರೀತಿಯಲ್ಲಿದ್ದ ಕತ್ತಲೆಯ ಕೋಣೆಯೊಂದರಲ್ಲಿ ಅಮಾನವೀಯವಾಗಿ ಬಂಧಿತಳಾಗಿದ್ದಳು. ಇಂತಹ ಹೀನ ಕೃತ್ಯವೊಂದು ಗಾಳಿಬೀಡುವಿನಲ್ಲಿ ಬಯಲಾಗಿದೆ.

ಈ ವಿಚಾರದ ಬಗ್ಗೆ ಸ್ಥಳೀಯ ಸ್ತಿçÃಶಕ್ತಿ ಸಂಘದವರು, ಸಾರ್ವಜನಿಕರು, ಸಾಮಾಜಿಕ ಸೇವಾ ಕಾರ್ಯಕರ್ತರಾದ ಮಾದೇಟಿರ ತಿಮ್ಮಯ್ಯ ಹಾಗೂ ಸಂಗಡಿಗರಿಗೆ ಮಾಹಿತಿ ನೀಡಿದ್ದು, ಯುವತಿಯ ರಕ್ಷಣೆಗೆ ಮುಂದಾಗುವAತೆ ಮನವಿ ಮಾಡಿದ್ದರು. ಈ ಸಂದೇಶದ ಆಧಾರದಲ್ಲಿ ತಿಮ್ಮಯ್ಯ, ತೇಲಪಂಡ ಶಿವು ನಾಣಯ್ಯ, ಕೊಕ್ಕಲೆರ ತಿಮ್ಮಯ್ಯ, ಓಡಿಯಂಡ ನಿತಿತ್ ತಿಮ್ಮಯ್ಯ ಅವರುಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರುಗಳ ಸಹಿತವಾಗಿ ಸ್ಥಳಕ್ಕೆ ನಿನ್ನೆ ತೆರಳಿದ್ದಾರೆ.

ಕರುಣಾಜನಕ ದೃಶ್ಯ

ಅಷ್ಟಕ್ಕೂ ಈ ಯುವತಿ ಯಾರು ಗೊತ್ತೇ... ಜಿಲ್ಲಾ ಉಪವಿಭಾಗಾಧಿಕಾರಿಗಳ ವಾಹನ ಚಾಲಕ ಧನಂಜಯ (ಗಣಪತಿ) ಎಂಬವರ ಪುತ್ರಿ. ಇವರು ಈಗಲೂ ಚಾಲಕ ವೃತ್ತಿಯಲ್ಲಿದ್ದಾರೆ. ಗಾಳಿಬೀಡುವಿನ ಸಣ್ಣ ಮನೆಯ ಆ ಕಿರಿದಾದ ಕೊಠಡಿ ತೀರಾಕತ್ತಲೆಯಿಂದ ಕೂಡಿದ್ದು, ಅಸಹ್ಯಕರ ರೀತಿಯಲ್ಲಿತ್ತು. ಯುವತಿಯ ಕಾಲಕೃತ್ಯಗಳು ಆ ಕೊಠಡಿಯೊಳಗೇ ನಡೆಯುತ್ತಿದ್ದುದು ಕಂಡು ಬಂದಿದೆ. ಹಂದಿಗೂಡಿಗೂ ಕಡೆಯಂತಿದ್ದ ಆ ಕೋಣೆಯೊಳಗೆ ಕೇವಲ ಪ್ಲಾಸ್ಟಿಕ್‌ನ ತಾಟ್‌ವೊಂದು ಹೊರತುಪಡಿಸಿದರೆ, ಆಕೆಗೆ ಹೊದ್ದುಕೊಳ್ಳಲೂ ಸಹ ಏನೂ ಗತಿಯಿರಲಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ್ದವರು ತಿಳಿಸಿದ್ದಾರೆ.

ಧನಂಜಯ ಅವರ ಹಿರಿಯ ಪತ್ನಿಯ ಮಗಳು ಇವಳಾಗಿದ್ದು, ತಾಯಿ ಹಲವು ವರ್ಷದ ಹಿಂದೆ ವಿಧಿವಶರಾಗಿದ್ದಾರೆ. ಈ ಬಗ್ಗೆ ಕೆಲವು ಅಂತೆ - ಕಂತೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದು, ತಾಯಿಯ ಸಾವಿನ ಬಳಿಕ ಈ ಯುವತಿ ಒಂದು ರೀತಿಯಲ್ಲಿ ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದಾಳೆ ಎಂದು ಹೇಳಲಾಗುತ್ತಿದೆ. ನಿನ್ನೆ ಅಧಿಕಾರಿಗಳು ಹಾಗೂ ಯುವಕರ ತಂಡ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಕೊಠಡಿಯಲ್ಲಿ ಬಂಧಿತಳಾಗಿದ್ದ ಯುವತಿ ಇವರೊಂದಿಗೆ ಹಸಿವು... ಅನ್ನಬೇಕು ಎಂದಿದ್ದಾಳೆ.

ಜಿಲ್ಲಾಸ್ಪತ್ರೆಗೆ ದಾಖಲು

ಬಳಿಕ ಈ ಯುವತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆ್ಯಂಬ್ಯುಲೆನ್ಸ್ನಲ್ಲಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಆಕೆಗೆ ಶುಶ್ರೂಷೆ ನೀಡಲಾಗುತ್ತಿದೆ. ತಂದೆ ಧನಂಜಯ, ತಮ್ಮ ದ್ವಿತೀಯ ಪತ್ನಿ ಹಾಗೂ ಇತರ ಇಬ್ಬರು ಮಕ್ಕಳೊಂದಿಗೆ ಇದೇ ಮನೆಯಲ್ಲಿ ವಾಸವಾಗಿದ್ದಾರೆ.

ಅಧಿಕಾರಿ ಪ್ರತಿಕ್ರಿಯೆ

ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮುದ್ದಣ್ಣ ಅವರು ಈ ಪ್ರಕರಣದಲ್ಲಿ ಇಲಾಖೆ ನಿಯಮಾನುಸಾರ ಕ್ರಮ ಅನುಸರಿಸಲಿದೆ. ಸದ್ಯಕ್ಕೆ ಯುವತಿಯನ್ನು ರಕ್ಷಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಯಾರೂ ದೂರು ನೀಡದ ಕಾರಣ ಪ್ರಕರಣ ದಾಖಲಿಸಲಾಗಿಲ್ಲ.

ಸದ್ಯಕ್ಕೆ ಯುವತಿ ಮಾನಸಿಕವಾಗಿ ಅಸ್ವಸ್ಥಳಾಗಿದ್ದು, ಆಕೆಯ ಹೇಳಿಕೆಯನ್ನು ಪಡೆಯಲಾಗದು. ಆದರೆ ಆಕೆಯ ರಕ್ಷಣೆ ಹಾಗೂ ಪೋಷಣೆಗೆ ಇಲಾಖೆ ಕ್ರಮ ವಹಿಸಲಿದೆ. ನಿನ್ನೆ ತಾವೂ ಸೇರಿದಂತೆ ಇಲಾಖಾ ಸಿಬ್ಬಂದಿಗಳು, ಸಖಿ ಒನ್‌ಸ್ಟಾಫ್‌ನ ಸಿಬ್ಬಂದಿ ಹಾಗೂ ಪೊಲೀಸ್ ಭೇಟಿ ನೀಡಿ ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆ ತಂದಿರುವುದಾಗಿ ತಿಳಿಸಿದ್ದಾರೆ. ಹೆತ್ತವರೇ ಈ ರೀತಿಯಲ್ಲಿ ಯುವತಿಯನ್ನು ಶೋಷಣೆಯಲ್ಲಿಡಲು ಕಾರಣವೇನು ಎಂಬದು ನಿಗೂಢವಾಗಿದೆ.