ಗೋಣಿಕೊಪ್ಪ ವರದಿ, ಜ. ೧೯: ಹೈಸೊಡ್ಲೂರು ಗ್ರಾಮದಲ್ಲಿರುವ ಸರ್ಕಾರಿ ಜಾಗವನ್ನು ಜಿಲ್ಲಾಡಳಿತ ಸರ್ವೇ ನಡೆಸಿ ಗುರುತಿಸಿದ್ದು, ಮೂಲಭೂತ ಸೌಕರ್ಯದೊಂದಿಗೆ ನಿವೇಶನ ರಹಿತರಿಗೆ ತಕ್ಷಣ ಜಾಗ ನೀಡಬೇಕು ಎಂದು ನಿವೇಶನ ರಹಿತ ಹೋರಾಟಗಾರರ ಸಂಘದ ಮುಖಂಡರಾದ ಪಿ.ಕೆ. ಗಣೇಶ್ ಒತ್ತಾಯಿಸಿದ್ದಾರೆ. ನಿವೇಶನ ರಹಿತ ೭೪ ಕುಟುಂಬಗಳು ೫ ವರ್ಷಗಳಿಂದ ಇಲ್ಲಿ ಟೆಂಟ್ ಹಾಕಿಕೊಂಡು ಹೋರಾಟ ನಡೆಸುತ್ತಿದೆ. ಸರ್ಕಾರ ಸರ್ವೆ ನಡೆಸಿ, ನಿವೇಶನ ರಹಿತರಿಗೆ ಹಂಚಲು ಮುಂದಾಗಿದ್ದರೂ, ಮತ್ತೆ ಸ್ಥಳೀಯ ಕಾಫಿ ಬೆಳೆಗಾರರು ಬೇಲಿ ಹಾಕಿಕೊಂಡಿರುವುದನ್ನು ಪ್ರಶ್ನಿಸಲಾಗಿದೆ. ಇದೇ ವಿಚಾರದಲ್ಲಿ ಜನವರಿ ೧೫ ರಂದು ಹೈಸೊಡ್ಲೂರು ಗ್ರಾಮದ ೮ ಜನರು ಹಲ್ಲೆ ಮಾಡಿದ್ದಾರೆ. ಹೀಗಿದ್ದರೂ ಪೊಲೀಸ್ ಇಲಾಖೆ ಅವರನ್ನು ಬಂಧಿಸಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಸ್ಥಳೀಯ ನಿವಾಸಿ ವೈ.ಬಿ. ಚಂದ್ರು, ವೈ.ಕೆ. ಸುರೇಶ್ ಮಾತನಾಡಿ, ನಿವೇಶನಕ್ಕೆ ಆಗ್ರಹಿಸಿ ಗ್ರಾಮದ ಸರ್ಕಾರಿ ಜಾಗದಲ್ಲಿ ಟೆಂಟ್ ನಿರ್ಮಿಸಿಕೊಂಡಿದ್ದೇವೆ. ನಮಗೆ ಸರ್ಕಾರಿ ಸವಲತ್ತು ಕೊಡಲು ಸ್ಥಳೀಯರು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆಕ್ಷೇಪಿಸಿದರು.