ಶನಿವಾರಸಂತೆ, ಜ. 18: ಬೈಕ್ ಚಾಲಿಸಿಕೊಂಡು ಬರುತ್ತಿದ್ದ ಯುವಕ ವಿದ್ಯುತ್ ಕಂಬಕ್ಕೆ ಡಿಕ್ಕಿಪಡಿಸಿ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರಸಂತೆಯ ಮುಖ್ಯ ರಸ್ತೆಯಲ್ಲಿ ರಾಮಮಂದಿರದ ಪಕ್ಕದ ಪೆಟ್ರೋಲ್ ಬಂಕ್ ಬಳಿ ಸಂಭವಿಸಿದೆ.
ಸಮೀಪದ ಬೆಳ್ಳಾರಳ್ಳಿ ಗ್ರಾಮದ ಫೋಟೋಗ್ರಾಫರ್ ಎಚ್.ಎ. ಹೇಮಂತ್ ಕುಮಾರ್ ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರ. ಈತ ಸ್ಟೂಡಿಯೋದಲ್ಲಿ ಕೆಲಸ ಮುಗಿಸಿ ಹಿಂದಿರುಗುತ್ತಿದ್ದಾಗ ಅಪಘಾತ ನಡೆದಿದೆ. ಬೈಕ್ ಸಹಿತ ಕೆಳಗುರುಳಿದ ಹೇಮಂತ್ ಕುಮಾರ್ನನ್ನು ಸಾರ್ವಜನಿಕರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಟೂಡಿಯೋ ಮಾಲೀಕ, ಅಪ್ಪಶೆಟ್ಟಳ್ಳಿ ಗ್ರಾಮದ ಎ.ಎನ್. ಸುಗಂಧ ದೂರು ನೀಡಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಪ್ರಕರಣ ದಾಖಲಿಸಿದ್ದಾರೆ.