ಸಿದ್ದಾಪುರ, ಜ. ೧೯: ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲಾ ಕೊಠಡಿಗಳ ನಿರ್ಮಾಣ ಹಾಗೂ ವಿವಿಧ ರಸ್ತೆ ಕಾಮಗಾರಿಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸಿದರು.

ನೆಲ್ಲಿಹುದಿಕೇರಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಕೊಠಡಿಗಳ ನಿರ್ಮಾಣದ ರೂ. ೨ ಕೋಟಿ ವೆಚ್ಚದ ಕಾಮಗಾರಿ, ಗ್ರಾ.ಪಂ. ವ್ಯಾಪ್ತಿಯಲ್ಲಿ ರೂ. ೭೮ ಲಕ್ಷ ವೆಚ್ಚದ ವಿವಿಧ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಶಾಸಕರು, ಶಾಸಕರ ಅನುದಾನ ಮಳೆಹಾನಿ ಕೇಂದ್ರದ ವಿಪತ್ತು ನಿರ್ವಹಣೆಯ ಅನುದಾನದಲ್ಲಿ ರಸ್ತೆ, ಕಿರುಸೇತುವೆಗಳ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ ಎಂದರು. ಶಾಸಕರ ವಿಶೇಷ ಅನುದಾನದಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಸಾಕಷ್ಟು ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಚೆಟ್ಟಳ್ಳಿಯಲ್ಲಿ ರೂ. ೯೭ ಲಕ್ಷ, ವಾಲ್ನೂರು-ತ್ಯಾಗತ್ತೂರು ರೂ. ೧.೫೯ ಲಕ್ಷ, ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಡ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದರು. ಇದಲ್ಲದೇ ಮಡಿಕೇರಿ ನಗರಸಭೆ, ಸೋಮವಾರಪೇಟೆ ಹಾಗೂ ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪಿಯಲ್ಲಿ ಕಾಮಗಾರಿ ಮಾಡಲು ಅನುದಾನ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಮಡಿಕೇರಿ ಕ್ಷೇತ್ರಕ್ಕೆ ರೂ. ೫೦ ಕೋಟಿ ಅನುದಾನ ಬಿಡುಗಡೆಗೊಳಿಸಿಕೊಡುವಂತೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಲಾಗಿದೆ. ಮುಖ್ಯಮಂತ್ರಿಗಳು ಅನುದಾನ ಬಿಡುಗಡೆಗೊಳಿಸುವ ಭರವಸೆಯನ್ನು ನೀಡಿದ್ದಾರೆ ಎಂದರು. ಕಳೆದೆರಡು ವರ್ಷಗಳಿಂದ ಮಹಾಮಾರಿ ಕೊರೊನಾ ಸೋಂಕಿನಿAದಾಗಿ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೂ ಕೂಡ ರಾಜ್ಯ ಸರ್ಕಾರ ಜಿಲ್ಲೆಗೆ ಅನುದಾನವನ್ನು ನೀಡಿದೆ ಎಂದರು. ಅಲ್ಲದೇ ಈ ಬಾರಿಯ ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಯಾದ ರೈತರಿಗೆ ಅವರ ಖಾತೆಗಳಿಗೆ ಪರಿಹಾರ ಧನ ನೀಡಿದ್ದು ಮುಖ್ಯಮಂತ್ರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆAದರು.

ಸದ್ಯದಲ್ಲೇ ಪುನರ್ವಸತಿ : ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನದಿ ತೀರದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತ ಕುಟುಂಬದವರಿಗೆ ಗುರುತಿಸಲಾದ ಜಾಗದಲ್ಲಿ ಸದ್ಯದಲ್ಲೇ ಸರ್ಕಾರದ ವತಿಯಿಂದ ಪುನರ್ವಸತಿ ಕಲ್ಪಿಸಿಕೊಡಲಾಗುವುದೆಂದು ತಿಳಿಸಿದರು. ಪುನರ್ವಸತಿಗೆ ಗುರುತಿಸಿದ ಜಾಗಕ್ಕೆ ಈಗಾಗಲೇ ಸರ್ಕಾರದ ಪಹಣಿ ಪತ್ರ ಆಗಿದ್ದು ಸಂತ್ರಸ್ತರಿಗೆ ವಸತಿ ಯೋಜನೆಯಡಿಯಲ್ಲಿ ಮನೆ ನಿರ್ಮಿಸಲು ಅನುದಾನ ನೀಡಲಾಗುವುದೆಂದು ಶಾಸಕ ರಂಜನ್ ಮಾಹಿತಿ ನೀಡಿದರು.

ಕಾಡಾನೆ ಹಾವಳಿ ತಡೆಗೆ ಸರ್ಕಾರ ಬದ್ಧ : ಇತ್ತೀಚೆಗೆ ಕಾಡಾನೆ ದಾಳಿಗೆ ಸಿಲುಕಿ ನೆಲ್ಲಿಹುದಿಕೇರಿಯ ನಲ್ವತ್ತೇಕರೆಯ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ್ದು ಈತನ ಕುಟುಂಬಕ್ಕೆ ಇನ್ನೆರಡು ದಿನಗಳಲ್ಲಿ ಸರ್ಕಾರದ ವತಿಯಿಂದ ಅರಣ್ಯ ಇಲಾಖಾಧಿಕಾರಿಗಳ ಮುಖಾಂತರ ರೂ. ೭.೫೦ ಲಕ್ಷ ಪರಿಹಾರ ನೀಡಲಾಗುವುದೆಂದರು. ಅಲ್ಲದೇ ಕುಟುಂಬದವರಿಗೆ ಪಿಂಚಣಿ ಸೌಲಭ್ಯ ಹಾಗೂ ಕುಟುಂಬದ ಮಕ್ಕಳ ಶಾಲಾ ಶುಲ್ಕವನ್ನು ಕೂಡ ನೀಡಲಾಗುವುದೆಂದು ಶಾಸಕರು ತಿಳಿಸಿದರು. ಭೂಮಿ ಪೂಜೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ನೆಲ್ಲಿಹುದಿಕೇರಿ ಗ್ರಾ.ಪಂ. ಅಧ್ಯಕ್ಷ ಸಾಬೂ ವರ್ಗೀಸ್, ಉಪಾಧ್ಯಕ್ಷೆ ಧಮಯಂತಿ, ಪಿಡಿಓ ಅನಿಲ್ ಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿ.ಕೆ. ಲೋಕೇಶ್, ಪಿ.ಸಿ. ಅಚ್ಚಯ್ಯ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಬೆಳ್ಳಿಯಪ್ಪ, ಪಕ್ಷದ ಪ್ರಮುಖರಾದ ಸಚಿನ್ ಪದ್ಮನಾಭ, ಟಿ.ಜಿ. ಚಂದ್ರಶೇಖರ್, ಚೆಟ್ಟಳ್ಳಿ ತಾ.ಪಂ. ಮಾಜಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಹಾಗೂ ಗ್ರಾ.ಪಂ. ಸದಸ್ಯರುಗಳು ಬಿಜೆಪಿ ಪಕ್ಷದ ಪದಾಧಿಕಾರಿಗಳು ಹಾಜರಿದ್ದರು. - ವಾಸು.