ಗೋಣಿಕೊಪ್ಪಲು. ಜ. 18: ಕಳೆದ ಮೂರು ದಿನಗಳ ಹಿಂದೆ ಗೋಣಿಕೊಪ್ಪ ಆರನೇ ವಿಭಾಗದ ನಿವಾಸಿ ಕುಪ್ಪಂಡ ಸಂಜು ಅವರಿಗೆ ಸೇರಿದ ಎರಡು ಗೂಳಿಗಳ ಮೇಲೆ ದಾಳಿ ನಡೆಸಿದ್ದ ಹುಲಿಯು ಇದೀಗ ಸಮೀಪದ ದೇವಮಚ್ಚಿ ಅರಣ್ಯ ಪ್ರದೇಶದತ್ತ ತೆರಳಿರಬಹುದೆಂದು ಅಂದಾಜಿಸಲಾಗಿದೆ.
ಹುಲಿ ಕಾರ್ಯಾಚರಣೆ ತಂಡ ಕಳೆದ ಎರಡು ರಾತ್ರಿಗಳನ್ನು ಸಂಜು ಅವರ ಮನೆಯ ಬಳಿ ಅಟ್ಟಣಿಕೆಯನ್ನು ಇಟ್ಟು ಹುಲಿಯು ಜಾನುವಾರುಗಳ ಕೊಟ್ಟಿಗೆಯ ಬಳಿ ಬರಬಹುದು ಎಂದು ಕಾದು ಕುಳಿತ್ತಿದ್ದರು. ಆದರೆ ಹುಲಿಯ ಯಾವ ಸುಳಿವು ಕಂಡು ಬರಲಿಲ್ಲ.
ಅಲ್ಲದೆ ವಿಪರೀತ ಬಿಸಿಲು ಇರುವುದರಿಂದ ಹುಲಿ ಸಂಚಾರ ಮಾಡುವ ಸ್ಥಳದಲ್ಲಿ ಹೆಜ್ಜೆ ಗುರುತುಗಳು ಅಷ್ಟಾಗಿ ಕಂಡು ಬರುತ್ತಿಲ್ಲ. ಕಾರ್ಯಾಚರಣೆ ತಂಡ ಹುಲಿಯ ಸಂಚಾರದ ಸಂಶಯ ವಿರುವ ವಿವಿಧ ಸ್ಥಳಗಳಲ್ಲಿ ರಾತ್ರಿ ವೇಳೆ ಕ್ಯಾಮರಾ ಇಟ್ಟು ಹುಲಿಯ ಸಂಚಾರದ ಬಗ್ಗೆ ಮಾಹಿತಿ ಕಲೆ ಹಾಕುವ ಪ್ರಯತ್ನ ಮಾಡುತ್ತಿದೆ.
ಆದರೆ ಕ್ಯಾಮರಾಕ್ಕೆ ಹುಲಿಯ ಯಾವುದೇ ಚಿತ್ರಗಳು ಸೆರೆ ಆಗುತ್ತಿಲ್ಲ. ಇತ್ತ ಗೂಳಿಗಳ ಮೇಲೆ ದಾಳಿ ನಡೆಸಿದ್ದ ಹುಲಿಯು ಗಂಭೀರ ಗಾಯಗೊಳಿಸಿ ವಾಪಾಸು ತೆರಳಿತ್ತು. ಇದೀಗ ಎರಡು ಗೂಳಿಗಳಿಗೆ ಪಶುವೈದ್ಯ ಇಲಾಖೆಯ ವೈದ್ಯರು ಬೆಳಿಗ್ಗೆ ಹಾಗೂ ಸಂಜೆಯ ವೇಳೆ ಚಿಕಿತ್ಸೆ ನೀಡುತ್ತಿದ್ದಾರೆ. ಎರಡು ಗೂಳಿಗಳು ಮೆಲ್ಲನೆ ಚೇತರಿಸಿ ಕೊಳ್ಳುತ್ತಿವೆ. ಆಹಾರ ಸೇವಿಸುತ್ತಿವೆ. ಎದ್ದು ನಿಲ್ಲುವ ಪ್ರಯತ್ನ ಮಾಡಿವೆ ಎಂದು ಗೂಳಿಗಳ ಮಾಲೀಕ ಕುಪ್ಪಂಡ ಸಂಜು ಮಾಹಿತಿ ನೀಡಿದ್ದಾರೆ.
ತಿತಿಮತಿ ವಲಯದ ಎಸಿಎಫ್ ಉತ್ತಪ್ಪ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಎಸಿಎಫ್ ಗೋಪಾಲ್, ತಿತಿಮತಿ ಆರ್.ಎಫ್.ಓ. ಅಶೋಕ್ ಹುನಗುಂದ ಪೊನ್ನಂಪೇಟೆ ಆರ್.ಎಫ್.ಓ. ದಿವಾಕರ್ ಹಾಗೂ ಆರ್.ಆರ್.ಟಿ. ತಂಡದವರು ದಿನಪೂರ್ತಿ ಹುಲಿಯ ಕಾರ್ಯಾಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಪ್ರತಿನಿತ್ಯ ನಡೆಯುವ ಕಾರ್ಯಾಚರಣೆ ವಿವರಗಳನ್ನು ಉನ್ನತ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದಾರೆ. ಇತ್ತ ತೂಚಮಕೇರಿ ಸರಕಾರಿ ಶಾಲಾ ಆವರಣದಲ್ಲಿ ಹುಲಿ ಕಾರ್ಯಾ ಚರಣೆ ತಂಡ ಬೀಡುಬಿಟ್ಟಿದ್ದು ಎಂಟನೇ ದಿನಕ್ಕೆ ಕಾಲಿರಿಸಿದೆ. ಕಾರ್ಯಾಚರಣೆ ತಂಡಗಳು ವಿವಿಧ ಭಾಗಗಳಲ್ಲಿ ಸಂಚರಿಸಿ ಹುಲಿಯ ಹೆಜ್ಜೆ ಗುರುತುಗಳನ್ನು ಕಂಡು ಹಿಡಿಯಲು ಶ್ರಮಿಸುತ್ತಿವೆ.
- ಹೆಚ್.ಕೆ. ಜಗದೀಶ್