ಸಿದ್ದಾಪುರ, ಜ. ೧೯: ಕಾರ್ಮಿಕ ಪೋಷಕರಿಂದ ತಪ್ಪಿಸಿಕೊಂಡಿದ್ದ ಮಗುವೊಂದನ್ನು ಪೊಲೀಸರು ರಕ್ಷಿಸಿ ಮರಳಿ ಪೋಷಕರಿಗೆ ಒಪ್ಪಿಸಿರುವ ಘಟನೆ ಸಿದ್ದಾಪುರ ಸಮೀಪದ ಕಾಫಿ ತೋಟವೊಂದರಲ್ಲಿ ನಡೆದಿದೆ.

ಮೂಲತಃ ಅಸ್ಸಾಂ ರಾಜ್ಯದ ಕಾರ್ಮಿಕರು ಕಾಫಿ ತೋಟವೊಂದರಲ್ಲಿ ಕಾಫಿ ಕೊಯ್ಲು ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ತಮ್ಮ ಜೊತೆಗಿದ್ದ ಮಗುವೊಂದನ್ನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಕುಳ್ಳಿರಿಸಿದ್ದರು. ಕೆಲಸದಲ್ಲಿ ಮಗ್ನರಾಗಿದ್ದ ಪೋಷಕರು ಮಗುವನ್ನು ನೋಡಿರಲಿಲ್ಲ. ಮಗು ಎರಡು ಕಾಫಿ ತೋಟದೊಳಗಿನಿಂದ ನಡೆದುಕೊಂಡು ಅನತಿ ದೂರ ತಲುಪಿತ್ತು. ಮಗುವೊಂದನ್ನು ನೋಡಿದ ಸ್ಥಳೀಯರು ೧೧೨ ಸಹಾಯವಾಣಿಗೆ ಕರೆ ಮಾಡಿದರು. ನಂತರ ಪೊಲೀಸರು ಸ್ಥಳಕ್ಕೆ ತೆರಳಿ ಮಾಹಿತಿ ಪಡೆದುಕೊಂಡÀÄ ಮಗುವನ್ನು ಪೋಷಕರಿಗೆ ಸುರಕ್ಷಿತವಾಗಿ ಒಪ್ಪಿಸಿದರು. ತಕ್ಷಣ ಸ್ಪಂದಿಸಿದ ಪೊಲೀಸರ ಕಾರ್ಯದ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.