ಮಡಿಕೇರಿ, ಜ. ೧೯: ಆಧುನಿಕ ಪ್ರಪಂಚ ‘ಡಿಜಿಟಲೈಸೇಷನ್’ ಕಡೆ ಮುಖ ಮಾಡುತ್ತಿದೆ. ಕೈಬೆರಳ ತುದಿಯಲ್ಲಿ ಪ್ರಪಂಚದ ವಿದ್ಯಮಾನ ಗಳನ್ನು ತಿಳಿದುಕೊಳ್ಳುವ ಆವಿಷ್ಕಾರ ಗಳಾಗಿವೆ. ಕೋವಿಡ್ ಪರಿಸ್ಥಿತಿಯಿಂದ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಇವೆಲ್ಲದರ ನಡುವೆ ಗ್ರಾಮೀಣ ಪ್ರದೇಶದ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಮಹತ್ವದ ಹೆಜ್ಜೆಯನ್ನಿಟ್ಟು ಯಶಸ್ವಿ ಯಾಗಿದ್ದಾರೆ.

ಹೌದು... ಡಿಜಿಟಲ್ ಗ್ರಂಥಾಲಯ ಸ್ಥಾಪನೆಯಲ್ಲಿ ಭಾರತ ದೇಶಕ್ಕೆ ಕೊಡಗು ಜಿಲ್ಲೆ ಅಗ್ರಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ೯೨ ಗ್ರಂಥಾಲಯಗಳು ಉನ್ನತೀಕರಣ ಗೊಂಡು ‘ಡಿಜಿಟಲೈಸ್ಡ್’ ಸೇವೆ ಆರಂಭಿಸಿವೆೆ. ಆಧುನಿಕ ಲೈಬ್ರರಿಗಳು ಹೊಸತನಗಳಿಗೆ ಕಾರಣವಾಗಿವೆ. ಕೇವಲ ಕಥೆ, ಕಾದಂಬರಿ, ಪುಸ್ತಕಗಳಿಗೆ ಮಾತ್ರ ಲೈಬ್ರರಿಗಳು ಸೀಮಿತವಾಗದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಕಾರಿ ಯಾಗುವ ಅದೆಷ್ಟೋ ಪುಸ್ತಕಗಳನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಲ್ಪಿಸುವ ಕೆಲಸವಾಗುತ್ತಿದೆ.

ಕೇಂದ್ರ ಹಾಗೂ ರಾಜ್ಯ ಸರಕಾರ ಜಂಟಿ ಯೋಜನೆ ಇದಾಗಿದ್ದು, ಈಗಾಗಲೇ ಜಿಲ್ಲೆಯ ೧೦೪ ಗ್ರಾಮ ಪಂಚಾಯ್ತಿಗಳ ಪೈಕಿ ೯೨ ಪಂಚಾಯ್ತಿ ಗಳಿಗೆ ಸೇರಿದ ಗ್ರಂಥಾಲಯಗಳು ಸಂಪೂರ್ಣ ಉನ್ನತೀಕರಣ ಗೊಂಡಿವೆ. ಇನ್ನೂ ೧೨ ಪಂಚಾಯ್ತಿಯ ಗ್ರಂಥಾಲಯಗಳು ಸದ್ಯದಲ್ಲಿಯೇ ಉನ್ನತೀಕರಣ ಗೊಳ್ಳಲಿವೆÉ. ಜೊತೆಗೆ ೧೮ ಕಡೆಗಳಲ್ಲಿ ವಿಶೇಷಚೇತನರಿಗೆ ಸಹಕಾರಿ ಯಾಗುವ ನಿಟ್ಟಿನಲ್ಲಿ ಬೀಕನ್ ಗ್ರಂಥಾಲಯಗಳನ್ನು ಸ್ಥಾಪನೆ ಮಾಡಲಾಗಿದೆ.

(ಮೊದಲ ಪುಟದಿಂದ)

ಆಕರ್ಷಕ ಗ್ರಂಥಾಲಯಗಳು

ಗ್ರಾಮ ಪಂಚಾಯ್ತಿ ಸೇರಿದಂತೆ ತಾ.ಪಂ, ಜಿ.ಪಂ. ಅನುದಾನಗಳಲ್ಲಿ ಆಕರ್ಷಕ ಗ್ರಂಥಾಲಯಗಳು ಸ್ಥಾಪನೆಯಾಗಿವೆ. ಗೋಡೆಗೆ ಬಣ್ಣ, ಬಣ್ಣದ ಪೈಟಿಂಗ್, ಸುಸಜ್ಜಿತ ಆಸನ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಇವೆ.

೭ ರಿಂದ ೯ ಸಾವಿರ ಪುಸ್ತಕಗಳು ಗ್ರಂಥಾಲಯದಲ್ಲಿ ಇಡಲಾಗಿದೆ. ವಿದ್ಯಾರ್ಥಿಗಳಿಗೆ ಉಚಿತ ನೋಂದಣಿ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಈಗಾಗಲೇ ೬೨ ಸಾವಿರ ಪುಸ್ತಕ ಪ್ರೇಮಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಗ್ರಂಥಾಲಯಗಳ ಉನ್ನತೀಕರಣಕ್ಕೆ ಒಟ್ಟು ಜಿ.ಪಂ.ನಿAದ ರೂ. ೩೨ ಲಕ್ಷ, ತಾ.ಪಂ. ನಿಂದ ರೂ. ೫೦ ಲಕ್ಷ, ಗ್ರಾ.ಪಂ. ೧೫ನೇ ಹಣಕಾಸು ಹಾಗೂ ಸ್ವಂತ ಸಂಪನ್ಮೂಲ ಮೂಲಕ ರೂ. ೧೨೦ ಲಕ್ಷ ಅನುದಾನದಲ್ಲಿ ಆಕರ್ಷಕ ಗ್ರಂಥಾಲಯಗಳು ಸ್ಥಾಪನೆಯಾಗಿವೆ. ಇದರೊಂದಿಗೆ ವಾರಕೊಮ್ಮೆ ಶಾಲಾ ಮಕ್ಕಳಿಗೆ ಗ್ರಂಥಪಾಲಕಾರ ಮೂಲಕ ಪುಸ್ತಕಗಳನ್ನು ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ.

೮ ಕೋಟಿ ಆನ್‌ಲೈನ್ ಪುಸ್ತಕಗಳು

ಪ್ರತಿ ಗ್ರಾ.ಪಂ. ಲೈಬ್ರರಿಗಳಲ್ಲಿ ಪ್ರಪಂಚದ ಎಲ್ಲಾ ಭಾಷೆಗಳ ೮ ಕೋಟಿಗೂ ಹೆಚ್ಚು ಪುಸ್ತಕಗಳು ಲಭ್ಯವಿರಲಿವೆ. ಇದರಲ್ಲಿ ಎಲ್ಲಾ ತರಗತಿಗಳ, ಎಲ್ಲಾ ವಿಷಯಗಳ ಪುಸ್ತಕಗಳು ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಪುಸ್ತಕಗಳು ಆನ್‌ಲೈನ್‌ನಲ್ಲಿ ದೊರೆಯಲಿವೆ. ಅಳವಡಿಸಲಾದ ಕಂಪ್ಯೂಟರ್ ಮೂಲಕ ಇದನ್ನು ಪಡೆದುಕೊಳ್ಳಬಹುದು. ಅಲ್ಲದೆ ಮೊಬೈಲ್‌ನಲ್ಲಿ ನೋಂದಣಿ ಮೂಲಕವೂ ಲಿಂಕ್ ಬಳಸಿ ಪುಸ್ತಕಗಳನ್ನು ಆನ್‌ಲೈನ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ವಿಶೇಷ ಚೇತನರಿಗೆ ಬ್ರೆöÊಲ್ ಬುಕ್ ಹಾಗೂ ಆಡಿಯೋ ಪುಸ್ತಕಗಳು ಲಭ್ಯವಿರಲಿವೆ.

ಗ್ರಂಥಾಲಯದಲ್ಲಿ ಟಿವಿ ಅಳವಡಿಸಲಾಗಿದ್ದು, ಈ ಮೂಲಕ ಆನ್‌ಲೈನ್ ಶಿಕ್ಷಣವನ್ನೂ ಪಡೆಯಬಹುದಾಗಿದೆ. ವಿವಿಧ ವಾಹಿನಿಗಳಲ್ಲಿ ಹಾಗೂ ಜಾಲತಾಣಗಳಲ್ಲಿ ಬರುವ ಶೈಕ್ಷಣಿಕ ವಿಚಾರಗಳನ್ನು ಉಚಿತವಾಗಿ ಇಲ್ಲಿ ಪ್ರಸಾರ ಮಾಡಲಾಗುವುದು.

ಅರ್ಜಿ ಸಲ್ಲಿಸಲು ವ್ಯವಸ್ಥೆ

ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಸುಲಭವಾಗಲಿ ಎಂದು ಗ್ರಾ.ಪಂ. ಮಟ್ಟದ ಲೈಬ್ರರಿಯಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ಉಚಿತವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ಗ್ರಾಮೀಣ ಪ್ರದೇಶದ ಮಕ್ಕಳು ಅರ್ಜಿ ಸಲ್ಲಿಸಲು ನಗರಕ್ಕೆ ತೆರಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಅನೇಕರಿಗೆ ಪ್ರಯೋಜನವಾಗಲಿದೆ.

ಶಾಸಕರುಗಳ ಮುತುವರ್ಜಿ

ಕೊಡಗಿನ ಶಾಸಕರುಗಳಾದ ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚು ರಂಜನ್ ಡಿಜಿಟಲ್ ಲೈಬ್ರರಿ ಸ್ಥಾಪನೆಗೆ ಮುತುವರ್ಜಿ ವಹಿಸಿದ್ದಾರೆ. ಖುದ್ದು ಶಾಸಕರೆ ಗ್ರಾ.ಪಂ.ಆಡಳಿತ ಮಂಡಳಿಗೆ ಕರೆ ಮಾಡಿ ಗ್ರಂಥಾಲಯ ಸ್ಥಾಪನೆ ಮಾಡುವಂತೆ ಸೂಚಿಸುತ್ತಿದ್ದಾರೆ.

ಶೈಕ್ಷಣಿಕವಾಗಿ ಈ ಯೋಜನೆ ಸಹಕಾರಿಯಾಗಲಿದ್ದು, ಪ್ರತಿ ಗ್ರಾ.ಪಂ.ನಲ್ಲೂ ಲೈಬ್ರರಿ ಇರಬೇಕೆಂಬ ಇರಾದೆ ಇಬ್ಬರು ಶಾಸಕರಲ್ಲಿದೆ. ಅಧಿಕಾರಿಗಳು ಹಾಗೂ ಗ್ರಾ.ಪಂ. ಸದಸ್ಯರುಗಳು ಶೇ ೧೦೦ ಗುರಿ ಸಾಧಿಸುವತ್ತ ಮುನ್ನಡೆಯುತ್ತಿದ್ದಾರೆ. -ಹೆಚ್.ಜೆ.ರಾಕೇಶ್