ಕಣಿವೆ, ಜ. ೧೯ : ಜಿಲ್ಲೆಯ ಶೈಕ್ಷಣಿಕ ರಾಜಧಾನಿ ಖ್ಯಾತಿಯ ಕುಶಾಲನಗರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶಗಳ ಬಾಲಕ ಹಾಗೂ ಬಾಲಕಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಬಡ ಮಕ್ಕಳ ಶೈಕ್ಷಣಿಕ ಕಲ್ಯಾಣದ ದೃಷ್ಟಿಯಿಂದ ಜಿಲ್ಲಾಡಳಿತ ಕುಶಾಲನಗರದಲ್ಲಿ ೧೫ಕ್ಕೂ ಹೆಚ್ಚು ವಸತಿ ನಿಲಯಗಳನ್ನು ತೆರೆದಿದೆ. ಅಂದರೆ ಕೆಲವು ಸರ್ಕಾರದ ಸ್ವಂತ ಕಟ್ಟಡಗಳಲ್ಲಿ ನಡೆಯುತ್ತಿದ್ದರೆ, ಹಲವು ವಸತಿ ನಿಲಯಗಳು ಖಾಸಗಿ ಕಟ್ಟಡಗಳಲ್ಲಿ ತಿಂಗಳ ಬಾಡಿಗೆ ರೂಪದಲ್ಲಿ ನಡೆಯುತ್ತಿವೆ.
ಕುಶಾಲನಗರದಲ್ಲಿ ಸರ್ಕಾರ ತೆರೆಯಬಹುದಾದ ವಸತಿ ನಿಲಯಗಳ ಕಟ್ಟಡ ನಿರ್ಮಾಣಕ್ಕೆ ಸೂಕ್ತವಾದ ಜಾಗದ ಕೊರತೆ ಕಾಡುತ್ತಿದೆ. ಈ ನಡುವೆ ಕುಶಾಲನಗರದ ತಾವರೆಕೆರೆ ಹಿಂಭಾಗದ ಬಡಾವಣೆಯೊಂದರ ನಿವೇಶನ ಒಂದರಲ್ಲಿ ಮೆಟ್ರಿಕ್ ನಂತರದ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಯರಿಗೆ ಸುಸಜ್ಜಿತವಾದ
(ಮೊದಲ ಪುಟದಿಂದ) ವಸತಿ ಸೌಕರ್ಯ ಕಲ್ಪಿಸುವ ಸದುದ್ದೇಶದಿಂದ ನಿರ್ಮಿಸಿರುವ ನೂತನ ಕಟ್ಟಡ ಲೋಕಾರ್ಪಣೆಗೆ ಸಿದ್ದವಾಗಿದೆ.
ದೇವರಾಜು ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ರೂ. ೫ ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕಟ್ಟಡವನ್ನು ಅತ್ಯಾಧುನಿಕ ಮಾದರಿಯಲ್ಲಿ ನಿರ್ಮಿಸಲಾಗಿದೆ.
ಮಳೆಗಾಲದ ಅವಧಿಯಲ್ಲಿ ಕಾವೇರಿ ನದಿ ಮೈದುಂಬಿದಾಗ ತಾವರೆಕೆರೆಯ ಬಳಿ ಸುಮಾರು ಐದರಿಂದ ಎಂಟು ಅಡಿಗಳಷ್ಟು ನೀರು ಏರಿಕೆಯಾದ ಸಂದರ್ಭ ತಗ್ಗು ಪ್ರದೇಶದಲ್ಲಿನ ಈ ಕಟ್ಟಡದ ಜಾಗದವರೆಗೂ ಪ್ರವಾಹದ ನೀರು ಬರುತ್ತಿತ್ತು. ಹಾಗಾಗಿ ಪ್ರವಾಹದ ಅಪಾಯವನ್ನು ಮನಗಂಡು ಈ ನಿವೇಶನವನ್ನು ಎರಡೂವರೆ ಮೀಟರ್‌ನಷ್ಟು ಕಾಂಕ್ರೀಟ್ ತಡೆಗೋಡೆ ನಿರ್ಮಿಸಿ ಅದರೊಳಗೆ ಮಣ್ಣು ತುಂಬಿಸಿ ಎತ್ತರಿಸಿ ಕಟ್ಟಡದ ತಳಹದಿ ನಿರ್ಮಿಸುವ ಮೂಲಕ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಕಟ್ಟಡ ನಿರ್ಮಾಣ ಸಂಸ್ಥೆಯ ವ್ಯವಸ್ಥಾಪಕ ಚಂದ್ರಶೇಖರ್ ರಾವ್ ಮಾಹಿತಿ ನೀಡಿದ್ದಾರೆ. ನೂತನ ಕಟ್ಟಡ ನಾಲ್ಕು ಅಂತಸ್ತಿನದಾಗಿದ್ದು ೩೦ ಕೊಠಡಿಗಳನ್ನು ನಿರ್ಮಿಸಲಾಗಿದೆ. ಈ ೩೦ ಕೊಠಡಿಗಳಲ್ಲಿ ೨೦೦ ಬಾಲಕಿಯರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ಎನ್. ಮಂಜುನಾಥ್ ಮಾಹಿತಿ ನೀಡಿದ್ದಾರೆ.
ನೂತನ ಕಟ್ಟಡದ ಮೇಲ್ಛಾವಣಿಯ ಮೇಲೆ ೧೨೦೦೦ ಲೀಟರ್ ನೀರು ಶೇಖರಣೆಯ ೯ ಟ್ಯಾಂಕುಗಳನ್ನು ಅಳವಡಿಸಲಾಗಿದೆ. ಹಾಗೆಯೇ ಸುಸಜ್ಜಿತ ಸೋಲಾರ್ ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗೆಯೇ ಕಟ್ಟಡದ ತಳದಲ್ಲಿ ೫೦ ಸಾವಿರ ಲೀಟರ್ ಸಾಮರ್ಥ್ಯದ ಸಂಪ್ ನಿರ್ಮಿಸಲಾಗಿದೆ.
ಒಟ್ಟಿನಲ್ಲಿ ನೂತನ ಕಟ್ಟಡದ ಒಳ ಮತ್ತು ಹೊರಭಾಗದ ಕಾಮಗಾರಿಗಳು ಬಹುತೇಕ ಪ್ರಮಾಣದಲ್ಲಿ ಪೂರ್ಣಗೊಂಡಿದ್ದು ತಿಂಗಳಾAತ್ಯದಲ್ಲಿ ಫಲಾನುಭವಿ ಮಕ್ಕಳಿಗೆ ದೊರಕಲಿದೆ.
- ಕೆ.ಎಸ್. ಮೂರ್ತಿ