ಶನಿವಾರಸಂತೆ, ಜ. 18: ಹುದಿಕೇರಿಯ ಹೈಸೊಡ್ಲೂರು ಗ್ರಾಮದ ಕಾರ್ಮಿಕರ ಮೇಲೆ ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸಬೇಕೆಂದು ಸೋಮವಾರಪೇಟೆ ತಾಲೂಕು ದ.ಸಂ.ಸ. ಒಕ್ಕೂಟದ ಅಧ್ಯಕ್ಷ ಕೊಡ್ಲಿಪೇಟೆಯ ಜೆ.ಎಲ್. ಜನಾರ್ಧನ್ ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿದ್ದು, ಕಾರ್ಮಿಕರ ಮೇಲೆ ಹಲ್ಲೆ ಖಂಡನೀಯ. ಹೈಸೊಡ್ಲೂರು ಗ್ರಾಮದ ಪೈಸಾರಿ ಜಾಗದಲ್ಲಿ 5 ವರ್ಷದಿಂದ ಪರಿಶಿಷ್ಟ ಪಂಗಡದವರು ಗುಡಿಸಲು ಕಟ್ಟಿ ವಾಸ ಮಾಡುತ್ತಿದ್ದಾರೆ. ನಿವೇಶನಕ್ಕಾಗಿ ಸರಕಾರಕ್ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ ಅನ್ಯ ಜಾತಿಯವರು ಬಂದು ಆ ಜಾಗಕ್ಕೆ ಬೇಲಿ ಹಾಕಿರುತ್ತಾರೆ. ಇದನ್ನು ವಿಚಾರಿಸಲು ಹೋದಾಗ ಪರಿಶಿಷ್ಟ ಪಂಗಡದ 8 ಜನರ ಮೇಲೆ ಹಲ್ಲೆ ಮಾಡಿರುತ್ತಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರು ತ್ತದೆ. ಆದರೆ, ಆರೋಪಿಗಳನ್ನು ಬಂಧಿಸಿಲ್ಲ ಎಂದು ದೂರಿದ್ದಾರೆ.
ಸಂಬಂಧಪಟ್ಟ ಪೊಲೀಸ್ ಇಲಾಖೆ ತಪ್ಪಿತಸ್ಥ ಆರೋಪಿಗಳನ್ನು ಶೀಘ್ರ ಬಂಧಿಸಬೇಕು. ಜಾಗಕ್ಕೆ ಸಂಬಂಧಿಸಿದ ಅಧಿಕಾರಿಯವರು, ಜಿಲ್ಲಾಡಳಿತ ನ್ಯಾಯ ದೊರಕಿಸಿ ಕೊಡಬೇಕು ಎಂದು ಜನಾರ್ಧನ್ ಒತ್ತಾಯಿಸಿದ್ದಾರೆ.