ವೀರಾಜಪೇಟೆ, ಜ. ೧೪: ನಗರದ ಮೂಲಕ ಹಾದು ಹೋಗುವ ಪ್ರಮುಖ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಇದನ್ನು ದುರಸ್ತಿ ಮಾಡುವಂತೆ ನಗರದ ಶ್ರೀ ಕಾವೇರಿ ಗಣೇಶೋತ್ಸವ ಸಮಿತಿ ವತಿಯಿಂದ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಲಾಯಿತು. ವೀರಾಜಪೇಟೆ ನಗರದ ಮೂರ್ನಾಡು ರಸ್ತೆಯ ಜಂಕ್ಷನ್ ಮತ್ತು ದೊಡ್ಡಟ್ಟಿ ಚೌಕಿಯ ಪ್ರಮುಖ ರಸ್ತೆ ಗುಂಡಿಮಯವಾಗಿದ್ದು ಇದರಿಂದ ಜನರಿಗೆ ಸಮಸ್ಯೆ ಆಗಿದೆ. ಶೀಘ್ರ ದುರಸ್ತಿ ಮಾಡುವಂತೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ವೈ.ಎಸ್. ಸಿದ್ದೇಗೌಡ ಅವರಿಗೆ ಪ್ರಮುಖರು ಮನವಿ ಸಲ್ಲಿಸಿದರು.
ಮನವಿಯ ಸಲ್ಲಿಸುವ ವೇಳೆಯಲ್ಲಿ ಶ್ರೀ ಕಾವೇರಿ ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷ ಬಟ್ಟೀರ ಡಿಕ್ಕ ಅಚ್ಚಪ್ಪ ಮಾತನಾಡಿ, ಮೂರ್ನಾಡು ರಸ್ತೆ ಜಂಕ್ಷನ್ ಮತ್ತು ದೊಡ್ಡಟ್ಟಿ ಚೌಕಿಯ ಮೂಲಕ ಹಾದು ಹೊಗುವ ಪ್ರಮುಖ ರಸ್ತೆಯಲ್ಲಿ ಬೃಹತ್ ಗಾತ್ರದಲ್ಲಿ ಹೊಂಡಗಳಾಗಿವೆ. ದಿನನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತಿವೆ. ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಹೊಂಡಗಳನ್ನು ತಪ್ಪಿಸಿ ವಾಹನ ಸವಾರರು ತೆರಳಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವಂತೆ ಒತ್ತಾಯಿಸಿದರು.
ಸಮಿತಿಯ ಸದಸ್ಯರಾದ ನಂಬುಡುಮಾಡ ರಾಜಪ್ಪ, ಮಹೇಂದ್ರ ಜೈನ್, (ರಾಜ) ಶಿವು, ವರ್ತಕರಾದ ರಮೇಶ್, ಚಂದ್ರು, ಲಕ್ಷ್ಮಣ ಮತ್ತು ಜಿ.ಜಿ. ಮೋಹನ್ ಕುಮಾರ್ ಹಾಜರಿದ್ದರು.
- ಕೆ.ಕೆ.ಎಸ್.