ಮಡಿಕೇರಿ, ಜ. ೧೭: ವೆಸ್ಟನ್ ಹಾಗೂ ಬ್ಯಾರಿ ವಾರಿಯರ್ಸ್ ಸ್ಪೋರ್ಟ್ಸ್ ಕ್ಲಬ್ನ ಸಂಯುಕ್ತಾಶ್ರಯದಲ್ಲಿ ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಆಯೋಜಿಸಿರುವ ೪ನೇ ಆವೃತ್ತಿಯ ಮಡಿಕೇರಿ ಪ್ರೀಮಿಯರ್ ಲೀಗ್(ಎಂಪಿಎಲ್) ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.
ಕ್ರಿಕೆಟ್ ಪಂದ್ಯಾಟಕ್ಕೆ ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲಪ್ಪ ಚಾಲನೆ ನೀಡಿ ಮಾತನಾಡಿ, ಕೊರೊನಾ ಹಿನ್ನೆಲೆ ಕ್ರೀಡಾಕೂಟ ಕುಂಠಿತವಾಗಿದೆ. ಆದರೆ, ಕ್ರೀಡಾಪಟುಗಳ ಸ್ಪರ್ಧಾಸ್ಫೂರ್ತಿ ಕಡಿಮೆಯಾಗಿಲ್ಲ. ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ. ಪಂದ್ಯಾಟ ಯಶಸ್ವಿಯಾಗಲಿ ಎಂದು ಹಾರೈಸಿದರು.
ವೆಸ್ಟನ್ ಹಾಗೂ ಬ್ಯಾರಿ ವಾರಿಯರ್ಸ್ ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷ ಕಬೀರ್ ಮಾತನಾಡಿ, ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ಪಂದ್ಯಾವಳಿ ನಡೆಯಲಿದೆ. ವಿಜೇತ ತಂಡಕ್ಕೆ ೧ ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ೫೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಗುವುದು. ಪಂದ್ಯಾವಳಿಗೆ ೧೦ ತಂಡಗಳು ಪೈಪೋಟಿ ನಡೆಸಲಿದೆ ಎಂದು ಕಬೀರ್ ಮಾಹಿತಿ ನೀಡಿದರು.
ವೆಸ್ಟನ್ ಹಾಗೂ ಬ್ಯಾರಿ ವಾರಿಯರ್ಸ್ ಸ್ಪೋರ್ಟ್ಸ್ ಕ್ಲಬ್ ಮತ್ತು ಪತ್ರಕರ್ತರ ನಡುವೆ ನಡೆದ ಪಂದ್ಯಾಟದಲ್ಲಿ ಟಾಸ್ ಗೆದ್ದ ಪ್ರೆಸ್ ಕ್ಲಬ್ ತಂಡ ನಿಗದಿತ ೫ ಓವರ್ನಲ್ಲಿ ೭೦ ರನ್ ಗಳಿಸಿತು. ಗುರಿಬೆನ್ನಟ್ಟಿದ ಆಯೋಜಕರ ತಂಡ ನಿಗದಿತ ಓವರ್ನಲ್ಲಿ ೪೮ ರನ್ ದಾಖಲಿಸಿ ೩೨ ರನ್ಗಳ ಅಂತರದಲ್ಲಿ ಸೋಲುಂಡಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಆದಿತ್ಯ ಕೆ.ಎ., ಕ್ರಿಕೆಟ್ ಕ್ಲಬ್ನ ಕಾರ್ಯದರ್ಶಿ ಇದ್ರೀಸ್, ಖಜಾಂಚಿ ಸಂಮ್ನನ್, ಸದಸ್ಯ ಹನೀಫ್ ಹಾಗೂ ತಂಡಗಳ ನಾಯಕರು, ಮಾಲೀಕರು ಉಪಸ್ಥಿತರಿದ್ದರು.