ಶ್ರೀಮಂಗಲ, ಜ. ೧೭: ಕೊಡವ ಭಾಷೆಯನ್ನು ಒಂದು ವಿಷಯವಾಗಿ ನೂತನವಾಗಿ ಪಠ್ಯ ಕ್ರಮದಲ್ಲಿ ತರುವ ನಿಟ್ಟಿನಲ್ಲಿ ಗುರುವಾರ ಪೊನ್ನಂಪೇಟೆ ಸಾಯಿಶಂಕರ್ ವಿದ್ಯಾಸಂಸ್ಥೆಯು ೫ನೇ ತರಗತಿಯಿಂದ ಪಾಠವನ್ನು ಅಧಿಕೃತವಾಗಿ ಪ್ರಾರಂಭಿಸಿತು.

ಕೊಡವ ಪಠ್ಯ ತರಗತಿಯನ್ನು ಪೊನ್ನಂಪೇಟೆಯ ಅಪ್ಪಚ್ಚಕವಿ ವಿದ್ಯಾಸಂಸ್ಥೆ ನಂತರ ಪಠ್ಯಕ್ರಮವನ್ನು ಜಾರಿಗೆ ತಂದ ಎರಡನೇ ಶಾಲೆ ಇದಾಗಿದೆ.

ಶಾಲೆಯ ಸಭಾಂಗಣದಲ್ಲಿ ಕೊಡವ ಪಠ್ಯ ಆರಂಭದ ಕಾರ್ಯಕ್ರಮವನ್ನು ವಿದ್ಯಾ ಸಂಸ್ಥೆ ಅಧ್ಯಕ್ಷ ಕೋಳೆರ ಝರು ಗಣಪತಿ ಉದ್ಘಾಟಿಸಿ ಮಾತನಾಡಿ, ಕೊಡವ ಪಠ್ಯಕ್ರಮವನ್ನು ಬಹಳ ಹಿಂದೆಯೇ ಶಾಲೆ-ಕಾಲೇಜಿನಲ್ಲಿ ತರಬೇಕಿತ್ತು. ನಮ್ಮ ಕಾಲದಲ್ಲಿ ಇಂತಹ ಅವಕಾಶ ಇರಲಿಲ್ಲ. ಆದರೆ, ನಮ್ಮ ವಿದ್ಯಾಸಂಸ್ಥೆಯಿAದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಅಲ್ಪಸಂಖ್ಯಾತ ಕೊಡವ ಭಾಷೆಯ ಬೆಳವಣಿಗೆಗೆ ಪೂರಕವಾಗಿ ಪಠ್ಯಕ್ರಮ ಆರಂಭಿಸುವ ಮೂಲಕ ಸದಾ ಉತ್ತೇಜನ ನೀಡುವುದಾಗಿ ಘೋಷಿಸಿದರು.

ಮುಖ್ಯ ಅತಿಥಿ ಕೊಡವ ಭಾಷಾ ಪಠ್ಯ ಅನುಷ್ಠಾನ ಸಮಿತಿ ಸಂಚಾಲಕ ಮಾಚಿಮಾಡ ಎಂ. ರವೀಂದ್ರ ಅವರು ಮಾತನಾಡಿ ಈಗಾಗಲೇ ಜಿಲ್ಲೆಯ ೯ ಶಾಲೆಗಳು ಸ್ವಯಂ ಪ್ರೇರಿತವಾಗಿ ಕೊಡವ ಭಾಷೆಯನ್ನು ತಮ್ಮ ಶಾಲೆಯಲ್ಲಿ ತರಗತಿ ಆರಂಭಿಸಲು ಮುಂದೆ ಬಂದಿದ್ದು, ಸ್ಥಳೀಯರು ತಾಯಿ ನುಡಿಯಲ್ಲಿಯೇ ಒಂದು ವಿಷಯವಾಗಿ ಪಠ್ಯ ಆರಂಭಿಸಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯ ಕಾಳಿಮಾಡ ಮೋಟಯ್ಯ ಅವರು ಮಾತನಾಡಿ, ಬಹಳ ಹಿಂದೆಯೇ ಪಠ್ಯಕ್ರಮದಲ್ಲಿ ಕೊಡವ ಭಾಷೆಯನ್ನು ತರುವ ನಿಟ್ಟಿನಲ್ಲಿ ಪುಸ್ತಕ ರಚನೆಯಾಗಿತ್ತು. ಆದರೆ ಕೋವಿಡ್ ಲಾಕ್‌ಡೌನ್ ನಿಂದ ವಿಳಂಬವಾಯಿತು. ೧ನೇ ತರಗತಿಯಿಂದ ಕನ್ನಡ ಭಾಷೆಯಲ್ಲಿ ಅಕ್ಷರಮಾಲೆ ಕಲಿತ ವಿದ್ಯಾರ್ಥಿಗಳಿಗೆ ೫ನೇ ತರಗತಿಯಲ್ಲಿ ಬರುವ ಐಚ್ಚಿಕ ಭಾಷೆಯ ವಿಷಯವಾದ ಕೊಡವ ಭಾಷೆಯ ತರಗತಿ ಕಷ್ಟವಾಗುವುದಿಲ್ಲ, ಕನ್ನಡ ಲಿಪಿಯನ್ನೇ ಬಳಸುವುದರಿಂದ ಸುಲಭವಾಗಲಿದೆ ಎಂದು ವಿವರಿಸಿದರು.

ವಿದ್ಯಾಸಂಸ್ಥೆಯ ಮುಖ್ಯೋಪಾದ್ಯಾಯಿನಿ ಕುಪ್ಪಂಡ ರೀನಾಗಣೇಶ್, ಕೊಡವ ಭಾಷಾ ಪಠ್ಯಕ್ರಮ ಶಿಕ್ಷಕಿ ಚೆಪ್ಪುಡಿರ ಭವಾನಿ ಹಾಜರಿದ್ದರು.