ಸೋಮವಾರಪೇಟೆ,ಜ.೧೭: ಕೋವಿಡ್ ವೈರಸ್ ವ್ಯಾಪಕವಾಗಿ ಹರಡದಂತೆ ಅಗತ್ಯ ಮುಂಜಾಗ್ರತೆ ಗಳನ್ನು ಕೈಗೊಳ್ಳಬೇಕು. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಟಾಸ್ಕ್ ಫೋರ್ಸ್ ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಲಸಿಕೆಗಳಿಂದ ಯಾರೂ ವಂಚಿತರಾಗ ಬಾರದು. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ ಜಾಗೃತಿ ಮೂಡಿಸಬೇಕು ಎಂದು ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾ.ಪಂ. ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಪಾಸಿಟಿವ್ ಪ್ರಕರಣಗಳು ಅಧಿಕವಾಗುತ್ತಿದ್ದು, ಸಾರ್ವಜನಿಕರು ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದರು.

ಪ್ರತಿ ವಾರ್ಡ್ಗಳಲ್ಲೂ ಸಮಿತಿಗಳ ರಚನೆಯಾಗಬೇಕು. ಗ್ರಾಮದಲ್ಲಿರುವ ಸೋಂಕಿತ ವ್ಯಕ್ತಿಗಳು ೭ ದಿನಗಳ ಕಾಲ ಹೊರಗೆ ಬಾರದಂತೆ ಎಚ್ಚರ ವಹಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಹಲವಷ್ಟು ಮಂದಿ ಮಾಸ್ಕ್ ಹಾಕದೇ ತಿರುಗಾಡುತ್ತಿದ್ದು, ಇವರಿಗೆ ದಂಡ ವಿಧಿಸಿ ಜಾಗೃತಿ ಮೂಡಿಸಬೇಕು. ಯಾರೂ ಸಹ ಲಸಿಕೆಯಿಂದ ಹೊರಗುಳಿಯಬಾರದು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯೊಂದಿಗೆ ಕಾರ್ಯಕ್ರಮ ರೂಪಿಸಬೇಕೆಂದು ಶಾಸಕರು ಸೂಚನೆ ನೀಡಿದರು.

ಕೊಡಗಿನ ಬಹುತೇಕ ಕಾಫಿ ತೋಟಗಳಲ್ಲಿ ಅಂತರರಾಜ್ಯ ಕಾರ್ಮಿಕರಿದ್ದು, ಇವರುಗಳಿಗೂ ವ್ಯಾಕ್ಸಿನ್ ನೀಡಬೇಕು. ತೋಟದ ಮನೆಗಳ ಸರ್ವೆ ನಡೆಸಿ ಲಸಿಕೆ ಪಡೆದಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ವಸತಿ ಶಾಲೆಗಳ ವಿದ್ಯಾರ್ಥಿಗಳನ್ನು ಅಸ್ಪತ್ರೆಗೆ ಕರೆತರದೇ ಶಾಲೆಗಳಲ್ಲೇ ಲಸಿಕೆ ನೀಡಲು ಕ್ರಮಕೈಗೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ಅವರಿಗೆ ನಿರ್ದೇಶನ ನೀಡಿದರು.

ಹೋಂ ಕ್ವಾರಂಟೈನ್‌ನಲ್ಲಿರುವ ಮಂದಿ ಹೊರಗಡೆ ಓಡಾಡುತ್ತಿದ್ದರೆ ಅವರನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ಕರೆದೊಯ್ಯಬೇಕು. ಪಟ್ಟಣದಲ್ಲಿರುವ ಖಾಸಗಿ ಕ್ಲಿನಿಕ್‌ಗಳಲ್ಲಿ ಸೋಂಕು ಲಕ್ಷಣಗಳಿರುವ ವ್ಯಕ್ತಿಗಳು ಬಂದರೆ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಡಬೇಕು. ಈ ಬಗ್ಗೆ ಕ್ಲಿನಿಕ್‌ಗಳಿಗೆ ನೋಟೀಸ್ ನೀಡುವಂತೆ ಶಾಸಕರು ಸೂಚಿಸಿದರು.

ತಾಲೂಕಿನಲ್ಲಿ ೨೩೯ ಸಕ್ರಿಯ ಪ್ರಕರಣಗಳಿದ್ದು, ೧೨ ಮಂದಿ ಅಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಭೀರ ಪ್ರಕರಣಗಳಿದ್ದರೆ ಮಾತ್ರ ಐಸಿಯು ಬಳಸಿಕೊಳ್ಳಲಾಗುವುದು ಎಂದು ಡಾ. ಶ್ರೀನಿವಾಸ್ ಮಾಹಿತಿ ನೀಡಿದರು.

ಪಟ್ಟಣದಲ್ಲಿ ಸೋಮವಾರದಂದು ನಡೆಯುವ ವಾರದ ಸಂತೆಯನ್ನು ಆರ್‌ಎಂಸಿ ಮಾರುಕಟ್ಟೆಗೆ ಸ್ಥಳಾಂತರಿ ಸುವಂತೆ ಮುಖ್ಯಾಧಿಕಾರಿ ನಾಚಪ್ಪ ಅವರಿಗೆ ಸೂಚಿಸಲಾಯಿತು. ಟಾಸ್ಕ್ಫೋರ್ಸ್ ಸಮಿತಿ ಸದಸ್ಯರು, ಮುಂಚೂಣಿ ಕಾರ್ಯಕರ್ತರು ಬೂಸ್ಟರ್ ಡೋಸ್ ಪಡೆಯಬೇಕು ಎಂದರು. ಸಭೆಯಲ್ಲಿ ಸೋಮವಾರಪೇಟೆ ತಾಲೂಕು ತಹಶಿಲ್ದಾರ್ ಗೋವಿಂದರಾಜು, ಕುಶಾಲನಗರ ತಹಶೀಲ್ದಾರ್ ಪ್ರಕಾಶ್, ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಮಹೇಶ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.