ಸುಂಟಿಕೊಪ್ಪ, ಜ. ೧೭: ಪ್ರತಿ ವರ್ಷ ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಬಡ ಈರ್ವರು ವಿದ್ಯಾರ್ಥಿಗಳಿಗೆ ಕಾಲೇಜಿನ ಶಿಕ್ಷಣ ಶುಲ್ಕ ಹಾಗೂ ಪದವಿ ಶಿಕ್ಷಣದ ವೆಚ್ಚವನ್ನು ಭರಿಸುವುದಾಗಿ ಶಾಲಾ ಮುಖ್ಯ ದ್ವಾರದ ದಾನಿಗಳಾದ ವಿಜಯ ಪ್ಲಾಂಟೇಶನ್ ಮಾಲೀಕ ಎಸ್.ಜಿ. ಶ್ರೀನಿವಾಸ್ ಕಾಲೇಜಿನ ಮುಖ್ಯ ದ್ವಾರ ಉದ್ಘಾಟಿಸಿ ಹೇಳಿದರು.

ಸರಕಾರಿ ಪದವಿಪೂರ್ವ ಕಾಲೇಜು ಮುಖ್ಯದ್ವಾರದ ಕಮಾನು ಉದ್ಘಾಟಿಸಿ ಮಾತನಾಡಿದ ಅವರು, ಈ ಕಾಲೇಜಿಗೆ ಬೇಕಾದ ಲ್ಯಾಬ್ ಕೊಠಡಿಯ ನಿರ್ಮಾಣಕ್ಕೆ ಸಹಾಯ ವನ್ನು ಮಾಡುವುದಾಗಿ ಭರವಸೆ ಯನ್ನು ವ್ಯಕ್ತಪಡಿಸಿದರು. ಪದವಿ ಪೂರ್ವ ಕಾಲೇಜಿನ ಡಿಡಿಪಿಯು ಪುಟ್ಟರಾಜು ಮಾತನಾಡಿ, ವಿದ್ಯಾರ್ಥಿ ಗಳ ಬಗ್ಗೆ ಕಾಳಜಿ ಮತ್ತು ನಂಬಿಕೆ ಯನ್ನು ಇಟ್ಟುಕೊಂಡಿರುವ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದು, ಅವರ ಪ್ರೇರಣೆಯಿಂದ ಕಲಿತು ಉತ್ತಮ ಫಲಿತಾಂಶವನ್ನು ತರುವಂತಾಗಲಿ. ಹಾಗೆಯೇ ಈ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಮೂವರು ಅತಿಥಿ ಉಪನ್ಯಾಸಕರಿಗೆ ಸರ್ಕಾರದ ಗೌರವ ಧನವನ್ನು ಕೂಡಲೇ ನೀಡುವ ಭರವಸೆಯನ್ನು ವ್ಯಕ್ತಪಡಿಸಿ ದರು. ಕಾಲೇಜಿನ ಪ್ರಾಚಾರ್ಯ ಪಿ.ಎಸ್. ಜಾನ್ ಪ್ರಾಸ್ತಾವಿಕವಾಗಿ ಕಾಲೇಜಿನ ಉಪನ್ಯಾಸಕರ ಕೊರತೆ, ವಿವಿಧ ಅಭಿವೃದ್ಧಿ ಕುಂದು ಕೊರತೆಗಳ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ವೈ.ಯಂ. ಕರುಂಬಯ್ಯ ವಹಿಸಿದ್ದರು. ಶಾಲಾ ಮುಖ್ಯ ದ್ವಾರದ ದಾನಿಗಳಾದ ವಿಜಯ ಪ್ಲಾಂಟೇಶನ್ ಮಾಲೀಕ ಎಸ್.ಜಿ. ಶ್ರೀನಿವಾಸ್ ಮತ್ತು ಪದವಿಪೂರ್ವ ಕಾಲೇಜಿನ ಡಿಡಿಪಿಯು ಪುಟ್ಟರಾಜು ಅವರನ್ನು ಸನ್ಮಾನಿಸಿದರು. ಅಭಿವೃದ್ಧಿ ಸಮಿತಿ ಖಜಾಂಚಿ ರಮೇಶ್ ಪಿಳ್ಳೆ, ಉಪನ್ಯಾಸಕರಾದ ಪಿಲಿಫ್‌ವಾಸ್, ಮಹೇಶ್, ಈಶ, ಕವಿತಾ ಭಕ್ತ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಶಶಾಂತ್, ಮಕ್ಕಳು ಸೇರಿದಂತೆ ಇತರರು ಇದ್ದರು.