ಸೋಮವಾರಪೇಟೆ,ಜ.೧೭: ಮೋಬಿಯಸ್ ಫೌಂಡೇಷನ್ ವತಿಯಿಂದ ಸೋಮವಾರಪೇಟೆ, ಶನಿವಾರಸಂತೆ ಹಾಗೂ ಕುಶಾಲನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಿಗೆ ರೂ. ೨೩ ಲಕ್ಷ ವೆಚ್ಚದಲ್ಲಿ ‘ಮಾಡ್ಯುಲರ್ ಆಕ್ಸಿಜನ್ ಯೂನಿಟ್’ಗಳನ್ನು ನೀಡಲಾಗುತ್ತಿದ್ದು, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ೫ ಯೂನಿಟ್‌ಗಳನ್ನು ಹಸ್ತಾಂತರಿಸಲಾಯಿತು.
ಇಲ್ಲಿನ ಸರ್ಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಈ ಯೂನಿಟ್‌ಗಳನ್ನು ಅಳವಡಿಸಲಾಗಿದ್ದು, ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್, ಉಪವಿಭಾಗಾಧಿ ಕಾರಿ ಈಶ್ವರ್‌ಕುಮಾರ್ ಅವರುಗಳು ಘಟಕಕ್ಕೆ ಚಾಲನೆ ನೀಡಿದರು. ರೂ. ೨೩ ಲಕ್ಷ ವೆಚ್ಚದಲ್ಲಿ ಒಟ್ಟು ೧೫ ಘಟಕಗಳನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಿಗೆ ನೀಡಲಾಗುತ್ತಿದೆ ಎಂದು ಫೌಂಡೇಷನ್‌ನ ಪ್ರಮುಖರಾದ ಮಧು ಬೋಪಣ್ಣ ತಿಳಿಸಿದರು.
ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಈಗಾಗಲೇ ಬೃಹತ್ ಆಮ್ಲಜನಕ ಘಟಕ ನಿರ್ಮಾಣಗೊಂಡಿದೆ. ಆಕಸ್ಮಿಕವಾಗಿ ಘಟಕದಲ್ಲಿ ತಾಂತ್ರಿಕ ಸಮಸ್ಯೆ ಕಂಡುಬAದರೆ ಈ ಘಟಕಗಳನ್ನು ತಕ್ಷಣಕ್ಕೆ ಬಳಸಿಕೊಳ್ಳಬಹುದಾಗಿದೆ. ಕಡಿಮೆ ನಿರ್ವಹಣಾ ವೆಚ್ಚದಲ್ಲಿ ರೋಗಿಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸಬಹುದಾಗಿದೆ. ಒಂದು ನಿಮಿಷದಲ್ಲಿ ೧೦ ಲೀಟರ್ ಆಮ್ಲಜನಕ ಉತ್ಪಾದಿಸುವ ಸಾಮರ್ಥಗಳನ್ನು ಈ ಘಟಕ ಹೊಂದಿದೆ ಎಂದು ಫೌಂಡೇಷನ್‌ನ ಯೋಜನಾ ಮುಖ್ಯಸ್ಥ ಕರ್ನಲ್ ಸಂತೋಷ್‌ಕುಮಾರ್ ಮಾಹಿತಿ ಒದಗಿಸಿದರು.
ಮಾಡ್ಯುಲರ್ ಆಕ್ಸಿಜನ್ ಯೂನಿಟ್‌ಗಳನ್ನು ನೀಡುತ್ತಿದ್ದು, ಕುಶಾಲನಗರ ಆಸ್ಪತ್ರೆಗೆ ತಾ. ೧೮ರಂದು (ಇಂದು) ಹಸ್ತಾಂತರಿಸಲಾಗುವುದು. ಕುಶಾಲನಗರದಲ್ಲಿ ೪೫ ಕೆ.ವಿ. ಸಾಮರ್ಥ್ಯದ ಜನರೇಟರ್‌ನ್ನು ಸಂಸ್ಥೆಯ ವತಿಯಿಂದ ಅಳವಡಿಸಲಾಗಿದೆ ಎಂದು ಮಧು ಬೋಪಣ್ಣ ತಿಳಿಸಿದರು.
ಈ ಸಂದರ್ಭ ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ವೈದ್ಯರಾದ ಸತೀಶ್‌ಕುಮಾರ್, ಜಿ.ಪಂ. ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಪ.ಪಂ. ಸದಸ್ಯ ಬಿ.ಆರ್. ಮಹೇಶ್, ನಾಮನಿರ್ದೇಶನ ಸದಸ್ಯ ಎಸ್.ಆರ್. ಸೋಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.