ಪೊನ್ನಂಪೇಟೆ, ಜ.೧೭: ಎಸಿಬಿ ಬಲೆಗೆ ಬಿದ್ದು ಅಮಾನತ್ತಾಗಿರುವ ಅಧಿಕಾರಿಯೊಬ್ಬರನ್ನು ಮತ್ತೆ ಜಿಲ್ಲೆಗೆ ಕರೆತರಲು ಶಾಸಕ ಕೆ.ಜಿ. ಬೋಪಯ್ಯ ಅವರು ಪ್ರಯತ್ನಿಸುತ್ತಿರುವುದು ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರ ಆಪಟ್ಟೀರ ಎಸ್. ಟಾಟು ಮೊಣ್ಣಪ್ಪ ಆಕ್ಷೇಪಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯ ಜಿ.ಪಂ. ಇಂಜಿನಿಯರಿAಗ್ ವಿಭಾಗದ ಕಾರ್ಯಪಾಲಕ ಅಭಿಯಂತರರಾಗಿದ್ದ ಶ್ರೀಕಂಠಯ್ಯ ಅವರು ಕಳೆದ ಕೆಲ ತಿಂಗಳ ಹಿಂದೆ ವ್ಯಕ್ತಿಯೊಬ್ಬರಿಂದ ರೂ. ೪.೭೫ ಲಕ್ಷ ಮೊತ್ತದ ಹಣ ಲಂಚ ಪಡೆದ ಆರೋಪಕ್ಕಾಗಿ ಎಸಿಬಿ ತಂಡದಿAದ ಬಂಧನಕ್ಕೆ ಒಳಗಾಗಿದ್ದರು. ಈ ಕಾರಣದಿಂದ ಸೇವೆಯಿಂದ ಅಮಾನತ್ತಾಗಿದ್ದರು. ಇದೇ ಅಧಿಕಾರಿ ಕೊಡಗು ಜಿಲ್ಲೆಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿದ್ದ ಸಂದರ್ಭದಲ್ಲಿ ಮಳೆಹಾನಿ ಪರಿಹಾರದ ಅನುದಾನವನ್ನು ಖಾಸಗಿ ಬ್ಯಾಂಕ್‌ನಲ್ಲಿರಿಸಿದ ಆರೋಪದ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತ್ತಾಗಿದ್ದರು. ಆದರೂ ಈ ಅಧಿಕಾರಿಯನ್ನು ಜಿಲ್ಲೆಗೆ ಮತ್ತೆ ಕರೆತರಲು ಶಾಸಕ ಕೆ.ಜಿ. ಬೋಪಯ್ಯ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಪತ್ರ ಬರೆದಿರುವುದು ತೀವ್ರ ಆಶ್ಚರ್ಯ ಮೂಡಿಸಿದೆ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.
ಈ ಹಿಂದೆ ಮಾಕುಟ್ಟ ಗಡಿಯ ತಪಾಸಣಾ ಗೇಟ್‌ನಲ್ಲಿ ಕೆಲ ಇಲಾಖೆಯ ಸಿಬ್ಬಂದಿಗಳು ರೂ.೧೦೦೦ ಹಣ ಲಂಚ ಪಡೆಯುತ್ತಿದ್ದಾರೆ ಎಂಬ ವಿಷಯವನ್ನು ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಿದ ಶಾಸಕ ಕೆ. ಜಿ. ಬೋಪಯ್ಯ ಈ ಕುರಿತು ಗಂಭೀರ ಆರೋಪ ಮಾಡಿದ್ದರು. ಆದರೆ ರೂ ೪.೭೫ ಲಕ್ಷ ಬೃಹತ್ ಮೊತ್ತದ ಲಂಚ ಪ್ರಕರಣದ ಆರೋಪಿ ಶ್ರೀಕಂಠಯ್ಯ ಅವರನ್ನು ಜಿಲ್ಲೆಗೆ ಮತ್ತೆ ಕರೆತರಲು ಶಾಸಕರು ನಡೆಸುತ್ತಿರುವ ಪ್ರಯತ್ನದ ಹಿಂದಿರುವ ರಹಸ್ಯವೇನು ಎಂಬುದು ಬಹಿರಂಗವಾಗಬೇಕಿದೆ. ಈ ಕುರಿತು ಈಗಾಗಲೇ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿದ್ದರೂ ಶಾಸಕರು ಮೌನ ವಹಿಸಿರುವುದು ಏಕೆ ಎಂದು ಪ್ರಶ್ನಿಸಿರುವ ಟಾಟು ಮೊಣ್ಣಪ್ಪ ಅವರು, ಘಟನೆಯ ಸತ್ಯಾಸತ್ಯತೆಯನ್ನು ಸಾರ್ವಜನಿಕರಿಗೆ ತಿಳಿಸುವ ಹೊಣೆಗಾರಿಕೆಯೂ ಶಾಸಕರ ಮೇಲಿದೆ ಎಂಬುದನ್ನು ಮರೆಯಬಾರದು ಎಂದು ಅಭಿಪ್ರಾಯಪಟ್ಟರು.
ಕಳೆದ ಕೆಲವು ಸಮಯಗಳಿಂದ ಕಂದಾಯ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರದ ಹಗರಣಗಳು ನಡೆಯುತ್ತಿದೆ. ಈ ಕುರಿತು ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಪಕ್ಷ, ವಿವಿಧ ಹಗರಣಗಳ ಸಂಪೂರ್ಣ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಪಡೆದುಕೊಂಡು ಸಂಬAಧಿತರ ವಿರುದ್ಧ ಹೋರಾಟ ರೂಪಿಸಲಿದೆ ಎಂದು ಮಾಹಿತಿ ನೀಡಿದರು.
ಶ್ರೀಕಂಠಯ್ಯ ಅವರನ್ನು ಜಿಲ್ಲೆಗೆ ಕರೆತರುವ ಪ್ರಯತ್ನವನ್ನು ಶಾಸಕರು ಕೂಡಲೇ ಕೈಬಿಡಬೇಕು. ಯಾವುದೇ ಕಾರಣಕ್ಕೂ ಶ್ರೀಕಂಠಯ್ಯ ಅವರು ಮತ್ತೆ ಜಿಲ್ಲೆಗೆ ಬಂದು ಸೇವೆ ಸಲ್ಲಿಸುವುದು ಬೇಡ. ಒಂದು ವೇಳೆ ಶಾಸಕರು ಅವರನ್ನು ಮತ್ತೆ ಜಿಲ್ಲೆಗೆ ಕರೆತರುವ ಪ್ರಯತ್ನ ನಡೆಸಿದರೆ, ಕಾಂಗ್ರೆಸ್ ಪಕ್ಷದ ವತಿಯಿಂದ ಕಾನೂನು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.