ಕಣಿವೆ, ಜ. ೧೭: ಕೂಡಿಗೆಯ ಸರ್ಕಾರಿ ಕೃಷಿ ಫಾರಂಗೆ ತೆರಳುವ ರಸ್ತೆ ಸಂಪೂರ್ಣವಾಗಿ ಗುಂಡಿ ಬಿದ್ದಿದ್ದು ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಕಿರಿಕಿರಿಯಾಗುತ್ತಿದೆ.

ಸುಮಾರು ೨೫ ವರ್ಷಗಳಿಗೂ ಮುನ್ನ ನಿರ್ಮಿಸಿದ ಈ ರಸ್ತೆ ಗುಂಡಿ ಬಿದ್ದು ದಶಕಗಳೇ ಕಳೆದಿವೆ. ಆದಾಗ್ಯೂ ಜಿಲ್ಲಾಡಳಿತ ಈ ರಸ್ತೆಯ ಸುಸ್ಥಿತಿಗೆ ಮುಂದಾಗಿಲ್ಲ ಎಂಬುದು ಇಲ್ಲಿನ ನಿವಾಸಿಗಳ ದೂರಾಗಿದೆ.

ಈ ಕೃಷಿ ಫಾರಂ ಒಳಗೆ ಕೇಂದ್ರ ಸರ್ಕಾರದ ಪ್ರಾಯೋಜಕತ್ವದ ಸೈನಿಕ ಶಾಲೆ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕ್ರೀಡಾ ಶಾಲೆ, ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸರ್ಕಾರಿ ಪಿಯು ಕಾಲೇಜು, ಹಂದಿ, ಕುರಿ, ಕೋಳಿ ಸಾಕಾಣಿಕೆ ಕೇಂದ್ರ, ಮಣ್ಣು ಪರೀಕ್ಷಾ ಕೇಂದ್ರ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಕೃಷಿ ಕೇಂದ್ರ, ಕಾರ್ಪೋರೇಷನ್ ಬ್ಯಾಂಕಿನ ತರಬೇತಿ ಸಂಸ್ಥೆ, ತೋಟಗಾರಿಕಾ ಕೇಂದ್ರ ಹೀಗೆ ಸರ್ಕಾರದ ೧೭ಕ್ಕೂ ಅಧಿಕ ಇಲಾಖೆಗಳು ಇವೆ.

ಇಲ್ಲಿಗೆ ದಿನಂಪ್ರತೀ ಸರ್ಕಾರದ ಹಲವು ಅಧಿಕಾರಿಗಳ ವಾಹನಗಳು ಧಾವಿಸುತ್ತವೆ. ಅಲ್ಲದೇ ವಿವಿಧ ಶಾಲಾ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ತೆರಳಬೇಕಿದೆ. ಆದರೆ ಕಿತ್ತು ನಿಂತ ರಸ್ತೆಯಲ್ಲಿನ ಗುಂಡಿಗಳ ಒಳಗೆ ಕಾಲು ಎಡವಿಕೊಂಡು ಅನೇಕ ವಿದ್ಯಾರ್ಥಿಗಳು ಬಿದ್ದು ಗಾಯಗೊಂಡಿದ್ದಾರೆ. ಅನೇಕ ವಾಹನಗಳು ಜಖಂ ಗೊಂಡಿವೆ. ಆದ್ದರಿಂದ ಈ ರಸ್ತೆಯನ್ನು ಕೂಡಲೇ ಅಭಿವೃದ್ಧಿಗೊಳಿಸಲು ಕ್ಷೇತ್ರದ ಶಾಸಕರು ಮುಂದಾಗಬೇಕು ಎಂದು ಸ್ಥಳೀಯ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.