ಭಾಗಮಂಡಲ, ಜ. ೧೬: ತಲಕಾವೇರಿಯಲ್ಲಿ ನಿರ್ಮಿಸಲಾದ ಏಳು ಅನಧಿಕೃತ ಅಂಗಡಿಗಳನ್ನು ಪಂಚಾಯಿತಿ ಸದಸ್ಯರು ಹಾಗೂ ಪೊಲೀಸ್ ಸಿಬ್ಬಂದಿಗಳು ತೆರವು ಮಾಡಿದರು. ತಲಕಾವೇರಿಯಲ್ಲಿ ಅಕ್ರಮವಾಗಿ ನಿರ್ಮಿಸಲಾದ ಅಂಗಡಿ ಮಳಿಗೆಗಳನ್ನು ತೆರವುಗೊಳಿಸುವಂತೆ ಸೂಚಿಸಿ ನೋಟೀಸ್ ನೀಡಲಾಗಿತ್ತು. ಬಳಿಕ ಪಂಚಾಯಿತಿ ಸದಸ್ಯರು ಹಾಗೂ ಪೊಲೀಸ್ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಅಂಗಡಿಗಳನ್ನು ತೆರವುಗೊಳಿಸಿದರು. ಮಹಿಳೆ ಯೋರ್ವಳು ತೀವ್ರ ಪ್ರತಿರೋಧ ಒಡ್ಡಿದ ಬಳಿಕ ಕಾನೂನು ಪ್ರಕಾರ ಅಂಗಡಿಯ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದರು.

ತಲಕಾವೇರಿಯಲ್ಲಿ ಹಲವು ವರ್ಷಗಳಿಂದ ಕ್ಷೇತ್ರದ ತಳಭಾಗದಲ್ಲಿ ಟೀ ಅಂಗಡಿ ಹಾಗೂ ಇತರ ಅಂಗಡಿಗಳು ನಡೆಯುತ್ತಿದ್ದು ಇತ್ತೀಚೆಗೆ ಪಾರ್ಕಿಂಗ್ ಪ್ರದೇಶದಲ್ಲಿ ಅಂಗಡಿ ಮಳಿಗೆಗಳನ್ನು ಸ್ಥಳಾಂತರಿಸಲು ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಕೆಳಭಾಗಕ್ಕೆ ಸ್ಥಳಾಂತರಿಸಲಾಯಿತು. ಗ್ರಾಮ ಪಂಚಾಯಿತಿಯಿAದ ಅಂಗಡಿ ಮಳಿಗೆಗಳನ್ನು ನಿರ್ಮಿಸಿ ಕೊಡಲಾಯಿತು.

ಆದರೆ ಗೇಟ್ ಪಕ್ಕದಲ್ಲಿ ಮಹಿಳೆಯೊಬ್ಬಳು ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಗುಡಿಸಲು ಕಟ್ಟಿ ಅಂಗಡಿ ನಿರ್ಮಿಸಿಕೊಂಡು ಬಂದಿದ್ದು, ಈ ಬಗ್ಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅಂಗಡಿಯನ್ನು ತೆರವುಗೊಳಿಸುವಂತೆ ಮಹಿಳೆಗೆ ಗ್ರಾಮ ಪಂಚಾಯಿತಿಯಿAದ ಮೂರು ಬಾರಿ ನೋಟೀಸ್ ಜಾರಿ ಮಾಡಲಾಗಿತ್ತು. ಗ್ರಾಮ ಪಂಚಾಯಿತಿ ನೋಟೀಸ್ ನೀಡಿದ್ದಲ್ಲದೆ ಪಂಚಾಯಿತಿ ವತಿಯಿಂದ ನಿರ್ಮಿಸಲಾದ ಮಳಿಗೆಯೊಂದರಲ್ಲಿ ಅಂಗಡಿ ನಡೆಸುವಂತೆ ಮನವಿ ಮಾಡಿತ್ತು. ಯಾರ ಮನವಿಗೂ ಕಿವಿಗೊಡದೆ ಮಹಿಳೆ ಅಂಗಡಿಯಲ್ಲಿ ವಹಿವಾಟು ಮುಂದುವರಿಸಿದ್ದರು. ಇದರೊಂದಿಗೆ ಇತರ ಆರು ಅನಧಿಕೃತ ಅಂಗಡಿಗಳು ತಲೆಎತ್ತಿದವು. ಇದೀಗ ಅಂಗಡಿಗಳನ್ನು ತೆರವುಗೊಳಿಸಿದ್ದು, ಮಹಿಳಾ ವ್ಯಾಪಾರಿಗೆ ಪಂಚಾಯಿತಿ ವತಿಯಿಂದ ಮಾರ್ಚ್ತನಕ ಉಚಿತವಾಗಿ ಅಂಗಡಿ ಮಳಿಗೆಯನ್ನು ನೀಡಲಾಗಿದೆ.

ಅನಧಿಕೃತ ಅಂಗಡಿಯ ಬಗ್ಗೆ ಹಿಂದೆ ‘ಶಕ್ತಿ’ ವರದಿ ಮಾಡಿತ್ತು. ತೆರವುಗೊಳಿಸುವ ಸಂದರ್ಭದಲ್ಲಿ ಠಾಣಾ ಅಧಿಕಾರಿ ಮಹದೇವ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದ ಹಾಗೂ ಪಂಚಾಯಿತಿ ಸದಸ್ಯರುಗಳು ಉಪಸ್ಥಿತರಿದ್ದರು.

-ಸುನಿಲ್