q ಗ್ರಾಮೀಣ ಪ್ರತಿಭೆಯ ಸಾಧನೆ

q ಹಲವು ಆವಿಷ್ಕಾರ ಮಾಡಿರುವ ಆಕಾಶ್

ಸಾಮಾನ್ಯವಾಗಿ ಆಧುನಿಕ ವಾಹನಗಳ ವೈಭವ ನೋಡಿ ಇದು ನಮಗೂ ಸಿಕ್ಕಿದ್ದರೆ ಎಂಬ ಭಾವನೆ ಬರುವುದು ಸಹಜ. ಆದರೆ, ಇಂಥ ವಾಹನಗಳ ದುಬಾರಿ ಬೆಲೆ ಕೇಳಿದಾಗ ಇದನ್ನು ಖರೀದಿಸಲು ಸಾಧ್ಯವಾಗುವುದಿಲ್ಲ ಎಂಬ ಬೇಸರ ಕೂಡ ಸಹಜವೇ.

ಹೀಗಿದ್ದರೂ, ಕೊಡಗಿನ ಗ್ರಾಮೀಣ ಯುವಕನೋರ್ವ ನಮ್ಮಲ್ಲೇ ದೊರಕುವ ಉಪಕರಣ ಬಳಸಿ ಆಧುನಿಕ ವಾಹನಗಳನ್ನು ತಯಾರಿಸಲು ಸಾಧ್ಯ ಎಂಬುದನ್ನು ನಿರೂಪಿಸಿದ್ದಾರೆ. ಈ ಮೂಲಕ ದೇಶದಲ್ಲಿ ಇಂದಿನ ಪ್ರಗತಿ ಮಂತ್ರವಾದ ಆತ್ಮನಿರ್ಭರ್‌ಗೆ ತಮ್ಮದೇ ಕೊಡುಗೆ ನೀಡಿದ್ದಾರೆ.

ಕೊಡಗಿನ ಹೆಸರಾಂತ ಛಾಯಾಗ್ರಾಹಕ ಎನ್.ಎಂ. ಕುಮಾರ್ - ಗಾಯತ್ರಿ ದಂಪತಿ ಪುತ್ರ ಬಿಳಿಗೇರಿ ಗ್ರಾಮ ನಿವಾಸಿ ಎನ್.ಕೆ. ಆಕಾಶ್ ವಿನೂತನ ಪ್ರಯೋಗದಲ್ಲಿ ನಿರತರಾಗಿರುವ ಯುವಕ. ಆಕಾಶ್ ಇದೀಗ ಹೊಸದ್ದೊಂದು ಬೈಕ್‌ಅನ್ನು ತಮ್ಮದೇ ತಂತ್ರಜ್ಞಾನ ಬಳಸಿ ತಯಾರಿಸಿದ್ದಾರೆ.

ಆಕಾಶ್ ಕಳೆದ ೧೦ ವರ್ಷಗಳಲ್ಲಿ ಬೈಕ್ ಸೇರಿದಂತೆ ೨೩ ಕೃಷಿ ಯಂತ್ರಗಳನ್ನು ತಯಾರಿಸಿದ ಹಿರಿಮೆಗೆ ಕಾರಣರಾಗಿದ್ದಾರೆ. ಬಾಲ್ಯದಲ್ಲಿಯೇ ಆಕಾಶ್‌ಗೆ ವಾಹನ ತಯಾರಿಕೆಯಲ್ಲಿ ಆಸಕ್ತಿ. ಬೇರೆ ಬೇರೆ ವಾಹನ ಕಂಡು ತನಗೂ ಇಂತಹ ವಾಹನ ತಯಾರಿಸಬೇಕೆಂಬ ತುಡಿತ ಇತ್ತು. ಇದೀಗ ಬಾಲ್ಯದ ಕನಸು ನನಸು ಮಾಡಲೆಂಬAತೆ ಆಕಾಶ್ ಬೈಕ್ ತಯಾರಿಕೆಯಲ್ಲಿ ೧ ದಶಕದಿಂದ ಸಕ್ರಿಯರಾಗಿದ್ದಾರೆ.

ಐಟಿಐ ಪದವೀಧರರಾಗಿರುವ ಆಕಾಶ್ ಬೇರೆ ಬೇರೆ ಖಾಸಗಿ ಕಂಪೆನಿಗಳಲ್ಲಿ ಉದ್ಯೋಗದಲ್ಲಿದ್ದು ನಂತರ ತನ್ನದೇ ಚಿಂತನೆಯ ಕನಸುಗಳನ್ನು ನನಸಾಗಿಸುವ ಉದ್ದೇಶದಿಂದ ಬಿಳಿಗೇರಿಗೆ ಮರಳಿ, ಗ್ರಾಮೀಣ ಪ್ರದೇಶದಲ್ಲಿಯೇ ವಿನೂತನ ಬೈಕ್, ಯಂತ್ರಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

೨೦೧೨ ರಲ್ಲಿ ಗೋಕಾರ್ಟ್ ಎಂಬ ಕೃಷಿ ಬಳಕೆಯಾಗಿನ ವಾಹನ ತಯಾರಿಸಿದ ಆಕಾಶ್ ಇದರ ಯಶಸ್ಸಿನಿಂದ ಪ್ರೇರಿತರಾಗಿ ಮರುವರ್ಷವೇ ಮಿನಿ ಬೈಕ್ ತಯಾರಿಸಿದರು. ಇದಕ್ಕೂ ಉತ್ತಮ ಸ್ಪಂದನ ದೊರಕಿದಾಗ ಬೈಕ್ ತಯಾರಿಯಲ್ಲಿ ಆಕಾಶ್‌ಗೆ ಆಸಕ್ತಿ ಹೆಚ್ಚಾಗ ತೊಡಗಿತು.

ಈವರೆಗೆ ೬ ಬೈಕ್‌ಗಳನ್ನು ಆಕಾಶ್ ತಯಾರಿಸಿದ್ದು, ಜಿಲ್ಲೆಯ ಹೋಂಸ್ಟೇ, ರೆಸಾರ್ಟ್ಗಳಲ್ಲಿ ಪ್ರವಾಸಿಗರ ಸಂಚಾರದ ಖಾಸಗಿ ಉದ್ದೇಶಕ್ಕಾಗಿ ಇಂತಹ ಬೈಕ್ ಬಳಸಲ್ಪಡುತ್ತಿದೆ. ಹೊರಗಿನ ಉಪಕರಣಗಳಿಗಿಂತ ಭಾರತದಲ್ಲಿಯೇ ತಯಾರಾದ, ಸ್ಥಳೀಯವಾಗಿ ದೊರಕುವ ಉಪಕರಣಗಳನ್ನು ಬಳಸಿಯೇ ಬೈಕ್ ಸೇರಿದಂತೆ ಯಂತ್ರೋಪಕರಣಗಳ ತಯಾರಿಕೆಯಲ್ಲಿ ಆಕಾಶ್ ಪರಿಣಿತರಾಗಿದ್ದಾರೆ.

ಆಕಾಶ್ ತಯಾರಿಕೆಯ ಕೃಷಿ ಬಳಕೆಯ ಯಂತ್ರಗಳಾದ ಬಗ್ಗಿ, ಕಾಫಿ, ಭತ್ತ, ಕರಿಮೆಣಸು ಸಂಸ್ಕರಣೆಯ ಯಂತ್ರಗಳು, ತೋಟಗಳಲ್ಲಿ ಲೋಡ್ ಸಾಗಿಸುವ ಟ್ರಾಲಿ, ಸಣ್ಣ ಕೃಷಿಕರಿಗೆ ಉಪಯೋಗವಾಗುವ ವಿವಿಧ ಯಂತ್ರೋಪಕರಣಗಳು ವೀರಾಜಪೇಟೆ, ಚೆಯ್ಯಂಡಾಣೆ. ಕುಶಾಲನಗರ., ಸುಳ್ಯ, ಪುತ್ತೂರುಗಳಲ್ಲಿ ಮಾರಾಟವಾಗಿವೆ

ಈಗ ಆಕಾಶ್ ಹೊಸದಾಗಿ ತಯಾರಿಸಿದ ೧೦೦ ಸಿಸಿ ಸಾಮರ್ಥ್ಯದ ಬೈಕ್ ೧೧ ಲೀಟರ್ ಪೆಟ್ರೋಲ್ ಸಂಗ್ರಹ ಸಾಮರ್ಥ್ಯದ ಟ್ಯಾಂಕ್ ಹೊಂದಿದ್ದು, ಪ್ರತೀ ಲೀಟರ್‌ಗೆ ೫೫ ಲೀಟರ್ ಮೈಲೇಜ್ ನೀಡುತ್ತದೆ. ಈ ಬೈಕ್‌ಗೆ ಬೇರೆ ಬೇರೆ ಸ್ಥಳಗಳ ಗುಜರಿಯಿಂದ ಉಪಕರಣ ತಂದು ಜೋಡಿಸಲಾಗಿದೆ. ೨೦ ದಿನಗಳಲ್ಲಿ ಹೊಸ ಬೈಕ್ ತಯಾರಿಸಿದ್ದು ವಿಶೇಷವಾಗಿದೆ. ಮಾಮೂಲಿ ಬೈಕ್‌ನಷ್ಟೇ ವೇಗವಾಗಿ ಸಾಗುವ ಈ ಬೈಕ್‌ನಲ್ಲಿ ಸವಾರ ಮಾತ್ರ ಕೂರಬಹುದಾಗಿದೆ. ಅಂದಾಜು ವೆಚ್ಚ ೪೦ ಸಾವಿರ ರೂಪಾಯಿಗಳಾಗಿದೆ.

ಮುಂದಿನ ದಿನಗಳಲ್ಲಿ ಬೈಕ್ ಶೋರೂಮ್ ಮೂಲಕ ಹೊಸ ಪ್ರಯೋಗಗಳನ್ನು ಜನರಿಗೆ ಪರಿಚಯಿಸಬೇಕೆಂಬ ತುಡಿತವಿದೆ. ತಾನು ತಯಾರಿಸಿದ ಬೈಕ್ ಅಥವಾ ಯಂತ್ರಗಳನ್ನು ಪೇಟೆಂಟ್ ಮಾಡಿ ದೊಡ್ಡ ಉತ್ಪನ್ನವಾಗಿಸುವ ಯೋಜನೆ ಆಕಾಶ್ ಗೆ ಇಲ್ಲ. ಇದಕ್ಕೆ ಸಾಕಷ್ಟು ಆರ್ಥಿಕತೆಯ ಅಗತ್ಯವಿದೆ. ಇದರಿಂದಾಗಿ ತನ್ನ ಕನಸುಗಳಿಗೆ ಧಕ್ಕೆಯಾದಿತು. ಹೀಗಾಗಿ ಮನೆಯಲ್ಲಿಯೇ ವಿವಿಧ ಬೈಕ್, ಯಂತ್ರಗಳನ್ನು ಖಾಸಗಿ ಬಳಕೆಗಾಗಿ ಅಗತ್ಯ ಇರುವವರಿಗೆ ತಯಾರಿಸುವುದರಲ್ಲಿಯೇ ತನ್ನ ಮನಸ್ಸಿನ ತೃಪ್ತಿಯಿದೆ ಎಂದು ಆಕಾಶ್ ಹೇಳುತ್ತಾರೆ. ಬೈಕ್ ಬಗ್ಗೆ ಪ್ಯಾಷನ್ ಹೊಂದಿದವರು, ಕಡಿಮೆ ವೆಚ್ಚದ ವಾಹನಗಳನ್ನು ಬಯಸುವವರನ್ನೇ ಮನಸ್ಸಿನಲ್ಲಿಟ್ಟುಕೊಂಡು ಬೈಕ್ ತಯಾರಿಕೆಯಲ್ಲಿ ಭವಿಷ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದೂ ಆಕಾಶ್ ತಿಳಿಸಿದರಲ್ಲದೇ, ಇದು ತಾನು ಇಷ್ಟಪಟ್ಟು ಮಾಡುತ್ತಿರುವ ಕೆಲಸ. ಲಾಭಕ್ಕಿಂತ ಹೆಚ್ಚಾಗಿ ಹೊಸಹೊಸ ಆವಿಷ್ಕಾರಗಳಿಗೆ ತನ್ನ ಪ್ರಯೋಗಾತ್ಮಕ ಕೆಲಸ ಕಾರಣವಾಗುತ್ತಿರುವ ಸಂತೋಷವಿದೆ ಎಂದೂ ಹೇಳಿದರು.

ಬಿಳಿಗೇರಿಯ ನೀರ್ಕಜೆ ಮನೆತನದ ಕಾಫಿ ತೋಟಗಳ ಮಧ್ಯೆಯ ಸುಂದರ ಮನೆಯಲ್ಲಿ ಆಕಾಶ್ ಗ್ಯಾರೇಜ್ ಹೊಸ ಪ್ರಯೋಗಗಳಿಗೆ ತೆರೆದುಕೊಂಡಿದೆ. ಇಂಥ ವಿನೂತನ ಕಾರ್ಯಗಳ ಬಗ್ಗೆ ಆಕಾಶದೆತ್ತರದ ಕನಸು ಹೊಂದಿರುವ ಆಕಾಶ್ ಕೊಡಗಿನ ಹೆಮ್ಮೆಯ ಕ್ರಿಯಾಶೀಲ ಯುವ ತಂತ್ರಜ್ಞನೇ ಹೌದು.

- ಅನಿಲ್ ಎಚ್.ಟಿ.