ಸಿದ್ದಾಪುರ, ಜ. ೧೪: ಕಾರ್ಮಿಕನ ಕುಟುಂಬದ ಮೇಲೆ ಮಾಲೀಕರು ಶೋಷಣೆ ಮಾಡಿದ ಘಟನೆ ಸಂಬAಧಿಸಿ ತೋಟದ ಮಾಲೀಕರು ಸೇರಿ ನಾಲ್ವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಾಲಿಬೆಟ್ಟ ಸಮೀಪದ ಹೊಸೂರು ಗ್ರಾಮದ ಖಾಸಗಿ ಕಾಫಿತೋಟದಲ್ಲಿ ಕಳೆದ ೨೫ ವರ್ಷಗಳಿಂದ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಬ್ರಮಣಿ ಎಂಬವರಿಗೆ ತೋಟದ ಮಾಲೀಕರು ಹಣ ನೀಡದೆ ಶೋಷಣೆ ಮಾಡಿದ್ದಾರೆ ಎಂದು ಹಾಗೂ ಚಾಲಕನ ಕುಟುಂಬ ವಾಸ ಮಾಡಿಕೊಂಡಿದ್ದ ವಸತಿಗೃಹದ ಸುತ್ತಲೂ ಗುಂಡಿ ತೋಡಿ ಮನೆಯನ್ನು ಬೀಗ ಹಾಕಿ ವಿದ್ಯುತ್ ಹಾಗೂ ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸಿ ಗೃಹಬಂಧನ ವಿಧಿಸಿದ ಆರೋಪದಡಿಯಲ್ಲಿ ಚಾಲಕ ಸುಬ್ರಮಣಿ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಕಾಫಿ ತೋಟದ ಮಾಲೀಕ ಅಣ್ಣಾಮಲೈ ಮುತ್ತಯ್ಯ ಹಾಗೂ ತೋಟದ ಸಿಬ್ಬಂದಿಗಳಾದ ರಂಜನ್ ಚಂಗಪ್ಪ, ಆಂಟೋನಿ ಮತ್ತು ಪದ್ಮನಾಭ ವಿರುದ್ಧ ವಿವಿಧ ಪ್ರಕರಣಗಳು ದಾಖಲಾಗಿವೆ. ಇದಲ್ಲದೆ ಜಿಲ್ಲಾಧಿಕಾರಿ ಕಚೇರಿಯಿಂದ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾರ್ಮಿಕ ಇಲಾಖೆಯ ವತಿಯಿಂದ ಕಾಫಿ ತೋಟದ ಮಾಲೀಕ ಅಣ್ಣಾಮಲೈ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.