ವೀರಾಜಪೇಟೆ, ಜ. ೧೪: ವೀರಾಜಪೇಟೆ ಸಮೀಪದ ಆರ್ಜಿ ಹಾಗೂ ಬೇಟೋಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಆರಂಭಿಸಿರುವ ಡಿಜಿಟಲ್ ಗ್ರಂಥಾಲ ಯವನ್ನು ಶಾಸಕ ಕೆ.ಜಿ. ಬೋಪಯ್ಯ ಲೋಕಾರ್ಪಣೆ ಗೊಳಿಸಿದರು.

ಬೇಟೋಳಿಯ ಬಾಬು ಜಗಜೀವನ್ ರಾಂ ಭವನದಲ್ಲಿ ನಿರ್ಮಿಸಲಾದ ಡಿಜಿಟಲ್ ಗ್ರಂಥಾಲ ಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಿಜಿಟಲ್ ಗ್ರಂಥಾಲಯ ನಿರ್ಮಾಣ ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿದೆ. ಗ್ರಾಮೀಣ ಭಾಗದ ಜನರಿಗೆ ಎಲ್ಲಾ ಸೌಲಭ್ಯಗಳು ಸಿಗಬೇಕು ಎನ್ನುವುದು ಅವರ ಆಶಯ. ಡಿಜಿಟಲ್ ಗ್ರಂಥಾಲಯ ದಲ್ಲಿ ಸುಮಾರು ಏಳುಕೋಟಿ ಪುಸ್ತಕಗಳು ಲಭ್ಯವಿದ್ದು, ಇದರ ಸದ್ಭಳಕೆ ಮಾಡಿಕೊಳ್ಳುವಂತೆ ಕರೆ ನೀಡಿದ ಅವರು, ಕೊಡಗಿನ ಐದು ಪಂಚಾಯಿತಿ ಹೊರತುಪಡಿಸಿ ಉಳಿದೆಲ್ಲ ಪಂಚಾಯಿತಿಗಳಲ್ಲಿ ಡಿಜಿಟಲ್ ಗ್ರಂಥಾಲಯಗಳು ಸ್ಥಾಪನೆಯಾಗಿವೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳು ನಡೆಯುವಾಗ ಇಂಟರ್‌ನೆಟ್ ಸಮಸ್ಯೆಯಾಗುತ್ತಿತ್ತು. ಈಗ ಮಕ್ಕಳಿಗೆ ಇದು ವರದಾನ ವಾಗಲಿದೆ ಎಂದರು. ಬಳಿಕ ಆರ್ಜಿ ಗ್ರಾಮ ಪಂಚಾಯಿತಿಯ ಹಳೆಯ ಕಟ್ಟಡದಲ್ಲಿ ಸುಸಜ್ಜಿತವಾಗಿ ಹಾಗೂ ಅತ್ಯಾಧುನಿಕವಾಗಿ ಆರಂಭವಾಗಿರುವ ಡಿಜಿಟಲ್ ಗ್ರಂಥಾಲಯವನ್ನು ಹಾಗೂ ಬಾಪೂ ಸೇವಾ ಕೇಂದ್ರವನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟನೆ ಮಾಡಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷಿö್ಮ ಚಂದ್ರಶೇಖರ್ ಪ್ರಸ್ತಾವಿಕವಾಗಿ ಮಾತನಾಡಿ, ಡಿಜಿಟಲ್ ಗ್ರಂಥಾಲಯ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾಗಿವೆ. ಇದರಿಂದ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮಕ್ಕಳಿಗೆ ಅನುಕೂಲವಾಗಲಿದೆ. ಕೆ.ಎ.ಎಸ್, ಐ.ಎ.ಎಸ್.ನಂತ ಪರೀಕ್ಷೆ ಗಳಿಗೆ ತಯಾರಾಗುವ ವಿದ್ಯಾರ್ಥಿಗಳಿಗೆ ಡಿಜಿಟಲ್ ಗ್ರಂಥಾಲಯದಲ್ಲಿ ಎಲ್ಲಾ ರೀತಿಯ ಅಧ್ಯಯನ ಪುಸ್ತಕಗಳು ಲಭ್ಯವಿರಲಿವೆ ಎಂದರು.

ಕಾರ್ಯಕ್ರಮದಲ್ಲಿ, ಬೇಟೋಳಿ ಗ್ರಾ.ಪಂ. ಅಧ್ಯಕ್ಷೆ ಯಶೋಧ, ಉಪಾಧ್ಯಕ್ಷ ವಸಂತ ಕಟ್ಟಿ, ಗ್ರಾಮ ಅಭಿವೃದ್ಧಿ ಅಧಿಕಾರಿ ಮಣಿ, ಆರ್ಜಿ ಗ್ರಾ.ಪಂ. ಅಧ್ಯಕ್ಷೆ ಹೆಚ್.ಬಿ. ಪಾರ್ವತಿ, ಉಪಾಧ್ಯಕ್ಷ ಉಪೇಂದ್ರ ಕೆ.ಎನ್., ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜನ್, ಸಂತ ಅನ್ನಮ್ಮ ದೇವಾಲಯದ ಧರ್ಮಗುರು ರೆವರೆಂಡ್ ಫಾದರ್ ಮಧಲೈ ಮುತ್ತು, ಆರ್ಜಿ ಚರ್ಚಿನ ಸಹಾಯಕ ಧರ್ಮಗುರು ರೋನಿ ರವಿಕುಮಾರ್, ಬಿಜೆಪಿ ಮುಖಂಡರುಗಳಾದ ಜಿ.ಪಂ ಮಾಜಿ ಸದಸ್ಯರುಗಳಾದ ಅಚ್ಚಪಂಡ ಮಹೇಶ್ ಗಣಪತಿ, ಶಶಿ ಸುಬ್ರಮಣಿ, ತಾ.ಪಂ ಸದಸ್ಯರಾದ ಬಿ.ಎಂ ಗಣೇಶ್, ಜೋಕೀಂ ರೋಡ್ರಿಗ್ರಸ್, ರಘು ನಾಣಯ್ಯ, ಮಧು ದೇವಯ್ಯ, ಚುಪ್ಪ ನಾಗರಾಜ್ ಹಾಜರಿದ್ದರು.