*ಗೋಣಿಕೊಪ್ಪ, ಜ. ೧೪: ಆನೆಕಾಲು ರೋಗ (ಲಿಂಫಾಟಿಕ್ ಫೈಲೇರಿಯಾ) ನಿಯಂತ್ರಣ ಅಭಿಯಾನಕ್ಕೆ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರ ಬಿ. ಚೇತನ್ ಅವರು ತಾವೇ ರಕ್ತ ಪರೀಕ್ಷೆ ನಡೆಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣ ಇಲಾಖೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷರೊಂದಿಗೆ ಸದಸ್ಯರುಗಳು ಸಹ ರಕ್ತ ಪರೀಕ್ಷೆ ನಡೆಸಿ ಆನೆಕಾಲು ರೋಗ ನಿಯಂತ್ರಣ ಅಭಿಯಾನಕ್ಕೆ ಮುಂದಾದರು.

ನಂತರ ಆಟೋ ಚಾಲಕರು, ಸಾರ್ವಜನಿಕರು, ಬಡಾವಣೆಯ ನಿವಾಸಿಗಳನ್ನು ರಕ್ತ ಪರೀಕ್ಷೆಗೆ ಒಳಪಡಿಸಿದರು.

ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಶಶಿಕಾಂತ್ ಅವರು ಆನೆಕಾಲು ರೋಗ ಲಕ್ಷಣಗಳು, ಚಿಕಿತ್ಸೆ, ನಿಯಂತ್ರಣ ಮತ್ತು ರೋಗದ ಬಗ್ಗೆ ವಿವರ ನೀಡಿದರು.

ಗ್ರಾ.ಪಂ. ಸದಸ್ಯರುಗಳಾದ ರಾಮಕೃಷ್ಣ, ಹಕೀಮ್, ರತಿಅಚ್ಚಪ್ಪ, ವಿವೇಕ್ ರಾಯ್ಕರ್, ಪುಷ್ಪಾಮನೋಜ್, ಸೌಮ್ಯಬಾಲು, ರಾಜೇಶ್, ರಾಮ್‌ದಾಸ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ, ಆರೋಗ್ಯ ಸಂರಕ್ಷಣಾಧಿಕಾರಿ ಪ್ರೇಮ್‌ಕುಮಾರ್, ಆರೋಗ್ಯ ಶಿಕ್ಷಣಾಧಿಕಾರಿ ಶ್ರೀನಿವಾಸ್, ಪ್ರಯೋಗಶಾಲಾ ತಜ್ಞರು ಹಾಜರಿದ್ದರು.