ಮಡಿಕೇರಿ, ಜ. ೧೪: ಗಾಳಿಬೀಡು ಗ್ರಾ.ಪಂ.ವ್ಯಾಪ್ತಿಯಲ್ಲಿ ರಸ್ತೆ, ಸೇತುವೆ, ಚರಂಡಿ ಸೇರಿದಂತೆ ಸುಮಾರು ೨.೭೦ ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಂ.ಪಿ.ಅಪ್ಪಚ್ಚುರAಜನ್ ಚಾಲನೆ ನೀಡಿದರು.

ತಾಲೂಕಿನ ದೇವಸ್ತೂರು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವುದಕ್ಕೂ ಮೊದಲು ಅಲ್ಲಿನ ಗ್ರಾಮಸ್ಥರ ಸಮಸ್ಯೆ ಆಲಿಸಿ ಮಾತನಾಡಿದ ಶಾಸಕರು, ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯಲ್ಲಿ ರಸ್ತೆ, ಸೇತುವೆ, ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲಾಗಿದ್ದು, ಸ್ಥಳೀಯರು ಕಾಮಗಾರಿಯನ್ನು ಗಮನಿಸಬೇಕು ಎಂದು ಸಲಹೆ ಮಾಡಿದರು.

ಈಗಾಗಲೇ ತಯಾರಿಸಲಾಗಿರುವ ೨.೭೦ ಕೋಟಿ ರೂ ಕಾಮಗಾರಿಯ ಅಂದಾಜು ಪಟ್ಟಿ ಹೊರತುಪಡಿಸಿ, ಉಳಿದ ಕಡೆಯು ರಸ್ತೆ, ಸೇತುವೆ, ಚರಂಡಿ ಕಾಮಗಾರಿಗಳು ಬಿಟ್ಟು ಹೋಗಿದ್ದಲ್ಲಿ ಗ್ರಾಮಸ್ಥರು ಗಮನಕ್ಕೆ ತರಬೇಕು; ‘ಪ್ರತೀ ಗ್ರಾಮದಲ್ಲೂ ಉತ್ತಮ ರಸ್ತೆ

(ಮೊದಲ ಪುಟದಿಂದ) ಸಂಪರ್ಕವಿರಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಆ ನಿಟ್ಟಿನಲ್ಲಿ ತಮ್ಮ ಗ್ರಾಮಕ್ಕೆ ಆಗಬೇಕಿರುವ ಕೆಲಸಗಳ ಬಗ್ಗೆ ಮಾಹಿತಿ ನೀಡುವಂತಾಗಬೇಕು ಎಂದು ಕೋರಿದರು.

ಗಾಳಿಬೀಡು ಗ್ರಾ.ಪಂ.ವ್ಯಾಪ್ತಿಗೆ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇನ್ನೂ ೩೦ ಲಕ್ಷ ರೂ. ಹೆಚ್ಚುವರಿಯಾಗಿ ಒದಗಿಸಲಾಗುವುದು. ಆ ನಿಟ್ಟಿನಲ್ಲಿ ತಮ್ಮ ಗ್ರಾಮಕ್ಕೆ ಆಗಬೇಕಿರುವ ಕೆಲಸಗಳ ಬಗ್ಗೆ ಗಮನಹರಿಸಬೇಕು; ೨೦೧೮ ಮತ್ತು ೨೦೧೯ ರಲ್ಲಿ ಸುರಿದ ಧಾರಕಾರ ಮಳೆಯಿಂದ ಹಾನಿಯಾದ ಸೇತುವೆ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಅನುದಾನ ಕೊರತೆ ಇದ್ದಲ್ಲಿ ಗಮನಕ್ಕೆ ತರುವಂತೆ ಎಂಜಿನಿಯರ್‌ಗೆ ಶಾಸಕರು ಸೂಚಿಸಿದರು.

ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿನಿತ್ಯ ಓಡಾಡಲು ಬಸ್ ಸಂಚಾರ ವ್ಯವಸ್ಥೆ ಮಾಡಬೇಕು. ಸರ್ಕಾರಿ ರಜೆ ದಿನಗಳಲ್ಲಿಯೂ ಸಹ ಬಸ್ ಕಲ್ಪಿಸುವಂತೆ ದೂರವಾಣಿ ಮೂಲಕ ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕರಿಗೆ ಶಾಸಕರು ನಿರ್ದೇಶನ ನೀಡಿದರು.

ಈ ಬಗ್ಗೆ ಅಲ್ಲಿನ ಸ್ಥಳೀಯರಾದ ಕವಿತಾ, ದೇವಸ್ತೂರು ಮಾರ್ಗದಲ್ಲಿ ಬಸ್ ಓಡಾಡದಿರುವುದರಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಆಗಿದೆ ಎಂದು ಶಾಸಕರ ಗಮನಕ್ಕೆ ತಂದರು. ಗಾಳಿಬೀಡು ಗ್ರಾ.ಪಂ. ಸದಸ್ಯರಾದ ಸುಭಾಷ್ ಸೋಮಯ್ಯ ೨೦೧೮ ಮತ್ತು ೨೦೧೯ ರಲ್ಲಿ ಸುರಿದ ಭಾರಿ ಮಳೆಯಿಂದ ರಸ್ತೆ ಹಾಗೂ ಸೇತುವೆಗಳು ಹಾನಿಯಾಗಿದ್ದು, ಈ ಕಾಮಗಾರಿಗಳು ಇದುವರೆಗೆ ಪೂರ್ಣಗೊಂಡಿಲ್ಲ ಎಂದು ಶಾಸಕರ ಗಮನಕ್ಕೆ ತಂದರು.

ಬಳಿಕ ದೇವಸ್ತೂರಿನ ಸೇತುವೆ ಪರಿಶೀಲಿಸಿದ ಶಾಸಕರು ಸೇತುವೆಯ ರಸ್ತೆಯನ್ನು ಕಾಂಕ್ರೀಟ್ ಅಥವಾ ಡಾಂಬರೀಕರಣ ಮಾಡಲು ಕ್ರಮವಹಿಸುವಂತೆ ಎಂಜಿನಿಯರ್‌ಗೆ ಸೂಚಿಸಿದರು. ಪ್ರಮುಖರಾದ ನಾಪಂಡ ರವಿಕಾಳಪ್ಪ, ಕಾರ್ಯಪ್ಪ, ಮಾಚಯ್ಯ, ಜಗದೀಶ್ ರೈ, ತಾ.ಪಂ.ಇಒ ಶೇಖರ್, ಪಂಚಾಯತ್ ರಾಜ್ ಎಂಜಿನಿಯರ್ ಜವರೇಗೌಡ, ಪಿಡಿಒ ಶಶಿಕಿರಣ ಇತರರು ಇದ್ದರು.