ಸೋಮವಾರಪೇಟೆ, ಜ.೧೨: ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಬೆಟ್ಟದಳ್ಳಿ ಗ್ರಾ.ಪಂ.ನ ಕುಮಾರಳ್ಳಿ ಗ್ರಾಮದಲ್ಲಿರುವ ಆಯತನ ರೆಸಾರ್ಟ್ನಲ್ಲಿ ಕೆಲಸ ಮಾಡುವ ೧೦ ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ನೌಕರರ ವಸತಿಗೃಹವನ್ನು ಸೀಲ್‌ಡೌನ್ ಮಾಡಲಾಗಿದೆ.

ರೆಸಾರ್ಟ್ನಲ್ಲಿ ಕೆಲಸ ಮಾಡುತ್ತಿರುವ ೧೨೧ ಸಿಬ್ಬಂದಿಗಳಿಗೆ ನಿನ್ನೆ ದಿನ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ೪೮ ಮಂದಿಯ ಫಲಿತಾಂಶ ಬಂದಿದ್ದು, ೧೦ ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ತಾಲೂಕು ಆರೋಗ್ಯಾಧಿಕಾರಿಗಳ ಮಾಹಿತಿ ಮೇರೆ, ತಾಲೂಕು ತಹಶೀಲ್ದಾರ್ ಗೋವಿಂದರಾಜು ಹಾಗೂ ಕಂದಾಯ ಇಲಾಖಾ ಸಿಬ್ಬಂದಿಗಳು ರೆಸಾರ್ಟ್ಗೆ ತೆರಳಿ ನೌಕರರ ವಸತಿ ಗೃಹವನ್ನು ಸೀಲ್‌ಡೌನ್ ಮಾಡಿದ್ದಾರೆ.

ಉಳಿದ ೭೩ ಮಂದಿಯ ಫಲಿತಾಂಶ ಬರಬೇಕಿದ್ದು, ಇದರಲ್ಲಿ ಪಾಸಿಟಿವ್ ಬರುವ ಸಿಬ್ಬಂದಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ೧೦ ದಿನಗಳ ಕಾಲ ಕ್ವಾರಂಟೈನ್ ಮಾಡುವಂತೆ ವ್ಯವಸ್ಥಾಪಕರಿಗೆ ಸೂಚನೆ ನೀಡಿದ್ದಾರೆ.

ಇದರೊಂದಿಗೆ ರೆಸಾರ್ಟ್ನಲ್ಲಿ ತಂಗಿರುವ ಅತಿಥಿಗಳಿಗೂ ಪರೀಕ್ಷೆ ನಡೆಸಬೇಕು. ರೆಸಾರ್ಟ್ನ್ನು ಸ್ಯಾನಿಟೈಸ್ ಮಾಡಬೇಕು. ಪಾಸಿಟಿವ್ ಬಂದಿರುವ ಸಿಬ್ಬಂದಿಗಳು ಹೊರಬರದಂತೆ ಕ್ರಮವಹಿಸಬೇಕು ಎಂದು ತಹಶೀಲ್ದಾರ್ ಗೋವಿಂದ ರಾಜು ಸೂಚನೆ ನೀಡಿದ್ದಾರೆ.ಈ ಸಂದರ್ಭ ಉಪ ತಹಶೀಲ್ದಾರ್ ತುಕ್ರಪ್ಪ ಮೇರ, ಗ್ರಾಮ ಲೆಕ್ಕಿಗರಾದ ಉಮೇಶ್, ಕರಿಬಸವಯ್ಯ, ತಾಲೂಕು ಕಚೇರಿಯ ಪಳಂಗಪ್ಪ ಅವರುಗಳು ಉಪಸ್ಥಿತರಿದ್ದರು.