ಮಡಿಕೇರಿ , ಜ. ೧೨: ತಿತಿಮತಿ ಅರಣ್ಯ ವಲಯದ ಮಾಲ್ದಾರೆ ಗ್ರಾಮದಲ್ಲಿ ನಡೆದ ಮರ ಹನನ ಪ್ರಕರಣದಲ್ಲಿ ವ್ಯಕ್ತಿಗಳು ಮೃತಪಟ್ಟು ೧೫ ವರ್ಷಗಳು ಕಳೆದ ಬಳಿಕ ಹೆಸರಿನಲ್ಲಿ ಮರಕಡಿತಕಲೆಗೆ ಅರ್ಜಿ ಸಲ್ಲಿಸಿ, ಸಹಿ ನಕಲು ಮಾಡಿ, ಸುಳ್ಳು ಪ್ರಮಾಣ ಪತ್ರ ನೀಡಿ ಮರ ಕಡಿದು ಸಾಗಾಟ ಮಾಡಿ ಸರಕಾರಕ್ಕೆ ವಂಚಿಸಿರುವದು ಬೆಳಕಿಗೆ ಬಂದಿದೆ. ಮರ ಕಡಿತಲೆ ಹಾಗೂ ಸಾಗಾಟಕ್ಕೆ ಅಧಿಕಾರಿಗಳ ಆಕ್ಷೇಪವಿದ್ದರೂ ಅದನ್ನು ಪರಿಗಣಿಸದೆ ಈಗಿನ ಅಧಿಕಾರಿಗಳು ಅವಕಾಶ ಕಲ್ಪಿಸಿರುವದು ಕಂಡು ಬಂದಿದೆ..!

ಮಾಲ್ದಾರೆ ಗ್ರಾಮದ ಪಿ.ಎನ್. ಮುತ್ತಣ್ಣ ಹಾಗೂ ಅವರ ಪುತ್ರಿ ಪಿ.ಎಂ.ತಾಯಮ್ಮ ಅವರುಗಳಿಗೆ ಸೇರಿದ ವಾರ್ ಗ್ರಾಂಟ್ ಸಾಗು ಬಾಣೆಯಲ್ಲಿ ನೆಟ್ಟು ಬೆಳೆಸಿದ ಬೆಲೆ ಬಾಳುವ ತೇಗದ ಮರಗಳನ್ನು ಅವರುಗಳ ಹೆಸರು ಹಾಗೂ ಸಹಿ ನಕಲು ಮಾಡಿ ಕಡಿದು ಮಾರಾಟ ಮಾಡಲಾಗಿದೆ. ಅರಣ್ಯ ಇಲಾಖಾಧಿಕಾರಿಗಳ ಸಹಕಾರದೊಂದಿಗೆ ಈ ಅಕ್ರಮ ವ್ಯವಹಾರ ನಡೆದಿರುವದು ಮೇಲ್ನೋಟಕ್ಕೆ ಕಂಡುಬರುತ್ತಿದೆ..!

೧೫ ವರ್ಷಗಳ ನಂತರ ಅರ್ಜಿ..!

ಈ ಪ್ರಕರಣದಲ್ಲಿ ಅರ್ಜಿದಾರರಾಗಿರುವ ಪಿ.ಎನ್. ಮುತ್ತಣ್ಣ ಅವರು ತಾ. ೧೯-೧೧-೨೦೦೦ದಲ್ಲಿ ನಿಧನರಾಗಿದ್ದಾರೆ.

(ಮೊದಲ ಪುಟದಿಂದ) ಅವರ ಪುತ್ರಿ ಪಿ.ಎಂ. ತಾಯಮ್ಮ(ರತಿ) ಅವರು ೧೯-೬-೨೦೦೬ರಲ್ಲಿ ನಿಧನರಾಗಿದ್ದಾರೆ. ಮುತ್ತಣ್ಣ ಅವರು ತೀರಿಕೊಂಡು ೧೫ ವರ್ಷಗಳ ಬಳಿಕ ಅವರ ಹೆಸರಿನಲ್ಲಿರುವ ಸ.ನಂ.೮೫/೨ರಲ್ಲಿನ ಹತ್ತು ಎಕರೆ ಹಾಗೂ ಸ.ನಂ.೮೫/೫ರಲ್ಲಿನ ಹತ್ತು ಎಕರೆ ಜಾಗದಲ್ಲಿ ನೆಟ್ಟು ಬೆಳೆಸಲಾಗಿರುವ ೬೫ ತೇಗದ ಮರಗಳನ್ನು ಕಡಿಯಲು ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯಲ್ಲಿ ಮುತ್ತಣ್ಣ ಹಾಗೂ ತಾಯಮ್ಮ ಅವರ ಸಹಿಗಳೂ ಇವೆ. ಇದಕ್ಕೆ ಪ್ರತಿಯಾಗಿ ವೀರಾಜಪೇಟೆ ವಿಭಾಗ ಅರಣ್ಯ ಇಲಾಖೆಯಿಂದ ೨೨-೫-೨೦೦೫ರಲ್ಲಿ ೪೭ ಮರಗಳನ್ನು ಕಡಿಯಲು ಅನುಮತಿ ನೀಡಲಾಗುತ್ತದೆ. ಮರಗಳನ್ನು ೩೧-೫-೨೦೧೫ರೊಳಗಡೆ ಕಡಿಯುವಂತೆ ಅನುಮತಿಸಿ ಗಡುವು ನೀಡಲಾಗುತ್ತದೆ.

೨೦೨೦ರಲ್ಲಿ ಅರ್ಜಿ..!

ಆದರೆ, ಆ ಸಮಯದಲ್ಲಿ ಮರಗಳನ್ನು ಕಡಿಯದೆ ೨೦೨೦ರಲ್ಲಿ ಮರ ಕಡಿಯಲು ಕೆಲಸದವರು ಸಿಗದ ಕಾರಣ ಕಡಿಯಲಾಗಲಿಲ್ಲ; ಮರ ಕಡಿಯಲು ಕಾಲಾವಕಾಶ ವಿಸ್ತರಣೆ ಮಾಡಿಕೊಡಬೇಕೆಂದು ೨೭-೧-೨೦೨೦ರಲ್ಲಿ ಮತ್ತೊಂದು ಅರ್ಜಿ ಸಲ್ಲಿಕೆಯಾಗುತ್ತದೆ. ಮುತ್ತಣ್ಣ ಹಾಗೂ ತಾಯಮ್ಮ ಅವರುಗಳ ಹೆಸರಿನಲ್ಲಿರುವ ಈ ಅರ್ಜಿಯಲ್ಲಿ ಮುತ್ತಣ್ಣ ಅವರ ಪುತ್ರ ಪೂವಯ್ಯ ಅವರು ಸಹಿ ಮಾಡಿರುತ್ತಾರೆ. ಮರ ಕಡಿಯಲು ಕೆಲಸಗಾರರು ಸಿಗಲಿಲ್ಲವೆಂದು ಕಾರಣ ನೀಡಲಾಗಿದೆಯಾದರೂ ಇಲ್ಲಿ ಆಗಿನ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ತಡೆ ಹಿಡಿದಿದ್ದು ಹಾಗೂ ಮರ ವ್ಯಾಪಾರಿಗಳು ಹಾಗೂ ಮಾಲೀಕರ ನಡುವಿನ ವ್ಯಾಪಾರ ಕುದುರಿಸುವಿಕೆಯಲ್ಲಿನ ಗೊಂದಲ ಗಳಿಂದಾಗಿ ವಿಳಂಬವಾಗಿರುವದು ಇಲ್ಲಿ ಗಮನಾರ್ಹ..!

ಅಧಿಕಾರಿಗಳಿಂದ ಆಕ್ಷೇಪ..!

ಮರ ಕಡಿಯಲು ಅನುಮತಿ ಕೋರಿರುವ ಜಾಗ ವಾರ್ ಗ್ರಾಂಟ್ ಜಾಗವಾಗಿರುವದರಿಂದ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಭಿಪ್ರಾಯಗಳು ಇಲ್ಲದಿರುವದರಿಂದ, ಅಲ್ಲದೆ ಭೂಮಾಪನಾ ಇಲಾಖೆಯಿಂದ ಜಂಟಿ ಮೋಜಣಿ ಆಗಿಲ್ಲದ್ದರಿಂದ ಆಗಿನ ಉಪ ಅರಣ್ಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿ ಕಡತ ತಡೆ ಹಿಡಿದಿದ್ದರು. ಅಲ್ಲದೆ, ಮರಗಳ ಎಣಿಕೆ, ಬೆಳವಣಿಗೆ ಹಾಗೂ ಜಾಗದ ಬಗ್ಗೆ ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ ತಿತಿಮತಿ ವಲಯ ಅರಣ್ಯಾಧಿಕಾರಿಗೆ ಪತ್ರ ಹಾಕಿದ್ದರು. ಅಧಿಕಾರಿಯಿಂದ ವರದಿ ಬಾರದ್ದರಿಂದ ಪ್ರಕರಣವನ್ನು ವಿಲೇ ಇಡಲಾಗಿತ್ತು..!

ನಂತರ ಅವಕಾಶ..!

ನಂತರದಲ್ಲಿ ಬಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮರ ಕಡಿಯಲು ಅನುಮತಿ ನೀಡಿದ್ದಾರೆ. ತಾ. ೨೮-೨-೨೦೨೦ರಂದು ಅನುಮತಿ ನೀಡಿ ತಾ. ೧೫-೪-೨೦೨೦ರವರೆಗೆ ಕಾಲಾವಕಾಶ ನೀಡಲಾಗಿತ್ತು. ಈ ಆದೇಶದಂತೆ ೪೭ ಮರಗಳನ್ನು ಕಡಿಯಲಾಯಿತು. ನಂತರ ಜಿಲ್ಲಾಧಿಕಾರಿಗಳಿಂದ ಕಂದಾಯ ಅಭಿಪ್ರಾಯ ನೀಡದೇ ಇರುವದರಿಂದ ಕಂದಾಯ ಅಭಿಪ್ರಾಯ ಬಂದ ಬಳಿಕ ಅನುಮತಿ ನೀಡುವಂತೆ ಮರ ಸಾಗಾಟಕ್ಕೆ ತಡೆ ಉಂಟಾದ ಹಿನ್ನೆಲೆಯಲ್ಲಿ ದಿ. ಮುತ್ತಣ್ಣ ಅವರ ಪುತ್ರ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರಿಂದ ನ್ಯಾಯಾಲಯವು ಮರ ಸಾಗಾಟಕ್ಕೆ ಅವಕಾಶ ನೀಡುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ೧೬-೪-೨೦೨೧ರಂದು ಸಾಗಾಟ ಮಾಡಲು ಅನುಮತಿ ನೀಡಿದ್ದಾರೆ. ೧೦-೫-೨೦೨೧ರ ಒಳಗಡೆ ಸಾಗಿಸುವಂತೆ ಕಾಲಾವಕಾಶ ನೀಡಿ ಅನುಮತಿ ನೀಡಲಾಗಿದೆ.

ಸುಳ್ಳು ಪ್ರಮಾಣ ಪತ್ರ..!

ಮರಕಡಿಯಲು ಅನುಮತಿ ಪಡೆಯಲು ಹಾಗೂ ಸಾಗಾಟ ಮಾಡಲು ಸುಳ್ಳು ಪ್ರಮಾಣ ಪತ್ರ ಸಲ್ಲಿಸಿರುವದು ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಮರ ಕಡಿಯುವ ಸಂಬAಧ ಸರಕಾರಕ್ಕೆ ಮರದ ಬೆಲೆ ಕಟ್ಟುವ ಬಗ್ಗೆ ಹಾಗೂ ಯಾವದೇ ರೀತಿಯ ದುರುಪಯೋಗ ಆಗುವದಿಲ್ಲ ಎಂಬ ಬಗ್ಗೆ ಪ್ರಮಾಣೀಕರಿಸುವ ಸಂಬAಧ ಸಲ್ಲಿಸಲಾದ ಅಫಿಡವಿಟ್‌ನಲ್ಲಿಯೂ ನಕಲಿ ಸಹಿ ಬಳಸಲಾಗಿದೆ. ತಾ. ೧೬-೨-೨೦೧೫ರಲ್ಲಿ ನೋಟರಿ ಅವರ ಮೂಲಕ ಅಫಿಡವಿಟ್ ಸಲ್ಲಿಸಲಾಗಿದೆ. ಕಾನೂನಿನ ನಿಯಮಾನುಸಾರ ಅಫಿಡವಿಟ್ ಮಾಡಿಸುವಾಗ ಸಂಬAಧಪಟ್ಟ ಅರ್ಜಿದಾರರ ಸಮಕ್ಷಮ ಸಹಿ ಮಾಡಬೇಕಾಗುತ್ತದೆ. ಆದರೆ, ಇಲ್ಲಿ ಅರ್ಜಿದಾರರೇ ಇಲ್ಲದೆ ಸಹಿ ಮಾಡಿರುವದು ಕಾನೂನಿನನ್ವಯ ಅಪರಾಧವಾಗಲಿದೆ..!

ಮಾಹಿತಿ ನೀಡದ ಅಧಿಕಾರಿಗಳು..!

ಮತ್ತೊಂದು ಸಂದರ್ಭದಲ್ಲಿ ಕಡಿದ ಮರಗಳ ಸಾಗಾಟಕ್ಕೆ ತಡೆಯುಂಟಾದ ಹಿನ್ನೆಲೆಯಲ್ಲಿ ಮುತ್ತಣ್ಣ ಅವರ ಪುತ್ರ ಪೂವಯ್ಯ ನ್ಯಾಯಾಲಯದ ಮೊರೆ ಹೋದ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಸಮರ್ಪಕ ಮಾಹಿತಿ ನೀಡದೆ ಅಧಿಕಾರಿಗಳು ಮರೆ ಮಾಚಿರುವದು ಸ್ಪಷ್ಟವಾಗಿ ಗೋಚರಿಸುತ್ತದೆ. ತಿತಿಮತಿ ವಲಯ ಅರಣ್ಯಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಉಪ ಸಂರಕ್ಷಣಾಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿಸಿ ದಾವೆ ಹೂಡಲಾಗಿತ್ತು. ನ್ಯಾಯಾಲಯಕ್ಕೆ ಹಾಜರಾದ ಸಂದರ್ಭದಲ್ಲಿ ಮುತ್ತಣ್ಣ ಹಾಗೂ ತಾಯಮ್ಮ ಅವರುಗಳು ನಿಧನ ಹೊಂದಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡದೆ ಮರೆ ಮಾಚಿರುವದು ಗೋಚರಿಸುತ್ತದೆ. ಪೂವಯ್ಯ ೨೦೨೧ರಲ್ಲಿ ದಾವೆ ಹೂಡಿದ್ದಾರೆ. ಆದರೆ, ಕೊಡಗು ಏಕೀಕರಣ ರಂಗದವರು ೧೩-೧೦-೨೦೨೦ರಲ್ಲಿಯೇ ಅರಣ್ಯ ಇಲಾಖಾ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ ದಾಖಲೆ ಸಹಿತ ಮುತ್ತಣ್ಣ ಹಾಗೂ ತಾಯಮ್ಮ ಮೃತಪಟ್ಟಿರುವ ಬಗ್ಗೆ, ಸರ್ವೆ ಆಗದ ಬಗ್ಗೆ, ಜಿಲ್ಲಾಧಿಕಾರಿಗಳ ಅಭಿಪ್ರಾಯ ಇಲ್ಲದ ಬಗ್ಗೆ ದೂರು ನೀಡಿದ್ದರು.

ತಕರಾರು ಇಲ್ಲವೆಂಬ ವರದಿ..!

ಅದೂ ಅಲ್ಲದೆ, ಮರ ಕಡಿದ ಬಳಿಕ ೨೬-೬-೨೦೨೦ರಂದು ತಿತಿಮತಿ ವಲಯ ಅರಣ್ಯಾಧಿಕಾರಿಗಳು ಮರಗಳನ್ನು ದಾಸ್ತಾನಿರಿಸಲು ಅನುಮತಿ ಕೋರಿ ಪತ್ರ ಬರೆದಿದ್ದರು. ಆಗಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಜಿಲ್ಲಾಧಿಕಾರಿಗಳ ಅಭಿಪ್ರಾಯಕ್ಕಾಗಿ ಪತ್ರ ಬರೆಯುವಂತೆ ವಲಯ ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ತಕರಾರು ಅರ್ಜಿಗೂ ತೇಗದ ಮರಕಡಿತಲೆಗೂ ಯಾವದೇ ಕಾನೂನಾತ್ಮಕ ತೊಡಕು ಇಲ್ಲವೆಂದು ಪಿ.ಎಂ. ಪೂವಯ್ಯ ಪ್ರಮಾಣ ಪತ್ರ ಸಲ್ಲಿಸಿರುವದಾಗಿ ವಲಯ ಅರಣ್ಯಾಧಿಕಾರಿಗಳು ಸಲ್ಲಿಸಿದ ಶಿಫಾರಸ್ಸು ವರದಿ ಆಧಾರದಲ್ಲಿ ಇಲಾಖೆಯಿಂದ ಅನುಮತಿ ಪಡೆದು ನಾಟಾ ಹಾಗೂ ಸೌಧೆಯನ್ನು ಸಾಗಿಸಲು ಅನುಮತಿ ನೀಡಲಾಗಿದೆ. ಅರ್ಜಿದಾರರೇ ಇಲ್ಲದೇ ಸಲ್ಲಿಸಿರುವ ಪ್ರಮಾಣ ಪತ್ರಕ್ಕೆ ಕಾನೂನಿನಲ್ಲಿ ಮಾನ್ಯತೆ ಇದೆಯಾ..? ಎಂಬದು ಇಲ್ಲಿ ಪ್ರಶ್ನೆ ಇಲ್ಲಿಯೂ ಸುಳ್ಳು ಪ್ರಮಾಣ ಪತ್ರ ಸಲ್ಲಿಕೆಯಾಗಿದೆ..!

ಸಮಕ್ಷಮ ಮಹಜರು ಆಗಿಲ್ಲ..!

ಮರಕಡಿತಲೆಗೆ ಅನುಮತಿ ನೀಡುವ ಸಂದರ್ಭ ಹಾಗೂ ಸಾಗಾಟ ಮಾಡಲು ಅನುಮತಿ ನೀಡುವ ಸಂದರ್ಭ ಅರ್ಜಿದಾರರ ಸಮಕ್ಷಮ ಸ್ಥಳ ಮಹಜರು ಮಾಡಬೇಕಿದೆ. ವಲಯ ಅರಣ್ಯಾಧಿಕಾರಿಗಳ ಜವಾಬ್ದಾರಿ ಇದಾಗಿದೆ. ಇಲಾಖೆಯ ನಿಯಮದಲ್ಲಿ ಈ ವಿಚಾರವಿದೆ. ಆದರೆ, ಇಲ್ಲಿ ಅರ್ಜಿದಾರರೇ ಇಲ್ಲದೆ ಮಹಜರು ಮಾಡಿ ಮರ ಕಡಿದು ಸಾಗಾಟ ಮಾಡಲಾಗಿದೆ. ನಿಯಮ ಉಲ್ಲಂಘನೆ ಮಾಡಿರುವದು ಸ್ಪಷ್ಟವಾಗುತ್ತದೆ..!

ಅರಣ್ಯ ಸಂಚಾರಿ ದಳ ವರದಿ..!

ಇಲಾಖೆಯಿಂದ ಆಗಿರುವ ಅಕ್ರಮಗಳ ಬಗ್ಗೆ ಕೊಡಗು ಏಕೀಕರಣ ರಂಗದವರು ನೀಡಿದ ದೂರಿನ ಆಧಾರದಲ್ಲಿ ಅರಣ್ಯ ಸಂಚಾರಿ ದಳದವರು ಸಂಪೂರ್ಣ ಮಾಹಿತಿಯೊಂದಿಗೆ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ , ಭ್ರಷ್ಟಾಚಾರ ನಿಗ್ರಹ ದಳದವರಿಗೆ ವರದಿ ಸಲ್ಲಿಸಿದ್ದಾರೆ. ೨೦೧೫ರ ಆದೇಶದಿಂದ ಹಿಡಿದು ಎಲ್ಲ ಪ್ರಕ್ರಿಯೆಗಳು, ಅರ್ಜಿದಾರರು ಮೃತಪಟ್ಟಿರುವ ಬಗ್ಗೆ ಏಕೀಕರಣ ರಂಗದ ಕಾರ್ಯದರ್ಶಿ ಟಿ.ಎಂ. ಸೋಮಯ್ಯ ಅವರು ನೀಡಿದ ದಾಖಲೆಗಳ ಸಹಿತ ವರದಿ ತಯಾರಿಸಿ ಮುಂದಿನ ಕ್ರಮಕ್ಕಾಗಿ ೧-೧೨-೨೦೨೧ರಂದು ವರದಿ ಸಲ್ಲಿಸಿದ್ದಾರೆ.

ಇಲ್ಲಿ ವಾರ್ ಗ್ರಾಂಟ್ ಜಾಗವಾಗಿರುವದರಿಂದ ಜಾಗದ ಮೇಲೆ ಹಕ್ಕಿದೆ, ಆದರೆ ಮರದ ಮೇಲೆ ಇರುವದಿಲ್ಲ. ಆದರೂ ನೆಟ್ಟ ಮರಗಳಾಗಿರುವದರಿಂದ ಕಾನೂನಿನಡಿ ಸರಿಯಾದ ದಾಖಲೆಗಳನ್ನು ಒದಗಿಸಿ ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಕಡಿದು ಮಾರಾಟ ಮಾಡ ಬಹುದಾಗಿದೆ. ಮುತ್ತಣ್ಣ ಅವರ ಪುತ್ರ ಪೂವಣ್ಣ ಕೂಡ ತಮ್ಮ ತಂದೆ ಹಾಗೂ ಸಹೋದರಿ ಮೃತಪಟ್ಟಿರುವ ಬಗ್ಗೆ ದಾಖಲೆಗಳನ್ನು ಸಲ್ಲಿಸಿ, ‘ಪವರ್ ಆಫ್ ಅಟಾರ್ನಿ’ ಪಡೆದುಕೊಂಡು ತಮ್ಮ ಹೆಸರಿನಲ್ಲಿಯೇ ನಿಯಮಾನುಸಾರ ಅರ್ಜಿ ಸಲ್ಲಿಸಿ ಮರಗಳನ್ನು ಕಡಿಯಬಹುದಿತ್ತು. ಆದರೆ ನಿಯಮಗಳನ್ನು ಉಲ್ಲಂಘನೆ ಮಾಡಿರುವದೇ ಸಮಸ್ಯೆ ಉದ್ಭವಿಸಲು ಕಾರಣವಾಗಿದೆ. ಈ ಬಗ್ಗೆ ಅರಣ್ಯ ಸಂಚಾರಿ ದಳದವರು ಸಲ್ಲಿಸಿರುವ ವರದಿ ಆಧಾರದ ಮೇಲೆ ತನಿಖೆ ನಡೆಸಿದರೂ ನೈಜಾಂಶ ಹೊರಬೀಳಲಿದೆ..!

? ಕುಡೆಕಲ್ ಸಂತೋಷ್