ಕಣಿವೆ, ಜ. ೧೧ : ಕಾಡಾನೆಗಳಿಂದ ನಾವು ಬೆಳೆಸಿದ ಆಹಾರದ ಬೆಳೆಗಳು, ತೋಟಗಾರಿಕಾ ಬೆಳೆಗಳನ್ನು ಉಳಿಸಿ, ನಿತ್ಯದ ಸಂಕಷ್ಟಗಳಿAದ ಪಾರು ಮಾಡಿ ನಮ್ಮನ್ನು ಬದುಕಿಸಿ, ಇದು ಮಂಗಳವಾರ ಹೊಸಪಟ್ಟಣ ಗ್ರಾಮದ ಸಮುದಾಯ ಭವನದಲ್ಲಿ ನಡೆದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಕಾಡಂಚಿನ ಕೃಷಿಕರಿಂದ ಕೇಳಿ ಬಂದ ಆಕ್ರಂದನ.

ಪAಚಾಯಿತಿ ಅಧ್ಯಕ್ಷ ಚೆಟ್ಟಡ್ಕ ಎಲ್.ವಿಶ್ವ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಅರಣ್ಯಾಧಿಕಾರಿಗಳು ಹಾಗೂ ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರಲ್ಲಿ ಮೊರೆಯಿಟ್ಟ ಕೃಷಿಕರು, ನಾವು ಕಷ್ಟಪಟ್ಟು ಕಾವಲು ಕಾದು ಬೆಳೆಯುತ್ತಿರುವ ಬೆಳೆಗಳು ಕ್ಷಣಮಾತ್ರದಲ್ಲಿ ಧಾಳಿಯಿಡುವ ಕಾಡಾನೆಗಳ ಹಾವಳಿಯಿಂದ ನಾಶವಾಗುತ್ತಿವೆ. ನಮಗೆ ಸರ್ಕಾರ ಕೊಡುವ ನಯಾಪೈಸೆಯ ಪರಿಹಾರ ಬೇಡ. ನಮ್ಮ ಬೆಳೆಗಳನ್ನು ಕೃಷಿ ಫಸಲನ್ನು ಉಳಿಸಿಕೊಡಿ. ಕಾಡಾನೆಗಳ ಹಾವಳಿಯನ್ನು ತಪ್ಪಿಸಿ. ನಮ್ಮನ್ನು ಬದುಕಲು ಬಿಡಿ ಎಂದು ಹೊಸಪಟ್ಟಣ ಗ್ರಾಮದ ಜರಿ ಎಂಬವರು ಒತ್ತಾಯಿಸಿದರು.

ಕಾಡಾನೆಗಳ ಹಾವಳಿ ತಡೆಯುವ ನೆಪದಲ್ಲಿ ಜಾನುವಾರುಗಳು ಕಾವೇರಿ ನದಿಗೆ ತೆರಳಿ ಬಾಯಾರಿಕೆ ಈಡೇರಿಸಿಕೊಳ್ಳದಂತೆ ಮಾಡಬೇಡಿ. ಅಲ್ಲದೇ ಇತರೇ ವನ್ಯಮೃಗಗಳಿಗೂ ಕೂಡ ಕುಡಿವ ನೀರು ಸಿಗದಂತೆ ಮಾಡಬೇಡಿ ಎಂದು ನಂಜರಾಯಪಟ್ಟಣದ ಸಚಿನ್ ಎಂಬವರು ಆಗ್ರಹಿಸಿದರು.

ನಂಜರಾಯಪಟ್ಟಣ ಹಾಗೂ ದುಬಾರೆ ವ್ಯಾಪ್ತಿಯಲ್ಲಿನ ಕೃಷಿಕರು ಕಾಡಾನೆಗಳ ಹಾವಳಿಯಿಂದ ಅಕ್ಷರಶಃ ನಲುಗಿ ಹೋಗಿದ್ದಾರೆ. ಅವರಿಗೆ ನೆರವಾಗಿ. ಫಸಲು ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಒದಗಿಸಿ ಎಂದು ಸದಸ್ಯ ಅಯ್ಯಂಡ್ರ ಲೋಕನಾಥ್ ಸಭೆಯಲ್ಲಿ ಒತ್ತಾಯಿಸಿದರು.

ಸ್ವಂತ ವಾಹನಗಳು, ಸಾಕಷ್ಟು ಜಮೀನು ಹೊಂದಿದವರು ಅಕ್ರಮವಾಗಿ ಬಿಪಿಎಲ್ ಕಾರ್ಡ್ಗಳನ್ನು ಹೊಂದಿದ್ದಾರೆ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಿ. ನಿರ್ಗತಿಕರಿಗೆ ಅಂತ್ಯೋದಯ ಪಡಿತರ ಚೀಟಿಗಳನ್ನು ಒದಗಿಸಿ ಎಂದು ಕೆಲ ನಿವಾಸಿಗಳು ಒತ್ತಾಯಿಸಿದರು. ಸಭೆಯಲ್ಲಿದ್ದ ಕುಶಾಲನಗರ ತಾಲೂಕು ಆಹಾರ ಇಲಾಖೆ ಅಧಿಕಾರಿ ಸ್ವಾತಿ ಮಾತನಾಡಿ, ಬಡವರಿಗೆ ಹಾಗೂ ನಿರ್ಗತಿಕರಿಗೆ ಸರ್ಕಾರ ವಿತರಿಸುವ ಬಿಪಿಎಲ್ ಕಾರ್ಡುಗಳು ಕೆಲವು ಉಳ್ಳವರ ಬಳಿಯು ಇವೆ. ಅಂತಹವರು ತಾವಾಗಿಯೇ ಇಲಾಖೆಗೆ ಹಿಂದಿರುಗಿಸಬೇಕು. ಇಲ್ಲವಾದಲ್ಲಿ ಅಂತಹವರನ್ನು ಪತ್ತೆ ಹಚ್ಚುವ ಮೂಲಕ ಇದುವರೆಗೂ ಪಡೆದಿರುವ ಪಡಿತರಕ್ಕೆ ದಂಡ ವಿಧಿಸಲಾಗುತ್ತದೆ ಎಂದು ಆಹಾರ ಇಲಾಖೆ ಅಧಿಕಾರಿ ಸ್ವಾತಿ ಎಚ್ಚರಿಸಿದರು.

ರಂಗಸಮುದ್ರದ ಅರಣ್ಯಕ್ಕೆ ಹುಲಿ, ಚಿರತೆ, ಮಂಗ, ಶ್ವಾನ, ಹೆಬ್ಬಾವು ಹೀಗೆ ವನ್ಯಮೃಗಗಳನ್ನು ಬೇರೆ ಕಡೆಗಳಿಂದ ಹಿಡಿದು ತಂದು ಬಿಡುತ್ತಿರುವ ಗುಮಾನಿ ಇದೆ. ಇದರಿಂದ ಕಾಡಂಚಿನ ನಿವಾಸಿಗಳಿಗೆ ಹಾಗು ಬೆಳೆಗಾರರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಒಟ್ಟಾಗಿ ಇಲ್ಲಿರುವ ವನ್ಯಮೃಗಗಳನ್ನು ಹಿಡಿದು ಬೇರೆಡೆಗೆ ಸಾಗಿಸಬೇಕು ಎಂದು ಗ್ರಾಮದ ನಿವಾಸಿ ಮಾವಾಜಿ ರವಿ ಆಗ್ರಹಿಸಿದರು.

ಗ್ರಾಮಸ್ಥರ ಸಮಸ್ಯೆಗಳನ್ನು ಸಂಬAಧಿಸಿದ ವಿವಿಧ ಇಲಾಖಾ ಅಧಿಕಾರಿಗಳ ಸಮ್ಮುಖದಲ್ಲಿ ಚರ್ಚಿಸಿದ ಸಭಾಧ್ಯಕ್ಷ ಚೆಟ್ಟಡ್ಕ ವಿಶ್ವ, ಪಂಚಾಯಿತಿ ಗ್ರಾಮಗಳ ವ್ಯಾಪ್ತಿಯಲ್ಲಿರುವ ಸಮಸ್ಯೆಗಳ ಬಗ್ಗೆ ಪಂಚಾಯಿತಿಗೆ ಅರಿವಿದೆ. ಹಂತ ಹಂತವಾಗಿ ಸಮಸ್ಯೆಗಳ ನಿಗ್ರಹಕ್ಕೆ ಗಮನ ಹರಿಸಲಾಗುತ್ತದೆ. ಗ್ರಾಮಸ್ಥರು ಸಹಕರಿಸಬೇಕು ಎಂದು ವಿಶ್ವ ಹೇಳಿದರು.

ಪಂಚಾಯಿತಿ ಅಭಿಯಂತರ ಫಯಾಜ್ ಅಹ್ಮದ್, ಚೆಸ್ಕಾಂ ಅಭಿಯಂತರ ಲವಕುಮಾರ್, ನೀರಾವರಿ ನಿಗಮದ ಅಭಿಯಂತರ ಕಿರಣ್, ಕಂದಾಯ ಇಲಾಖೆಯ ಸಚಿನ್ ಕುಲಕರ್ಣಿ, ಶಿಶು ಅಭಿವೃದ್ದಿ ಅಧಿಕಾರಿ ಅಣ್ಣಯ್ಯ, ನಂಜರಾಯಪಟ್ಟಣ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಭರತ್, ನಂಜರಾಯಪಟ್ಟಣ ಪ್ರೌಢಶಾಲೆ ಮುಖ್ಯಶಿಕ್ಷಕ ಮೂರ್ತಿ ಇಲಾಖೆಗಳ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸಮೀರಾ, ಸದಸ್ಯರಾದ ಲೋಕನಾಥ್, ಆರ್.ಕೆ.ಚಂದ್ರು, ಗಿರಿಜಮ್ಮ, ಕುಸುಮ, ಜಾಜಿ, ಮಾವಾಜಿ ರಕ್ಷಿತ್, ಪಂಚಾಯಿತಿ ಪಿಡಿಒ ಕಲ್ಪ, ಕಾರ್ಯದರ್ಶಿ ಶೇಷಗಿರಿ ಇದ್ದರು. ತೋಟಗಾರಿಕೆ ಇಲಾಖೆ ಅಧಿಕಾರಿ ಕಾವ್ಯ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

-ವರದಿ : ಕೆ.ಎಸ್.ಮೂರ್ತಿ