ಕಣಿವೆ, ಜ. ೧೨ : ಕುಶಾಲನಗರ ಪಟ್ಟಣ ಪಂಚಾಯಿತಿಯು ಪುರಸಭೆಯಾಗಿ ಮೇಲ್ದರ್ಜೆ ಗೇರಿದ್ದರಿಂದ ಅದರ ಸೆರಗಿನಲ್ಲಿದ್ದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಡೀ ಪ್ರದೇಶ ಪುರಸಭೆಯ ಅಧೀನಕ್ಕೆ ಒಳಗಾಯಿತು.
ಹಾಗಾಗಿ ಐದು ವರ್ಷದ ಅವಧಿಗೆ ಎಂದು ಕಳೆದ ಒಂದು ವರ್ಷದ ಹಿಂದೆ ಚುನಾಯಿತರಾಗಿದ್ದ ಪಂಚಾಯಿತಿಯ ಒಟ್ಟು ೨೩ ಜನಪ್ರತಿನಿಧಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ.
ಲಕ್ಷಾಂತರ ರೂ. ವ್ಯಯಿಸಿ ಆರಿಸಿ ಬಂದಿದ್ದರು
ಕೊಡಗು ಜಿಲ್ಲೆಯಲ್ಲಿ ಬೆಳವಣಿಗೆಯ ನಾಗಾಲೋಟದಲ್ಲಿ ಬೆಳೆಯುತ್ತಿರುವ ಪಟ್ಟಣಗಳ ಪೈಕಿ ಮೊದಲಿಗ ಪಟ್ಟಣವಾಗಿರುವ ಕುಶಾಲನಗರ ಪಟ್ಟಣವು ಈ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬೆಳವಣಿಗೆಯಾಗುತ್ತಿತ್ತು.
ಅಂದರೆ ಜಿಲ್ಲೆಯ ಮೂಲೆ ಮೂಲೆಗಳಲ್ಲಿನ ನಿವಾಸಿಗಳು, ನೆರೆಯ ಮೈಸೂರು ಜಿಲ್ಲೆಯ ಗಡಿ ಗ್ರಾಮಗಳ ಮಂದಿ ಇದೇ ಮುಳ್ಳುಸೋಗೆ ಗ್ರಾಪಂ ವ್ಯಾಪ್ತಿಯ ಬಡಾವಣೆಗಳಲ್ಲಿ ನಿವೇಶನ ಖರೀದಿಸಿ ಮನೆಗಳನ್ನು ನಿರ್ಮಿಸಿದ್ದಾರೆ. ಇನ್ನೂ ಅನೇಕರು ಈಗಲೂ ನಿರ್ಮಿಸುತ್ತಲೇ ಇದ್ದಾರೆ. ಹಾಗಾಗಿ ಸಹಜವಾಗಿಯೇ ಗ್ರಾಮ ಪಂಚಾಯಿತಿಗೆ ಒಳ್ಳೆಯ ಆದಾಯ ಹರಿದು ಬರುತ್ತಿತ್ತು.
ಇದರಿಂದಾಗಿ ದಷ್ಟ ಪುಷ್ಟವಾಗಿರುವ ಹಸುವಿನಿಂದ ಯಾವಾಗಲೂ ಹೀಗೆಯೇ ಹಾಲು ಕರೆಯಬಹುದು ಎಂದು ಮೊದಲೇ ತಿಳಿದಿದ್ದ ಕೆಲವು ಮಂದಿ ಲಕ್ಷ ಲಕ್ಷ ಹಣ ವ್ಯಯಿಸಿ ಕಳೆದ ಚುನಾವಣೆಯಲ್ಲಿ ಪಂಚಾಯಿತಿಗೆ ಆರಿಸಿ ಬಂದಿದ್ದರು.
ಆದರೆ ಇದೀಗ ಕುಶಾಲನಗರವನ್ನು ದಿಢೀರನೇ ‘ಪುರಸಭೆ’ಯಾಗಿ ಸರ್ಕಾರ ಘೋಷಿಸಿದ ಜೊತೆಗೆ ಇದೇ ಜನವರಿ ೫ ರಂದು ಅಧಿಕೃತವಾಗಿ (ಗೆಜೆಟ್ ನೋಟಿಫಿಕೇಷನ್) ರಾಜ್ಯಪತ್ರದಲ್ಲಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಅಂದಿನಿAದ (ಜ ೫) ಪಂಚಾಯಿತಿಯ ಅಭಿವೃದ್ಧಿಯ ಯಂತ್ರ ದಿಢೀರ್ ಸ್ಥಗಿತಗೊಂಡಿತು.
ಚುನಾಯಿತರಿಗೆ ಸಂಕಟ - ನಿವಾಸಿಗಳಿಗೆ ಸಂತಸ
ಸರಿ ಸುಮಾರು ೨೦ ವರ್ಷಗಳಿಂದಲೂ ಕುಶಾಲನಗರ ಪಟ್ಟಣವು ಮುಳ್ಳುಸೋಗೆಯತ್ತ ಬೆಳೆದುಕೊಂಡು ಬಂದ ನಂತರ ನಿರ್ಮಿತವಾದ ೫೦ ಕ್ಕೂ ಹೆಚ್ಚು ಬಡಾವಣೆಗಳು ಅಭಿವೃದ್ದಿ ಕಾಣದಾದವು. ಅಂದರೆ ಕಿಷ್ಕಿಂದೆಯಾದ ರಸ್ತೆಗಳು, ಅಭಿವೃದ್ಧಿಗೊಳ್ಳದ ಚರಂಡಿ ಹಾಗೂ ರಸ್ತೆಗಳು, ಕಣ್ಣೆದುರೇ ಜೀವನದಿ ಕಾವೇರಿ ಹರಿದರೂ ಕೂಡ ತಮ್ಮ ಬಡಾವಣೆಗಳಿಗೆ ಬಾರದ ಕುಡಿವ ಕಾವೇರಿ ನೀರು ಸೇರಿದಂತೆ ಇನ್ನಿತರ ಸಮಸ್ಯೆಗಳಿಂದಾಗಿ ಬಡಾವಣೆಯ ನಿವಾಸಿಗಳು ದಿನೇ ದಿನೇ ಪಂಚಾಯಿತಿಗೆ ಅಲೆದು ಅಲೆದು ಚಪ್ಪಲಿ ಸವೆಸಿದ್ದರು. ಆದರೆ ದೊಡ್ಡ ಪ್ರಮಾಣದಲ್ಲಿ ಬಹು ವಿಸ್ತೀರ್ಣದಲ್ಲಿ ಬೆಳೆಯುತ್ತಿರುವ ಪಂಚಾಯಿತಿಯ ಬಡಾವಣೆಗಳ ಮೂಲ ಸೌಕರ್ಯಗಳಿಗೆ ಖರ್ಚು ಮಾಡಲು ಪೂರಕವಾದ ಅನುದಾನ ಸರ್ಕಾರಗಳಿಂದ ಬಾರದ ಕಾರಣ ಪಂಚಾಯಿತಿ ಆಡಳಿತ ಕೈ ಚೆಲ್ಲಿದ್ದರಿಂದ ಸಹಜವಾಗಿಯೇ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳಿಗೆ ಆಡಳಿತ ವ್ಯವಸ್ಥೆ ಭ್ರಮನಿರಸನ ಮೂಡಿಸಿತ್ತು.
ಹಾಗಾಗಿ ಈಗ ಗ್ರಾಮ ಪಂಚಾಯಿತಿಯಿAದ ಪುರಸಭೆಯಾಗಿ ಮೇಲ್ದರ್ಜೆಗೇರಿರುವ ಮುಳ್ಳುಸೋಗೆಗೆ ವಾರ್ಷಿಕವಾಗಿ ಕೋಟಿ ಕೋಟಿ ರೂಗಳ ಸರ್ಕಾರದ ಅನುದಾನಗಳ ಮಹಾಪೂರವೇ ಹರಿದು ಬರುವ ಕಾರಣ ಇಲ್ಲಿನ ನಿವಾಸಿಗಳಲ್ಲಿ ಸಂತಸ ಮನೆ ಮಾಡಿದೆ.
ಪುರಸಭೆಗೆ ನಿರ್ಣಯ : ಕುಶಾಲನಗರ ಪಟ್ಟಣ ಪುರಸಭೆಯಾಗಿ ಮೇಲ್ದರ್ಜೆಗೇರುವುದಾದರೆ ಮುಳ್ಳುಸೋಗೆ ಪಂಚಾಯಿತಿಯ ಜನವಸತಿ ಪ್ರದೇಶವನ್ನು ಸೇರ್ಪಡಿಸಿಕೊಳ್ಳಲು ಯಾವುದೇ ಅಭ್ಯಂತರವಿಲ್ಲ. ಗ್ರಾಮ ಪಂಚಾಯಿತಿ ಆಗಿರುವ ಮುಳ್ಳುಸೋಗೆ ಪಂಚಾಯಿತಿಗೆ ಸರ್ಕಾರದಿಂದ ಬರುವ ಚಿಕ್ಕಾಸು ಹಣದಿಂದ ಅಭಿವೃದ್ದಿ ಅಸಾಧ್ಯ. ಹಾಗಾಗಿ ಪುರಸಭೆಯಾಗುವುದಾದರೆ ನಮ್ಮ ಜನವಸತಿ ಪ್ರದೇಶಗಳಿಗೆ ಅನುಕೂಲವಾಗುತ್ತದೆ ಎಂಬ ನಿಟ್ಟಿನಲ್ಲಿ ಕಳೆದ ೨೦೨೧ ರ ಮಾರ್ಚ್ ನಲ್ಲಿ ನಡೆದ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಚುನಾಯಿತರಾಗಿದ್ದ ಇದೇ ಹೊಸ. ೨೩ ಚುನಾಯಿತರು ನಿರ್ಣಯ ಮಾಡಿ ಸರ್ಕಾರಕ್ಕೆ ಕಳಿಸಿದ್ದರು.
ಹಾಗಾಗಿ ಮುಂದಿನ ಐದು ವರ್ಷದ ಅವಧಿಗೆಂದು ಜನ ಕೊಟ್ಟ ಜನಾಧಿಕಾರವನ್ನು ಕೇವಲ ಒಂದೇ ವರ್ಷಕ್ಕೆ ಹೇಗೆ ಮೊಟಕುಗೊಳಿಸುತ್ತೀರಿ ಎಂದು ಪ್ರಾಧಿಕಾರವನ್ನು ಪ್ರಶ್ನೆ ಮಾಡುವ ಅವಕಾಶವೂ ಇಲ್ಲದ್ದರಿಂದ ಚುನಾಯಿತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ ಸೋಲ ಮಾಡಿ ಚುನಾವಣೆ ಎದುರಿಸಿದ್ದ ಬಹುತೇಕ ಮಂದಿಗೆ ಚುನಾಯಿತ ವರ್ಷದಲ್ಲಿ ಕಾಡಿದ ಕೊರೊನಾ ಒಂದು ರೀತಿಯಲ್ಲಿ ಕರಿನೆರಳು ಮೂಡಿಸಿದ್ದರೆ, ಇದೀಗ ಸರ್ಕಾರದಿಂದ ಬಂದ ಪುರಸಭೆ ಆದೇಶ ಚುನಾಯಿತರನ್ನು ಗರಬಡಿದಂತೆ ಮಾಡಿದ್ದು ತಾವು ಮುಂದೇನು ಮಾಡಬೇಕು ಎಂಬ ದಿಕ್ಕು ತೋಚದಂತೆ ಮಾಡಿದೆ.
ಸದಸ್ಯರಿಂದ ಸಿಇಒ ಭೇಟಿ
ಸರ್ಕಾರದಿಂದ ಜನವರಿ ೫ ರಂದು ಬಂದ ಆದೇಶ ಪಂಚಾಯಿತಿ ಆಡಳಿತ ವ್ಯವಸ್ಥೆಯ ಮೇಲೆ ಬರಸಿಡಿಲಿನಂತೆ ಅಪ್ಪಳಿಸಿದ್ದರಿಂದ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಂಪ್ಯೂಟರ್ ಗಳು, ಲ್ಯಾಪ್ಟಾಪ್ಗಳು ಆಫ್ ಆಗಿವೆ. ಅಂದರೆ ಪಂಚಾಯಿತಿಯ ಜನಸಾಮಾನ್ಯರ ಯಾವುದೇ ಕೆಲಸ ಕಾರ್ಯಗಳಿಗೆ ತಡೆಬಿದ್ದಿದೆ.
ಹಾಗಾಗಿ ಕಳೆದ ೨೦೨೧ ರ ಮಾರ್ಚ್ನಲ್ಲಿ ನಾವು ಮಾಡಿದ ಪುರಸಭಾ ನಿರ್ಣಯದ ದೂರದೃಷ್ಟಿಯ ಬಗ್ಗೆ ಮತ್ತು ಇದೀಗ ಸರ್ಕಾರ ಪ್ರಕಟಿಸಿರುವ ಗೆಜೆಟ್ ನೋಟಿಫಿಕೇಷನ್ ಬಳಿಕ ಪಂಚಾಯಿತಿ ಆಡಳಿತದ ಮೇಲೆ ಮೂಡಿರುವ ಕರಿನೆರಳ ಛಾಯೆ ಬಗ್ಗೆ ನಮಗೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಅಥವಾ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಏಕೆ ನಿಖರ ಮಾಹಿತಿ ನೀಡಲಿಲ್ಲ ಎಂದು ಸದಸ್ಯರ ನಿಯೋಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕರ ಬಳಿ ತೆರಳಿ ತಮ್ಮ ನೋವು ಹೊರಹಾಕಿದ ಬಗ್ಗೆ ‘ಶಕ್ತಿ’ಗೆ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.
ಬಡವಾದ ಪಂಚಾಯಿತಿ
ಸದಾ ಜನಜಂಗುಳಿಯಿAದ ಕೂಡಿರುತ್ತಿದ್ದ ಮುಳ್ಳುಸೋಗೆ ಪಂಚಾಯಿತಿ ಆಲಯ ಇದೀಗ ಜನರಿಲ್ಲದೇ ಬಿಕೋ ಎನ್ನುತ್ತಿದೆ. ಈ ಬಗ್ಗೆ ಪಿಡಿಒ ಸುಮೇಶ್ ಅವರಲ್ಲಿ ಮಾಹಿತಿ ಕೇಳಿದಾಗ, ನನಗೆ ಬೇರೇನು ಗೊತ್ತಿಲ್ಲ. ಪಂಚಾಯಿತಿಯ ನಿವಾಸಿಗಳಿಗೆ ಅಗತ್ಯ ಸೇವೆಗಳಾದ ಕುಡಿವ ನೀರು ನೀಡಲಾಗುತ್ತಿದೆ. ಜೊತೆಗೆ ಸ್ವಚ್ಛತಾ ಸೇವೆ ನಿತ್ಯವೂ ನಡೆಯುತ್ತಿದೆ. ನಿವಾಸಿಗಳಿಂದ ಪಂಚಾಯಿತಿಗೆ ಬರಬೇಕಾದ ತೆರಿಗೆಗಳನ್ನು ಕಟ್ಟಿಸಿಕೊಳ್ಳುತ್ತಿದ್ದೇವೆ. ಆದರೆ ಸಿಸ್ಟಂಗಳು ಆಫ್ ಆಗಿರುವ ಕಾರಣ ತಾಪಂ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.
ಜಿಪಂ ಅಧಿಕಾರಿಗಳಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ ಮುಂದಿನ ಕ್ರಮ ಏನು ಮತ್ತು ಎತ್ತ ಎಂದು ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆದು ಉತ್ತರ ನಿರೀಕ್ಷಿಸಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ. ಈ ಬಗ್ಗೆ ಪತ್ರಿಕೆ ಯೊಂದಿಗೆ ಪ್ರತಿಕ್ರಿಯಿಸಿದ ಸ್ಥಳೀಯ ನಿವಾಸಿಯೂ ಆದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಕುಶಾಲನಗರ ಪುರಸಭೆಯಾಗಿ ಸರ್ಕಾರದಿಂದ ಅಧಿಕೃತವಾಗಿ ಘೋಷಣೆಯಾಗುವ ಮಾಹಿತಿ ನಮಗೆ ಮೊದಲೇ ಇತ್ತು. ಪುರಸಭೆಗಾಗಿ ಫೈಲ್ ರೆಡಿ ಮಾಡಿ ಡಿ.ಕೆ.ಶಿವಕುಮಾರ್ ಅರ್ಬನ್ ಡೆವಲಪ್ ಮೆಂಟ್ ಮಂತ್ರಿಯಾದಾಗ ಬೆಂಗಳೂರಿಗೆ ಸಾಕಷ್ಟು ಭಾರೀ ವಕೀಲ ನಾಗೇಂದ್ರ ಬಾಬು ಹಾಗೂ ವಿ.ಪಿ.ಶಶಿಧರ್ ಜೊತೆ ಓಡಾಟ ನಡೆಸಿದ್ದೆವು. ೨೦೨೧ ರಲ್ಲಿ ಮುಳ್ಳುಸೋಗೆ ಪಂಚಾಯಿತಿಗೆ ಚುನಾವಣೆ ಘೋಷಣೆಯಾದಾಗ ನಾನು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿದ್ದೆ. ಮುಳ್ಳುಸೋಗೆ ಪಂಚಾಯಿತಿಗೆ ಚುನಾವಣೆ ನಡೆಸಬೇಡಿ. ಕುಶಾಲನಗರ ಪುರಸಭೆಯಾಗಿ ಘೋಷಣೆ ಆದರೆ ಹೊಸದಾಗಿ ಚುನಾಯಿತರಿಗೆ ನಷ್ಟ ವಾಗುತ್ತದೆ ಎಂದು.
ಆದರೆ ಜಿಲ್ಲಾಡಳಿತವಾಗಲೀ ಶಾಸಕರಾಗಲೀ ಈ ಬಗ್ಗೆ ಅಂದು ದೂರದೃಷ್ಟಿ ಹರಿಸಲೇ ಇಲ್ಲ. ಈವಾಗ ನಮ್ಮ ಸದಸ್ಯರ ಸ್ಥಿತಿ ನೋಡಿದರೆ ಬೇಸರವಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸುತ್ತಾರೆ. ಏನೇ ಇರಲೀ, ಕುಶಾಲನಗರ ಪುರಸಭೆಗಾಗಿ ಸಾಮೂಹಿಕವಾಗಿ ನಿರ್ಣಯ ಮಾಡುವ ಮೂಲಕ ತಮ್ಮ ಚುನಾಯಿತ ಸ್ಥಾನ ಮಾನಗಳನ್ನು ಊರಿನ ಹಿತಕ್ಕಾಗಿ ತ್ಯಾಗ ಮಾಡುತ್ತಿರುವ ಚುನಾಯಿತರಿಗೆ ಭವಿಷ್ಯಕ್ಕೆ ಯಾವ ಧಕ್ಕೆಯೂ ಬಾರದಿರಲಿ ಎಂದು ಆಶಿಸಬಹುದಾ...!?
(ವಿಶೇಷ ಲೇಖನ :ಕೆ.ಎಸ್.ಮೂರ್ತಿ)