ಸೋಮವಾರಪೇಟೆ, ಜ. ೧೧: ಜಿಲ್ಲೆಯ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರಪೇಟೆ ಪಟ್ಟಣದಲ್ಲಿ ನಿರಂತರ ಧರಣಿ ಸತ್ಯಾಗ್ರಹ ನಡೆಸಿದ್ದು, ಈವರೆಗೂ ಯಾವುದೇ ಅಧಿಕೃತ ಆದೇಶ ಬಂದಿಲ್ಲ.

ಮುಂದಿನ ೧ ತಿಂಗಳೊಳಗೆ ಬೇಡಿಕೆ ಈಡೇರಿಸದಿದ್ದರೆ ವಿಧಾನ ಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕ ತಿಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ತಾಲೂಕು ಅಧ್ಯಕ್ಷ ಕೆ.ಎಂ. ದಿನೇಶ್, ಕಾಫಿ ಬೆಳೆಗಾರರ ೧೦ ಹೆಚ್.ಪಿ. ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ಕಾಫಿ, ಕಾಳುಮೆಣಸು ಏಲಕ್ಕಿ ಬೆಳೆಗಳಿಗೆ ಬೆಂಬಲ ಬೆಲೆ (ಎಂಎಸ್‌ಪಿ), ಸ್ವಾಮಿನಾಥನ್ ವರದಿ ಜಾರಿ, ಗ್ರಾಮೀಣ ರಸ್ತೆಗಳ ದುರಸ್ತಿಗೆ ಒತ್ತಾಯಿಸಿ ಡಿಸೆಂಬರ್ ೧೩ರಿಂದ ಒಟ್ಟು ೧೭ ದಿನಗಳ ಕಾಲ ರಾಜಕೀಯ ರಹಿತವಾಗಿ ಜೇಸಿ ವೇದಿಕೆಯಲ್ಲಿ ಧರಣಿ ಪ್ರತಿಭಟನೆ ನಡೆಸಿ, ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆದಿತ್ತು. ಆದರೆ ಈವರೆಗೆ ಬೇಡಿಕೆ ಈಡೇರಿಲ್ಲ ಎಂದರು.

ಧರಣಿ ಸಂದರ್ಭ ಎಲ್ಲಾ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಬೆಂಬಲ ನೀಡಿದ್ದರು. ಅಧಿವೇಶನದಲ್ಲಿಯೇ ಈ ಬಗ್ಗೆ ಪ್ರಸ್ತಾಪಿಸಿ ಬೇಡಿಕೆ ಈಡೇರಿಸುವಂತೆ ಒತ್ತಾಯ ಮಾಡಿದ್ದೆವು. ಈ ಬಗ್ಗೆ ಶಾಸಕರುಗಳು- ಮುಖ್ಯಮಂತ್ರಿಗೆ ಪತ್ರ ಬರೆದಿರುವುದನ್ನು ಹೊರತುಪಡಿಸಿ ಬೇರೆ ಬೆಳವಣಿಗೆ ಆಗಿಲ್ಲ. ಮುಂದಿನ ೧ ತಿಂಗಳ ಒಳಗೆ ಸಮಸ್ಯೆ ಬಗೆಹರಿಸದಿದ್ದರೆ ವಿಧಾನ ಸೌಧ ಚಲೋ ಹಮ್ಮಿಕೊಳ್ಳಲಾಗುವುದು ಎಂದರು.

ಗೋಷ್ಠಿಯಲ್ಲಿದ್ದ ಸಂಘದ ಪ್ರಮುಖ ಹೂವಯ್ಯ ಮಾಸ್ಟರ್ ಮಾತನಾಡಿ, ಕಳೆದ ೨೦೦೬ರಿಂದಲೂ ಈ ಬಗ್ಗೆ ಹೋರಾಟ ನಡೆಯುತ್ತಿದೆ. ಅನೇಕ ಬಾರಿ ಜಿಲ್ಲೆಯ ಶಾಸಕರಿಬ್ಬರಿಗೂ ಮನವಿ ಪತ್ರ ನೀಡಲಾಗಿದೆ. ಇವರುಗಳು ಒತ್ತಡ ತಂದು ಮುಖ್ಯಮಂತ್ರಿಗಳಿAದ ಉಚಿತ ವಿದ್ಯುತ್ ನೀಡುವ ಆದೇಶ ತರಬೇಕು. ತಪ್ಪಿದಲ್ಲಿ ವಿಧಾನ ಸೌಧ ಮುತ್ತಿಗೆಗೆ ರೈತರೊಂದಿಗೆ ಶಾಸಕರು ಬರಬೇಕು ಎಂದು ಮನವಿ ಮಾಡಿದರು.

ಸಂಘದ ಜಿಲ್ಲಾ ಉಪಾಧ್ಯಕ್ಷ ಹೊಸಗುತ್ತಿ ಶಂಕರಪ್ಪ ಮಾತನಾಡಿ, ಕೊಡಗು ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ ಕೃಷಿಕರಿಗೆ ಉಚಿತ ವಿದ್ಯುತ್ ನೀಡುತ್ತಿದ್ದು, ನಮಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಈವರೆಗೆ ೨೩ ಬೆಳೆಗಳನ್ನು ಬೆಂಬಲ ಬೆಲೆ ನಿಯಮದೊಳಗೆ ತರಲಾಗಿದ್ದು, ಕಾಫಿ, ಕರಿಮೆಣಸು ಹಾಗೂ ಏಲಕ್ಕಿಯನ್ನೂ ಎಂ.ಎಸ್.ಪಿ.ಯೊಳಗೆ ತರಬೇಕು. ಈ ಬಗ್ಗೆ ಶಾಸಕರು ಹಾಗೂ ಸಂಸದರು ಗಮನಹರಿಸಬೇಕು. ಗ್ರಾಮೀಣ ರಸ್ತೆಗಳು ಗುಂಡಿಬಿದ್ದಿವೆ. ಗ್ರಾಮೀಣ ಭಾಗವನ್ನು ಸಂಪೂರ್ಣ ನಿರ್ಲಕ್ಷಿಸಲಾಗುತ್ತಿದೆ. ರೈತರ ಶೋಷಣೆಯಾಗುತ್ತಿದೆ. ತಾಲೂಕಿನಲ್ಲಿ ಮಳೆಹಾನಿ ಪರಿಹಾರ ವಿತರಣೆಯಲ್ಲೂ ಹೆಚ್ಚಿನ ರೈತರಿಗೆ ಅನ್ಯಾಯವಾಗಿದೆ. ಸೂಕ್ತ ಪರಿಹಾರ ಸಿಕ್ಕಿಲ್ಲ ಎಂದು ದೂರಿದರು.

ಗೋಷ್ಠಿಯಲ್ಲಿ ಸಂಘದ ಮುಖಂಡರಾದ ಕೆ.ವಿ. ಸುಬ್ಬಯ್ಯ, ಜಿ.ಎಸ್. ಚಂದ್ರಶೇಖರ್ ಅವರುಗಳು ಉಪಸ್ಥಿತರಿದ್ದರು.