ಭಾಗಮಂಡಲ - ತಲಕಾವೇರಿ ಎರಡೂ ಪುಣ್ಯ ಕ್ಷೇತ್ರಗಳಲ್ಲಿ ಕೆಲವು ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿಗಳು ಹಾಗೂ ಕಾನೂನು ಕಟ್ಟಳೆಗಳನ್ನು ಅವಲೋಕಿಸುತ್ತಾ ಬಂದಲ್ಲಿ ಭಾಗಮಂಡಲ ಜನತೆಯನ್ನು ಎಲ್ಲಾ ಸರಕಾರಗಳೂ ನಿರ್ಲಕ್ಷö್ಯ ಮಾಡುತ್ತಾ ಬಂದಿರುವುದು ಕಂಡುಬರುತ್ತಿದೆ. ಇಲ್ಲಿನ ಜನತೆಯ ಮಾತಿಗೆ ಕವಡೆ ಕಾಸಿನ ಬೆಲೆ ಕೊಡುತ್ತಿಲ್ಲ. ಎಲ್ಲವೂ ಸರಕಾರದ ಆದೇಶದಂತೆ ನಡೆಯುತ್ತದೆ. ಇಲ್ಲಿ ಕೆಲವೊಂದು ಕಾಮಗಾರಿಗಳು ನಾಡಿಗೆ ಅವಶ್ಯಕತೆ ಇಲ್ಲದಿದ್ದರೂ ನಡೆಯುತ್ತಿದೆ. ಉದಾಹರಣೆಗೆ ೨೦೦೮ ರಲ್ಲಿ ಭಾಗಮಂಡಲ ತ್ರಿವೇಣಿ ಸಂಗಮದ ಬಳಿ ಅಂದಾಜು ರೂ. ೮೦ ಲಕ್ಷ ವೆಚ್ಚದಲ್ಲಿ ಮುಡಿಶೆಡ್ ಕಟ್ಟಲಾಯಿತು. ಈ ಕಟ್ಟಡ ಈಗ ನಿಷ್ಪçಯೋಜಕವಾಗಿದ್ದು, ಪಾಳು ಬೀಳುತ್ತಿದೆ. ಮಳೆಗಾಲದಲ್ಲಿ ಪ್ರವಾಹ ಬಂದಾಗ ೨ ನದಿಯ ನೀರನ್ನು ಈ ಕಟ್ಟಡ ತಡೆಹಿಡಿಯುವುದರಿಂದ ಪೇಟೆಗೆ ಹಾಗೂ ದೇವಾಲಯಕ್ಕೂ ನೀರು ನುಗ್ಗುತ್ತಿದೆ. ಇದನ್ನು ಭಾಗಮಂಡಲ ಜನತೆಯ ವಿರೋಧದ ನಡುವೆಯೇ ಕಟ್ಟಲಾಯಿತು.

ಕಳೆದ ಬಾರಿಯ ವ್ಯವಸ್ಥಾಪನಾ ಸಮಿತಿಯಲ್ಲಿ ಸ್ಥಳೀಯ ಓರ್ವ ಮಹಿಳೆ ಇದ್ದು, ಉಳಿದವರೆಲ್ಲರೂ ಹೊರಗಿನವರಾಗಿದ್ದರು. ಹೀಗಾದರೆ ನಮ್ಮ ಎರಡೂ ಕ್ಷೇತ್ರಗಳ ಅಭಿವೃದ್ಧಿ ಮಾಡುವುದು ಹೇಗೆ? ಮುಂದಿನ ಸಮಿತಿಯಲ್ಲಿ ಸ್ಥಳೀಯರಿಗೆ ಆದ್ಯತೆ ಕೊಡಲಿ. ಆಗ ನಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಸಹಾಯವಾಗಲಿದೆ. ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಇಂಗುಗುAಡಿ ತೆಗೆದು ಬೆಟ್ಟ ಜರಿದು ಅರ್ಚಕ ಕುಟುಂಬವೇ ನಾಶವಾಯಿತು. ಬ್ರಹ್ಮಗಿರಿ ಬೆಟ್ಟಕ್ಕೆ ಭಕ್ತರು ಹತ್ತುವುದನ್ನು ತಡೆಯಲಾಗಿದೆ. ಇದಕ್ಕೆ ಪ್ರವಾಸಿಗರು ಬೊಬ್ಬೆ ಹೊಡೆದು, ಮೋಜು-ಮಸ್ತಿ ಮಾಡುತ್ತಾರೆಂದು ಕಾರಣ ಕೊಡಲಾಯಿತು.

ಬಿಗಿಯಾದ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದರೆ ಪ್ರವಾಸಿಗರನ್ನು ಹದ್ದುಬಸ್ತಿನಲ್ಲಿ ಇಡಬಹುದಲ್ಲವೇ? ಕಾವೇರಿ ಮಾತೆಗೆ ಕುಂಕುಮಾರ್ಚನೆ ಮಾಡುವುದನ್ನು ಬ್ರಹ್ಮ ಕುಂಡಿಕೆಯ ಬಳಿಯಿಂದ ಬೇರೆಡೆಗೆ ಸ್ಥಳಾಂತರ ಮಾಡಲಾಯಿತು. ಇದರಿಂದ ಸ್ಥಳೀಯರ ಮನಸ್ಸಿಗೆ ನೋವುಂಟು ಮಾಡಿದೆ. ಈ ಎರಡೂ ಪುಣ್ಯಕ್ಷೇತ್ರಗಳೊಡನೆ ಸ್ಥಳೀಯರಿಗೆ ಅವಿನಾಭಾವ ಸಂಬAಧವಿದೆ. ಮಳೆ ಜಾಸ್ತಿ ಆದಲ್ಲಿ ಹುತ್ತರಿ ಹಬ್ಬ ಕಳೆದು ಹಾಗೂ ಮಳೆ ಬರಲು ಮೇ ತಿಂಗಳಿನಲ್ಲಿ ತಲಕಾವೇರಿಯಲ್ಲಿ ತಣ್ಣಿಮಾನಿ, ತಾವೂರು, ಚೇರಂಗಾಲ ಹಾಗೂ ಕೋರಂಗಾಲ ಗ್ರಾಮದ ತಕ್ಕಮುಖ್ಯಸ್ಥರು ಹಾಗೂ ಊರಿನವರು ಹಾಲು ಬಳ್ಳಿ ಕೊಡುವ ಪದ್ಧತಿ ರೂಢಿಯಲ್ಲಿದೆ. ಹಾಗೆಯೇ ಮಳೆಗಾಲದಲ್ಲಿ ಅತಿಯಾದ ಪ್ರವಾಹ ಬಂದಾಗ ಭಾಗಮಂಡಲ ಜನತೆ ಸ್ಥಳೀಯ ಕ್ಷೇತ್ರ ಪುರೋಹಿತರ ಮುಂದಾಳತ್ವದಲ್ಲಿ ಗಂಗಾ ಪೂಜೆ ನೆರವೇರಿಸಿದಾಗ ಕಾವೇರಿ ತಾಯಿ ಶಾಂತಳಾಗಿದ್ದನ್ನು ಹಲವಾರು ಬಾರಿ ನಾವು ಕಂಡಿದ್ದೇವೆ. ಇದೆರಡೂ ಕ್ಷೇತ್ರಗಳು ಶತಮಾನಗಳಿಂದಲೂ ತೀರ್ಥ ಕ್ಷೇತ್ರವೇ ಹೊರತು ಪ್ರವಾಸಿ ಕೇಂದ್ರವಲ್ಲ. ಇದನ್ನೆಲ್ಲಾ ಮಾಡಿದ್ದು ಯಾರು ಸ್ಥಳೀಯರೆ? ಕಾವೇರಿ ಜಾತ್ರಾ ಸಂದರ್ಭ ಭಾಗಮಂಡಲದಲ್ಲಿ ಗೊನೆ ಕಡಿದು ಕಟ್ಟು ಬೀಳುತ್ತಿದ್ದು ಇಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಹಾಗೂ ಸೇವನೆ ನಿಷಿದ್ಧವಾಗಿದ್ದು ನಾವುಗಳು ಊರ ದೇವರಾದ ಭಗಂಡೇಶ್ವರ ಹಾಗೂ ಗ್ರಾಮ ದೇವತೆ ಕಾವೇರಿ ತಾಯಿಯ ಕಟ್ಟುಪಾಡುಗಳನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಹಾಗೆಯೇ ಕೊಡಗಿನ ದೇವರಾದ ಕಾವೇರಿ ತಾಯಿಯ ಕಟ್ಟುಪಾಡುಗಳನ್ನು ಕೊಡಗಿನ ಸಮಸ್ತ ಜನರೂ ಆಚರಿಸಿಕೊಂಡು ಬರಬಹುದಲ್ಲವೆ?

ಭಾಗಮಂಡಲ ಮೇಲ್ಸೇತುವೆ ಕಾಮಗಾರಿ ಸಾಗುತ್ತಿದೆ. ವರ್ಷದಲ್ಲಿ ೩ ಬಾರಿ ಷಷ್ಠಿ, ಶಿವರಾತ್ರಿ, ಬ್ರಹ್ಮ ಕಲಶ, ವಾರ್ಷಿಕೋತ್ಸವದ ೩ ದಿನ ದೇವರುಗಳನ್ನು ಹೊತ್ತು ತ್ರಿವೇಣಿ ಸಂಗಮದ ಬಳಿ(ಇಲ್ಲಿ ಸ್ಲಾö್ಯಬ್ ಅಳವಡಿಸಲು ಬಾಕಿ ಇದೆ)ಯಿರುವ ಕಟ್ಟೆಯಲ್ಲಿ ದೇವರನ್ನು ಇರಿಸಿ ಪೂಜೆ ಮಾಡಿಕೊಂಡು ಬರುವುದು ಅನಾದಿಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಪದ್ಧತಿ.

ಇನ್ನು ಮುಂದೆ ದೇವರು ಕೆಳಗೆ ಹೋಗುವಾಗ ಮೇಲೆ ಮನುಷ್ಯರು ಮತ್ತು ವಾಹನಗಳು ಸಂಚರಿಸಿದರೆ ದೇವರ ತಲೆಯ ಮೇಲೆ ನಡೆದಂತಾಗುವುದಿಲ್ಲವೇ. ಇಷ್ಟು ದೊಡ್ಡ ಕಾಮಗಾರಿ ಆಗುವಾಗ ದಿನವೂ ಸರಕಾರಿ ಇಂಜಿನಿಯರ್‌ಗಳು ಇರಬೇಕಲ್ಲವೇ? ಇತ್ತೀಚೆಗೆ ರಾತ್ರಿ ೮ ರ ಸಮಯದಲ್ಲಿ ಮೇಲ್ಸೇತುವೆಯ ಮೈನ್ ಬೀಂಗೆ ಕಾಂಕ್ರಿಟ್ ಹಾಕುವಾಗ ಕುಸಿದು ಬಿದ್ದಿದೆ. ಪೇಟೆ ಮಧ್ಯದಲ್ಲಿ ಹೀಗಾದರೆ ಏನು ಮಾಡುವುದು? ಇಲ್ಲಿ ಕೆಲಸಕ್ಕೆ ಸ್ಥಳೀಯರಿಂದ ತೊಂದರೆಯಾಗುತ್ತಿದೆ ಎಂದು ಸ್ಥಳೀಯರ ಮೇಲೆ ಆರೋಪ ಮಾಡುತ್ತಿದ್ದಾರೆ. ಇಲ್ಲಿ ಕೆಲವೊಂದು ಗೋಲ್‌ಮಾಲ್ ನಡೆದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಉದಾಹರಣೆಗೆ ೧೦ ರಿಂದ ೨೦ ವರ್ಷದ ಹಿಂದೆ ರಸ್ತೆಗೆ ಜಾಗ ಬಿಟ್ಟು ಕಟ್ಟಿದ ಕಟ್ಟಡ ಮಾಲೀಕರಿಗೆ ಬಿಟ್ಟ ಜಾಗಕ್ಕೆ ಹಣ ಕೊಡಲಾಗಿದೆ. ಆದರೆ ದಾಖಲೆ ಪಕ್ಕಾ ಇದ್ದವರಿಗೆ ಹಣಕೊಡಲು ಸತಾಯಿಸಲಾಗುತ್ತಿದೆ. ಕೆ.ಇ.ಬಿ. ಅವರು ‘ಎಸ್ಟಿಮೇಟ್’ ಮಾಡಿ ಕಂಬ ತೆಗೆಯಲು ತೀರ್ಮಾನಿಸಿದರೆ ನೀರಾವರಿ ನಿಗಮದವರು ಬೇಡವೆಂದು ತಡೆಯುತ್ತಾರೆ. ಇದೆಲ್ಲಾ ಉದಾಹರಣೆಗಳಷ್ಟೇ. ಇದೆಲ್ಲದರ ಬಗ್ಗೆ ತನಿಖೆಯಾದರೆ ಇನ್ನೂ ಹಲವು ಅವ್ಯವಹಾರಗಳು ಬೆಳಕಿಗೆ ಬರುವುದು ನಿಶ್ಚಿತ. ಎಲ್ಲಾ ಸಂಘ-ಸAಸ್ಥೆಯವರಲ್ಲಿ ಹಾಗೂ ಸರಕಾರದವರಲ್ಲಿ ಒಂದು ಮನವಿ ಏನೆಂದರೆ ಇಲ್ಲಿ ನಡೆಯುವ ಕಾಮಗಾರಿ ಶತಮಾನಕ್ಕಿರುವಷ್ಟು ದೊಡ್ಡ ಕಾಮಗಾರಿಯಾಗಿದ್ದು, ಎಲ್ಲರೂ ಇದನ್ನು ಪರಿಶೀಲಿಸಿ ಈ ಬಗ್ಗೆ ಗಮನ ಹರಿಸಬೇಕೆಂದು ಕೇಳಿಕೊಳ್ಳುತ್ತೇನೆ.

- ಪಾಣತ್ತಲೆ ಜೀವನ್ ಕುಮಾರ್, ಭಾಗಮಂಡಲ.

ಮೊ. ೯೩೫೩೦೭೬೪೨೪