ಸೋಮವಾರಪೇಟೆ, ಜ. ೧೧: ಕಾಳುಮೆಣಸು ಹಾಗೂ ಏಲಕ್ಕಿ ಬೆಳೆಗಾರರು ತಮ್ಮ ಬೆಳೆಗಳ ಗುಣಮಟ್ಟ ಕಾಯ್ದುಕೊಂಡಾಗ ಮಾತ್ರ ಉತ್ತಮ ಬೆಲೆ ನಿರೀಕ್ಷೆ ಮಾಡಬಹುದು ಎಂದು ಸಂಬಾರ ಮಂಡಳಿ ಸದಸ್ಯ ಎಸ್.ಜಿ.ಮೇದಪ್ಪ ಹೇಳಿದರು.

ಸೋಮವಾರಪೇಟೆ ಸಂಬಾರ ಮಂಡಳಿ ವತಿಯಿಂದ ಬೀಟಿಕಟ್ಟೆ ಪ್ಲಾಂರ‍್ಸ್ ರಿಕ್ರಿಯೇಷನ್ ಕ್ಲಬ್‌ನಲ್ಲಿ ನಡೆದ ಕಾಳುಮೆಣಸಿನ ಗುಣಮಟ್ಟದ ಸುಧಾರಣೆ ತರಬೇತಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು.

ಬೆಳೆಗಾರರು ಉತ್ಪಾದನೆಯತ್ತ ಹೆಚ್ಚಿನ ಆಸಕ್ತಿ ವಹಿಸಿದರೆ, ಬೆಲೆ ಏರಿಳಿತದಿಂದ ಆಗುವ ನಷ್ಟವನ್ನು ಹೊಂದಾಣಿಕೆ ಮಾಡಿಕೊಳ್ಳಬಹುದು. ಕಾಫಿ, ಕಾಳುಮೆಣಸು ಮಿಶ್ರ ಬೆಳೆಗೆ ಆದ್ಯತೆ ನೀಡಬೇಕಾಗಿದೆ. ಸಂಬಾರ ಮಂಡಳಿಯಿAದ ರೈತರಿಗೆ ಲಭ್ಯವಿರುವ ಸೌಲಭ್ಯಗಳನ್ನು ಕೊಡಿಸಲು ಶ್ರಮಿಸುವುದಾಗಿ ಹೇಳಿದರು.

ಸಕಲೇಶಪುರ ಸಂಬಾರ ಮಂಡಳಿಯ ಪ್ರಾದೇಶಿಕ ಕಚೇರಿಯ ಉಪ ನಿರ್ದೇಶಕ ಜಾನ್ಸಿ ಮಣಿತೊಟ್ಟಂ ಮಾತನಾಡಿ, ರಾಜ್ಯದಲ್ಲಿ ಅತೀಹೆಚ್ಚು ಕಾಳುಮೆಣಸು ಉತ್ಪಾದಿಸಲಾಗುತ್ತಿದೆ. ಸ್ವಂತ ಬಳಕೆ ಹಾಗೂ ವಿದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಪ್ತಾಗುತ್ತಿದೆ. ಈ ಕಾರಣದಿಂದ ಬೆಳೆಯ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದರು.

ಕಳೆದ ೧೫ ವರ್ಷಗಳ ಹಿಂದೆ ಕೇರಳದ ವೈನಾಡಿನಲ್ಲಿ ಅತೀ ಹೆಚ್ಚು ಕಾಳುಮೆಣಸು, ಏಲಕ್ಕಿ ಉತ್ಪಾದಿಸಲಾಗುತ್ತಿತ್ತು. ಈಗ ಉತ್ಪಾದನೆ ಕುಂಠಿತವಾಗಿದೆ. ಬಳ್ಳಿ ರೋಗಪೀಡಿತವಾಗಿ ನಾಶವಾಗಿವೆ. ಸಂಬಾರ ಬೆಳೆಗೆ ಕೊಡಗು ಸೂಕ್ತ ಪ್ರದೇಶವಾಗಿದ್ದು, ಅತಿಯಾದ ರಾಸಾಯನಿಕ ಬಳಕೆಯಿಂದ ಸಮಸ್ಯೆಯಾಗುವ ಸಂಭವವಿದ್ದು, ಸಾವಯವ ಕೃಷಿಗೆ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ಉಪಾಧ್ಯಕ್ಷ ಕೆ.ವಿ. ಗಣೇಶ್ ವಹಿಸಿದ್ದರು. ಮಡಿಕೇರಿ ಸಂಬಾರ ಮಂಡಳಿ ಸಹಾಯಕ ನಿರ್ದೇಶಕ ಎಸ್.ಎಸ್. ಬಿಜು, ಸೋಮವಾರ ಪೇಟೆ ಸಂಬಾರ ಮಂಡಳಿಯ ಕ್ಷೇತ್ರಾಧಿಕಾರಿ ಎನ್.ಬಿ. ಲೋಕೇಶ್, ದೋಣಿಗಲ್ಲು ಸಂಶೋಧನ ಕೇಂದ್ರದ ವಿಜ್ಞಾನಿ ಡಾ. ಶ್ರೀಕೃಷ್ಣ ಭಟ್ ಉಪಸ್ಥಿತರಿದ್ದರು.