ಅಭ್ಯತ್‌ಮಂಗಲದ ಯುವಕ ಸಾವು
ಸಿದ್ದಾಪುರ, ಜ.೧೧ : ಬೆಂಗಳೂರಿನ ಹೊರವಲಯದ ಕುಂಬಳಗೋಡು ಬಳಿ ಜಲ್ಲಿ ಸಾಗಿಸುತ್ತಿದ್ದ ಟಿಪ್ಪರ್‌ವೊಂದು ಎರಡು ಕಾರು ಮತ್ತು ಒಂದು ಬೈಕ್ ಮೇಲೆ ಬಿದ್ದ ಪರಿಣಾಮ ಆರು ಮಂದಿ ಮೃತಪಟ್ಟಿದ್ದಾರೆ. ಬೈಕ್ ನಲ್ಲಿದ್ದ ಯುವಕನನ್ನು ಕೊಡಗಿನ ಅಭ್ಯತ್‌ಮಂಗಲದ ಜಿತಿನ್ ಜಾರ್ಜ್ ಎಂದು ಗುರುತಿಸಲಾಗಿದೆ.
ಸೋಮವಾರ ಈ ಘಟನೆ ಸಂಭವಿಸಿದ್ದು, ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ಜಿತಿನ್ ಬೈಕ್‌ನಲ್ಲಿ ಬರುತ್ತಿದ್ದಾಗ ಟಿಪ್ಪರ್ ಮಗುಚಿದೆ. ಮೃತ ಜಿತಿನ್ ಅಭ್ಯತ್‌ಮಂಗಲದ ಗ್ರೀನ್ ಫೀಲ್ಡ್ ಎಸ್ಟೇಟ್ ನ ವ್ಯವಸ್ಥಾಪಕ ಜಾರ್ಜ್ ಅವರ ಪುತ್ರ.
ಮೃತದೇಹವನ್ನು ಇಂದು ಸಂಜೆ ಜಿಲ್ಲೆಗೆ ತರಲಾಗುವುದು, ನಂತರ ಮೂಲ ಊರಾದ ಕೇರಳದ ಪಾಲೇಕಾಡ್ ಗೆ ಕೊಂಡೊಯ್ಯಲಾಗುವುದು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಜಿತಿನ್ ಒಂದು ವರ್ಷದ ಹಿಂದೆಯಷ್ಟೇ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದರು. ಮೃತರು ತಂದೆ, ತಾಯಿ ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.