ಭವ್ಯಾತಿ ಭವ್ಯ ಭಾರತ ದೇಶದ ಚರಿತ್ರೆಯಲ್ಲಿ ಬ್ರಿಟಿಷ್ ಆಳ್ವಿಕೆಯ ಕರಾಳ ಅಧ್ಯಾಯಗಳಲ್ಲಿ ಕಾಲಾಪಾನಿ ಎಂಬ ಘನಘೋರ ಶಿಕ್ಷೆಯು ಕೂಡ ಒಂದು. ಈ ಕಾಲಾಪಾನಿ ಹೆಸರು ಕೇಳುತ್ತಿದ್ದ ಹಾಗೆ ಎದೆಯಲ್ಲಿ ಏನೋ ಒಂದು ಭಯ ಮತ್ತು ಆತಂಕದ ಕರಿಛಾಯೆ ಒಮ್ಮೆಲೆ ಎಲ್ಲರನ್ನೂ ಆವರಿಸಿ ಬಿಡುತ್ತದೆ. ಭಾರತಾಂಭೆಗೆ ಬ್ರಿಟಿಷರು ತೊಡಿಸಿದ ಸಂಕೋಲೆಗಳನ್ನು ಕಿತ್ತೆಸೆಯಲು ಪ್ರಯತ್ನಿಸಿದ ಸಹಸ್ರಾರು ಮಂದಿ ಸ್ವಾತಂತ್ರ‍್ಯ ವೀರರು ಈ ಘೋರಾತಿಘೋರ ಕಾಲಾಪಾನಿ ಶಿಕ್ಷೆಗೆ ಗುರಿಯಾಗಿದ್ದರು. ಈ ಒಂದು ಕಾರಾಗೃಹವು ಭಾರತದಿಂದ ಸಾವಿರಾರು ಮೈಲಿಗಳಷ್ಟು ದೂರವಿತ್ತಲ್ಲದೆ ಇದು ಅಗಾಧವಾದ ಕಡಲಿನ ನಡುವಿನಲ್ಲಿದ್ದ ಕಾರಣ ಇದಕ್ಕೆ ಬ್ರಿಟಿಷ್ ಅಧಿಕಾರಿಗಳು ಕಾಲಾಪಾನಿ ಎಂದು ಕರೆಯುತ್ತಿದ್ದರು. ಇನ್ನು ಅದೆಷ್ಟೋ ಮಂದಿ ಕ್ರಾಂತಿಕಾರಿ ಹೋರಾಟಗಾರರು ಮರಳಿ ಬಾರದೆ ಕರಿನೀರಿನ ಮಧ್ಯದಲ್ಲಿ ತಮ್ಮ ಪ್ರಾಣವನ್ನೇ ಕಳೆದು ಕೊಳ್ಳಬೇಕಾಯಿತು. ಈ ಕಾಲಾಪಾನಿಯ ಘೋರ ಅಮಾನವೀಯ ದಂಡನೆ ಭಾರತದ ಇತಿಹಾಸದಲ್ಲೊಂದು ಕರಾಳ ಅಧ್ಯಾಯವಾಗಿದೆ. ಇದಕ್ಕೆ ಸಾಕ್ಷಿಯಾದ ಕೇಂದ್ರವೇ ಅಂಡಮಾನ್, ನಿಕೊಬಾರ್ ದ್ವೀಪಸಮೂಹ ಮತ್ತು ಅಲ್ಲಿದ್ದಂತಹ ಸೆಲ್ಯುಲರ್ ಕಾರಾಗೃಹ. ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ದೇಶದ ಸ್ವಾತಂತ್ರ‍್ಯಕ್ಕಾಗಿ ಮತ್ತು ಬ್ರಿಟಿಷರ ವಿರುದ್ಧ ದಂಗೆ ಎದ್ದ ವೀರ-ಸೇನಾನಿಗಳನ್ನು ಹೊರಜಗತ್ತಿನ ಜೊತೆ ಸಂಪರ್ಕಿಸದAತೆ ತಡೆಯಲು ಬ್ರಿಟಿಷ್ ಅಧಿಕಾರಿಗಳು ಯೋಜನೆಯೊಂದನ್ನು ಸಿದ್ದಪಡಿಸಿ ಭಾರತದಿಂದ ಅತೀ ದೂರದ ಪ್ರದೇಶವೊಂದರಲ್ಲಿ ನಿರ್ಮಾಣ ಮಾಡಿದ ಆ ಕರಾಳ ಕಾರಾಗೃಹವೇ ‘ದಿ ಗ್ರೇಟ್ ಸೆಲ್ಯುಲರ್ ಜೈಲ್' ಈ ಕಾರಾಗೃಹಕ್ಕೆ ಭಾರತದ ನಾನಾ ಭಾಗಗಳಿಂದ ಕಳುಹಿಸಿ ಕೊಡಲಾಗುತ್ತಿದ್ದ ಕ್ರಾಂತಿವೀರರನ್ನು ಬ್ರಿಟಿಷರು ಕಬ್ಬಿಣದ ಸರಪಳಿಯಿಂದ ಬಂಧಿಸಿ ಕ್ರೂರ ಶಿಕ್ಷೆಗೆ ಗುರಿಪಡಿಸಿ ಹಿಂಸೆ ಕೊಡುತ್ತಿದ್ದರು. ಈ ಜೈಲಿನ ಕೈದಿಗಳನ್ನು ಪ್ರತಿನಿತ್ಯ ಎಣ್ಣೆ ತೆಗೆಯುವ ಗಾಣದ ಎತ್ತುಗಳಾಗಿ ಬಳಸುತ್ತಿದ್ದರು.

ಸೆಲ್ಯುಲರ್ ಕಾರಾಗೃಹದ ವಿಶೇಷತೆ: ಅಕ್ಟೋಪಸ್ ಮಾದರಿಯನ್ನು ಹೋಲುವ ಈ ಸೆಲ್ಯುಲರ್ ಕಾರಾಗೃಹವು ಒಟ್ಟು ಏಳು ರೆಕ್ಕೆಗಳ ಆಕಾರ ದಲ್ಲಿದ್ದು ಪ್ರತಿ ರೆಕ್ಕೆಯಲ್ಲೂ ಮೂರು ಅಂತಸ್ತುಗಳನ್ನು ಹೊಂದಿದ್ದು ಇದು ಸರಿ ಸುಮಾರು ೬೯೬ ಕಿರಿದಾದ ಕೊಠಡಿಗಳನ್ನು ಒಳಗೊಂಡಿದೆ. ಈ ಏಳು ರೆಕ್ಕೆಗಳಿಂದ ಕೂಡಿದ ಕಾರಾಗೃಹದ ಮಧ್ಯದಲ್ಲಿ ಒಂದು ಎತ್ತರದ ಟವರ್‌ನ್ನು ಕೂಡ ನಿರ್ಮಾಣ ಮಾಡಲಾಗಿದೆ. ಈ ಮಧ್ಯದ ಟವರಿನಿಂದ ಏಳು ರೆಕ್ಕೆಯನ್ನೊಳಗೊಂಡAತೆ ಇಡೀ ಜೈಲಿನಲ್ಲಿ ರುವ ಕೈದಿಗಳ ಚಲನವಲನಗಳ ಮೇಲೆ ತೀವ್ರ ನಿಗಾ ವಹಿಸುವ ಉದ್ದೇಶದಿಂದ ಇದನ್ನು ನಿರ್ಮಾಣ ಮಾಡಲಾಗಿದೆ. ಹಾಗೂ ಈ ಟವರಿನ ಒಳಗಡೆ ಬೃಹತ್ ಗಂಟೆಯೊAದನ್ನು ಕೂಡ ಅಳವಡಿಸಲಾಗಿದೆ. ಏಕೆಂದರೆ ಒಂದು ವೇಳೆ ಕೈದಿಗಳಿಂದ ಏನಾದರೂ ಅನಾಹುತಗಳು ಉಂಟಾಗುವ ಸಂದರ್ಭದಲ್ಲಿ ಟವರಿನ ಒಳಗಿರುವ ಗಂಟೆಯನ್ನು ಬಾರಿಸುವ ಮೂಲಕ ಸಂಬAಧಿಸಿದ ಅಧಿಕಾರಿಗಳನ್ನು ಎಚ್ಚರಿಸಲಾಗುತಿತ್ತು. ಅದಲ್ಲದೆ ಕಾರಾಗೃಹದಲ್ಲಿನ ಪ್ರತಿ ಬ್ಯಾರಕ್ (ಕೋಣೆ) ೪.೫ ಮೀಟರ್ ಉದ್ದ ಮತ್ತು ೨.೭ ಮೀಟರ್ ಅಗಲವನ್ನು ಹೊಂದಿದೆ. ಇನ್ನೂ ಈ ಬ್ಯಾರಕ್‌ಗಳಿಗೆ ಗಾಳಿಯಾಡಲು ಬೇಕಾಗಿದ್ದ ಚಿಕ್ಕ ಕಿಂಡಿ (ಕಿಟಕಿ)ಯನ್ನು ಪ್ರತಿ ಕೋಣೆಯ ಗೋಡೆಯ ಮೂರುವರೆ ಮೀಟರ್ ಎತ್ತರದಲ್ಲಿರುತಿತ್ತು. ಹೀಗಾಗಿ ಇಡೀ ಕೋಣೆಯು ಕತ್ತಲಿನಿಂದ ತುಂಬಿ ಹೋಗಿರುತ್ತಿದ್ದವು. ಅಲ್ಲದೆ ಇಲ್ಲಿನ ಕೈದಿಗಳಿಗೆ ಒಂದು ಕೋಣೆಯಿಂದ ಮಗದೊಂದು ಕೋಣೆಗೆ ಯಾವುದೇ ರೀತಿಯ ಸಂಪರ್ಕಕ್ಕೂ ಅವಕಾಶವಿಲ್ಲದಂತೆ ನಿರ್ಮಾಣ ಮಾಡಲಾಗಿತ್ತು. ಈ ಬೃಹತ್ತಾದ ಕಾರಾಗೃಹದ ನಿರ್ಮಾಣಕ್ಕಾಗಿ ಕೆಂಪು ಇಟ್ಟಿಗೆಯನ್ನು ಬಳಸಲಾಯಿತ್ತಲ್ಲದೆ ಈ ಕೆಂಪು ಇಟ್ಟಿಗೆಯನ್ನು ಬರ್ಮಾ ದೇಶದಿಂದ ತರಿಸಲಾಗಿತ್ತು. ಕೇವಲ ಭಾರತದ ಸ್ವಾತಂತ್ರ‍್ಯ ಹೋರಾಟಗಾರರನ್ನು ಬಂಧಿಸಿ ಚಿತ್ರಹಿಂಸೆ ನೀಡುವ ಉದ್ದೇಶದಿಂದಲೇ ಇದನ್ನು ನಿರ್ಮಾಣ ಮಾಡಲಾಯಿತು. ಈ ಕರಿನೀರಿನ ಶಿಕ್ಷೆಗೆ ಗುರಿಯಾದ ಸ್ವಾತಂತ್ರ‍್ಯ ಹೋರಾಟಗಾರರಲ್ಲಿ ವೀರ ಸಾವರ್ಕರ್, ನಂದಗೋಪಾಲ್, ತ್ರಿಲೋಕನಾಥ್ ಚಕ್ರವರ್ತಿ, ಭಾಯಿ ಪರಮಾನಂದ, ಗಣೇಶ್ ಸಾವರ್ಕರ್ ಮುಂತಾದ ಕೆಚ್ಚೆದೆಯ ಕ್ರಾಂತಿಕಾರರು ಸೆಲ್ಯುಲರ್ ಜೈಲಿನ ಶಿಕ್ಷೆಗೆ ಗುರಿಯಾಗಿದ್ದರು. ಮೊದಲ ವಿಶ್ವಯುದ್ಧದ ನಂತರ ಈ ಜೈಲಿನಲ್ಲಿ ಹಿಂಸಾಚಾರವು ಕೂಡ ಅಧಿಕವಾಯಿತು. ಹೀಗಾಗಿ ಕ್ರಿ. ಶ. ೧೯೩೩ರಲ್ಲಿ ರವೀಂದ್ರನಾಥ ಠಾಕೂರ್ ಮತ್ತು ಮಹಾತ್ಮಾ ಗಾಂಧೀಜಿಯವರ ಮಧ್ಯ ಪ್ರವೇಶದಿಂದ ಸೆಲ್ಯುಲರ್ ಜೈಲಿನಲ್ಲಿ ಕಾಲಾಪಾನಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಗಳನ್ನು ಅಲ್ಲಿಂದ ಬೇರೆಡೆಗೆ ವರ್ಗಾಯಿಸಲಾಯಿತು ಹಾಗೂ ಕ್ರಿ.ಶ. ೧೯೩೯ರ ಹೊತ್ತಿಗೆ ಸಂಪೂರ್ಣವಾಗಿ ಕಾರಾಗೃಹವನ್ನು ಖಾಲಿ ಮಾಡ ಲಾಯಿತು. ಒಟ್ಟಿನಲ್ಲಿ ಸುಮಾರು ಮೂರು ದಶಕಗಳ ಕಾಲ ಭಾರತೀಯ ಕ್ರಾಂತಿಕಿಡಿಗಳನ್ನು ಚಿತ್ರ-ವಿಚಿತ್ರವಾಗಿ ಹಿಂಸಿಸಿದ ಘಟನೆಗಳಿಗೆ ಸಾಕ್ಷಿಯಾಗಿದ್ದ ಸೆಲ್ಯುಲರ್ ಕಾರಾಗೃಹ ಇಂದು ಕೇವಲ ಗತ ಇತಿಹಾಸದ ಮೂಕ ಪ್ರೇಕ್ಷಕನಂತೆ ನಿಂತುಕೊAಡಿದೆ ಅಲ್ಲದೆ ಆ ಕಾರಾಗೃಹದಲ್ಲಿ ಏಳು ರೆಕ್ಕೆಗಳ ಕಟ್ಟಡಗಳ ಪೈಕಿ ಇಂದು ಕೇವಲ ಮೂರು ರೆಕ್ಕೆಗಳನ್ನು ಮಾತ್ರ ಉಳಿಸಿಕೊಂಡಿದೆ. ಇಂದು ಆ ಕಾರಾಗೃಹದ ಅಂಗಳದಲ್ಲಿ ಒಡಾಡಿದರೆ ಆ ಜೈಲಿನ ಕರಾಳ ಅಧ್ಯಾಯದ ಸಂಪುಟವೊAದು ನಮ್ಮ ಕಣ್ಣ ಮುಂದೆ ತೆರೆದುಕೊಂಡAತೆ ಕಾಣುತ್ತದೆ.

-ಸತೀಶ್ ಕುಮಾರ್ ಎ. ಎಸ್,

ಇತಿಹಾಸ ಉಪನ್ಯಾಸಕರು, ವೀರಾಜಪೇಟೆ.