ಸೋಮವಾರಪೇಟೆ, ಜ. ೧೦: ಸಮೀಪದ ಅರಸಿನ ಕುಪ್ಪೆ-ಸಿದ್ಧಲಿಂಗ ಪುರದ ಶ್ರೀಮಂಜುನಾಥ ಹಾಗೂ ನವನಾಗನಾಥ ಸನ್ನಿಧಿಯಲ್ಲಿ ಧನುರ್ಮಾಸದ ವಿಶೇಷ ಪೂಜೆ ಹಾಗೂ ಪಂಚಮಿ ಅಂಗವಾಗಿ ಪವಮಾನ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ಮಂಜುನಾಥ ಕ್ಷೇತ್ರದಲ್ಲಿ ಗಣಪತಿ ಹೋಮ, ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಹಾಗೂ ನವನಾಗನಾಥ ಸನ್ನಿಧಿಯಲ್ಲಿ ಪಂಚಮಿ ಅಂಗವಾಗಿ ತಂಬಿಲ ಸೇವೆ, ಪವಮಾನ ಪೂಜೆಗಳು ಕ್ಷೇತ್ರದ ಪ್ರಧಾನ ಗುರುಗಳಾದ ಶ್ರೀರಾಜೇಶ್‌ನಾಥ್‌ಜೀ ಅವರ ಮಾರ್ಗದರ್ಶನದಲ್ಲಿ ನೆರವೇರಿದವು.

ದೇವಾಲಯದ ಪ್ರಧಾನ ಅರ್ಚಕ ಜಗದೀಶ್ ಉಡುಪ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆದವು. ಭಕ್ತಾದಿಗಳಿಗೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿತು.

ಮುರಳೀಧರ್‌ಗೆ ಸನ್ಮಾನ: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿAದ ನೀಡುವ ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಎಸ್.ಎ. ಮರಳೀಧರ್ ಅವರನ್ನು ದೇವಾಲಯ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಪ್ರಧಾನ ಗುರುಗಳಾದ ರಾಜೇಶ್‌ನಾಥ್‌ಜೀ, ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಪಂಡ ಮುತ್ತಪ್ಪ, ಕಾರ್ಯದರ್ಶಿ ಪ್ರಕಾಶ್, ದೇವಾಲಯ ಸಮಿತಿ ಅಧ್ಯಕ್ಷ ಮೋಹನ್, ಕಾರ್ಯದರ್ಶಿ ರಮೇಶ್, ಪ್ರದೀಪ್ ಸೇರಿದಂತೆ ಇತರರು ಉಪಸ್ಥಿತರಿದ್ದರು.