ಕೂಡಿಗೆ, ಜ. ೧೦: ಕೂಡ್ಲೂರು ವಿನಲ್ಲಿರುವ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ (ಎಸ್.ಡಿ.ಎಂ.ಸಿ.)ಯ ಸದಸ್ಯರಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆಯ ಪ್ರಗತಿ ಹಾಗೂ ಶಾಲಾಭಿವೃದ್ಧಿ ಕುರಿತು ತರಬೇತಿ ಕಾರ್ಯಾಗಾರ ನಡೆಸ ಲಾಯಿತು.

ತರಬೇತಿ ಕಾರ್ಯಾಗಾರ ಉದ್ಘಾಟನೆಯನ್ನು ಎಸ್.ಡಿ.ಎಂ.ಸಿ.ಯ ನೂತನ ಅಧ್ಯಕ್ಷ ಪುಟ್ಟಸ್ವಾಮಿ ನೆರವೇರಿಸಿದರು. ಸಮಿತಿ ಸದಸ್ಯರು ಹಾಗೂ ಪೋಷಕರು ಮಕ್ಕಳ ಕಲಿಕೆಗೆ ಹೆಚ್ಚಿನ ಗಮನಹರಿಸುವುದರೊಂದಿಗೆ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಶಾಲೆಯ ಮೂಲ ಸೌಕರ್ಯಗಳ ಕೊರತೆಯನ್ನು ನೀಗಿಸುವ ಮೂಲಕ ಸರ್ಕಾರ ಹಾಗೂ ದಾನಿಗಳಿಂದ ಅಗತ್ಯ ಸೌಲಭ್ಯಗಳನ್ನು ಪಡೆಯಲು ಎಲ್ಲರೂ ಸಹಕರಿಸಬೇಕು. ಎಸ್.ಡಿ.ಎಂ.ಸಿ. ಸಮಿತಿಯ ರಚನೆ, ಕಾರ್ಯ ಚಟುವಟಿಕೆಗಳು ಹಾಗೂ ಸಮಿತಿಯ ಪದಾಧಿಕಾರಿಗಳ ಕರ್ತವ್ಯಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮಕುಮಾರ್, ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಪೋಷಕರ ಪಾತ್ರ ಮಹತ್ತರವಾದುದು ಎಂದರು. ಸಿ.ಆರ್.ಪಿ., ಎಸ್.ಆರ್. ಶಿವಲಿಂಗ ಮಾತನಾಡಿ, ಎಸ್.ಡಿ.ಎಂ.ಸಿ. ಸದಸ್ಯರು ಮತ್ತು ಪೋಷಕರು ಶಾಲೆಗಳ ಅಭಿವೃದ್ಧಿಗೆ ತಮ್ಮನ್ನು ತೊಡಗಿಸಿ ಕೊಳ್ಳಲು ಎಸ್.ಡಿ.ಎಂ.ಸಿ. ಸದಸ್ಯರಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

ಶಾಲಾ ಶಿಕ್ಷಕರಾದ ಕೆ. ಗೋಪಾಲಕೃಷ್ಣ, ಡಿ. ರಮೇಶ್, ದಯಾನಂದ ಪ್ರಕಾಶ್, ಅನ್ಸಿಲಾ ರೇಖಾ ಶಾಲೆಯ ಅಭಿವೃದ್ಧಿಗಾಗಿ ಎಸ್.ಡಿ.ಎಂ.ಸಿ. ಪಾತ್ರದ ಕುರಿತು ಮಾಹಿತಿ ನೀಡಿದರು. ಶಿಕ್ಷಕಿ ಬಿ.ಡಿ. ರಮ್ಯ, ಬಿ.ಎಡ್., ಪ್ರಶಿಕ್ಷಣಾರ್ಥಿಗಳಾದ ಎಂ. ಮೋಕ್ಷಿತ್, ಅಭಿಷೇಕ್, ಸಮಿತಿ ಸದಸ್ಯರು ಉಪಸ್ಥಿತರಿದ್ದರು.