ಸಿದ್ದಾಪುರ, ಜ. ೯: ವಿವಾಹಿತ ಯುವತಿಯೋರ್ವಳನ್ನು ಎಳೆದಾಡಿದ ಆರೋಪದಡಿ ಯುವಕನೋರ್ವ ಧರ್ಮದೇಟು ತಿಂದ ಘಟನೆ ನೆಲ್ಲಿಹುದಿಕೇರಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

ನೆಲ್ಲಿಹುದಿಕೇರಿಯ ಶಾಲೆಯ ರಸ್ತೆಯಲ್ಲಿ ವಾಸವಿರುವ ವಿವಾಹಿತ ಯುವತಿಯೋರ್ವಳ ಮನೆಗೆ ರಾತ್ರಿ ಸಮಯದಲ್ಲಿ ಪ್ರವೇಶ ಮಾಡಿ ಆಕೆಯನ್ನು ಎಳೆದಾಡಿದ ಆರೋಪದಡಿ ಸಿದ್ದಾಪುರದ ಎಂ.ಜಿ. ರಸ್ತೆಯ ನಿವಾಸಿ ವಿವಾಹಿತ ಆಟೋಚಾಲಕ ಶಿಯಾಬುದ್ದೀನ್ ಎಂಬ ಯುವಕನಿಗೆ ಯುವತಿಯ ಕಡೆಯವರು ಧರ್ಮದೇಟು ನೀಡಿ ಸಿದ್ದಾಪುರ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರತಿ ದೂರು: ಆಟೋ ಚಾಲಕ ಶಿಯಾಬುದ್ದೀನ್ ತಾನು ನೆಲ್ಲಿಹುದಿಕೇರಿಯ ವಿವಾಹಿತ ಯುವತಿಯ ಮನೆಗೆ ಬಾಡಿಗೆಗೆ ತೆರಳಿದ್ದೆ. ಈ ಸಂದರ್ಭ ಯುವತಿ ಯೊಂದಿಗೆ ಮಾತನಾಡುತ್ತಿದ್ದಾಗ ಅನಿಶ್, ನೌಫಲ್, ಪ್ರಸಾದ್ ಸೇರಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಿದ್ದಾಪುರ ಠಾಣೆಯಲ್ಲಿ ಪ್ರತಿ ದೂರು ನೀಡಲಾಗಿದೆ.