ಕುಡೆಕಲ್ ಸಂತೋಷ್ ಮಡಿಕೇರಿ, ಜ. ೯: ಅವರು ಕುಟುಂಬದ ಹಿರಿಯರು; ಅವರು ಸ್ವರ್ಗವಾಸಿಯಾಗಿ ಸುಮಾರು ೨೨ ವರ್ಷಗಳಾಗಿವೆ., ಮತ್ತೋರ್ವರು ಅವರ ಮಗಳು; ಅವರೂ ತೀರಿಕೊಂಡು ಸುಮಾರು ೧೬ ವರ್ಷಗಳು ಕಳೆದಿವೆ.., ಆದರೆ., ಅವರ ಸಹಿ ಮಾತ್ರ ಅವರ ನಿಧನಾ ನಂತರದ ದಾಖಲಾತಿಗಳಲ್ಲಿ ಇಂದಿಗೂ ಜೀವಂತವಿದೆ.., ಇಹಲೋಕ ತ್ಯಜಿಸಿ ೧೫ ವರ್ಷಗಳ ಬಳಿಕವೂ ಇವರುಗಳು ಕಡತಗಳಿಗೆ ಸಹಿ ಮಾಡಿದ್ದಾರೆ..! ಸತ್ತ ಮೇಲೂ ೨೦ ವರ್ಷಗಳವರೆಗೆ ಸಹಿ ಮಾಡುತ್ತಲೇ ಬಂದಿದ್ದಾರೆ., ಅವರುಗಳ ಸಹಿ ಇರುವ ದಾಖಲೆಗಳ ಆಧಾರದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸರಕಾರದ ಸ್ವತ್ತಾಗಿರುವ ಲಕ್ಷಾಂತರ ರೂಪಾಯಿ ಬೆಲೆಬಾಳುವ ತೇಗದ ಮರಗಳನ್ನು ಕಡಿಯಲು ಅನುಮತಿ ನೀಡಿದ್ದಾರೆ.., ಮರಗಳನ್ನು ಕಡಿದು ಮಾರಿಯಾಗಿದೆ..!
ವ್ಯಕ್ತಿ ಸತ್ತ ಮೇಲೂ ಸಹಿ ಮಾಡಿದ್ದಾರೆ ಎಂದರೆ ಅಚ್ಚರಿಯಾಗ ಬಹುದಲ್ಲವೇ..? ಅಚ್ಚರಿ ಎನಿಸಿದರೂ ಸತ್ತವರ ಹೆಸರು ಹಾಗೂ ಸಹಿ ನಕಲು ಮಾಡಿ ಮರಗಳನ್ನು ಲೂಟಿ ಮಾಡಿದ ಇಂತಹ ಒಂದು ಘೋರ ಅಪರಾಧದ ಪ್ರಕರಣ ನಡೆದಿದೆ! ವೀರಾಜಪೇಟೆ ವಿಭಾಗದ ತಿತಿಮತಿ ಅರಣ್ಯ ವಲಯದ ಮಾಲ್ದಾರೆ ಗ್ರಾಮದಲ್ಲಿ ನಡೆದಿದೆ..!! ಜನಸಾಮಾನ್ಯರು ಸ್ವಂತ ಬಳಕೆಗಾಗಿ ತಮ್ಮ ಜಮೀನಿನಲ್ಲಿ ಒಂದು ಮರ ಕಡಿಯಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದರೆ ವರ್ಷಗಟ್ಟಲೆ ಕಾದರೂ ಅರಣ್ಯ ಇಲಾಖೆ ಅನುಮತಿಸುವದಿಲ್ಲ. ಆದರೆ, ಮರ ವ್ಯಾಪಾರಿಗಳೊಂದಿಗೆ ಶಾಮೀಲಾಗಿರುವ ಕೆಲವು ಅಧಿಕಾರಿಗಳ ಅಕ್ರಮದಿಂದಾಗಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಮರಗಳು ಕಳ್ಳರ ಪಾಲಾಗುತ್ತಿವೆ. ಅದನ್ನೂ ಮೀರಿ ಸತ್ತುಹೋದ ವ್ಯಕ್ತಿಗಳ ಹೆಸರು, ಸಹಿ ನಕಲು ಮಾಡಿ ಮರ ಕಡಿಯಲು ಅನುಮತಿ ನೀಡುತ್ತಾರೆಂದರೆ ಇಲ್ಲಿ ಅಚ್ಚರಿಯ ವಿಚಾರವೆಂದರೆ, ಮುತ್ತಣ್ಣ ಅವರು ತಾ.೧೯-೧೧-೨೦೦೦ದಲ್ಲಿ ಮೃತಪಟ್ಟಿದ್ದಾರೆ. ತಾಯಮ್ಮ (ರತಿ) ಅವರು ತಾ. ೧೯-೬-೨೦೦೬ರಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ
೧೯-೧೧-೨೦೧೬ರ ಶಕ್ತಿ ಪತ್ರಿಕೆಯಲ್ಲಿ ಮುತ್ತಣ್ಣ ಅವರ ಕುಟುಂಬಸ್ಥರು ಜಾಹೀರಾತು ಕೂಡಾ ನೀಡಿದ್ದಾರೆ. ತಾಯಮ್ಮ ಅವರು ಮೃತಪಟ್ಟಿರುವುದಕ್ಕೆ ವೀರಾಜಪೇಟೆ ಪಟ್ಟಣ ಪಂಚಾಯ್ತಿಯಲ್ಲಿ ಮರಣ ಪ್ರಮಾಣ ಪತ್ರ ಕೂಡ ಸಿಕ್ಕಿದೆ.., ಆದರೂ ಇವರುಗಳ ಹೆಸರು ಹಾಗೂ ಸಹಿ ನಕಲು ಮಾಡಿ ಮರ ಕಡಿಯಲಾಗಿದೆ..! ೨೦೧೫ರಲ್ಲಿ ಮರ ಕಡಿಯಲು ಅನುಮತಿ ನೀಡಿದ್ದ ಆಗಿನ ವೀರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರ್ ಇದೀಗ ಕೊಡಗು ಅರಣ್ಯ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಹೆಚ್ಚುವರಿ ಅಧಿಕಾರದಲ್ಲಿದ್ದಾರೆ. ೨೦೨೦ರಲ್ಲಿ ಮರ ಕಡಿಯಲು ಸಮಯಾವಕಾಶ ವಿಸ್ತರಣೆ ಮಾಡಿದ್ದ ಶಿವಶಂಕರ್ ವರ್ಗಾವಣೆಯಾಗಿದ್ದಾರೆ. ಈಗಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ಅವರು ಮರ ಸಾಗಾಟಕ್ಕೆ ಅನುವು ಮಾಡಿಕೊಟ್ಟಿದ್ದಾರೆ.ಅಧಿಕಾರಿಗಳ ಕಾರ್ಯದಕ್ಷತೆ ಎಷ್ಟರಮಟ್ಟಿಗೆ ಇರಬಹುದೆಂದು ಊಹಿಸಬಹುದಾಗಿದೆ..!
೬೫ ಮರ ಕಡಿಯಲು ಅರ್ಜಿ
ಮಾಲ್ದಾರೆ ಗ್ರಾಮದ ಪಿ.ಎನ್. ಮುತ್ತಣ್ಣ ಹಾಗೂ ಅವರ ಪುತ್ರಿ ಪಿ.ಎಂ. ತಾಯಮ್ಮ ಅವರುಗಳ ಹೆಸರಿನಲ್ಲಿ ತಾ.೧೦-೨-೨೦೧೫ರಲ್ಲಿ ಸ.ನಂ.೮೫/೨ರಲ್ಲಿನ ೧೦ ಎಕರೆ ಹಾಗೂ ಸ.ನಂ.೮೫/೫ ರಲ್ಲಿನ ೧೦ ಎಕರೆ ವಾರ್ ಗ್ರಾಂಟ್ ಸಾಗುಬಾಣೆಯಲ್ಲಿರುವ ನೆಟ್ಟು ಬೆಳೆಸಿರುವ ಅಂದಾಜು ೩೦೦ ಮರಗಳ ಪೈಕಿ ಕಾಫಿ ತೋಟದ ಅಭಿವೃದ್ಧಿ ಹಾಗೂ ಒಣಗಿರುವ ೬೫ ಮರಗಳನ್ನು ಕಡಿಯಲು ಅನುಮತಿ ಕೋರಿ
(ಮೊದಲ ಪುಟದಿಂದ) ವೀರಾಜಪೇಟೆ ವಿಭಾಗ ಅರಣ್ಯ ಅಧಿಕಾರಿಗಳಿಗೆ ಅರ್ಜಿ ಸಲ್ಲಿಕೆಯಾಗುತ್ತದೆ. ಅರ್ಜಿಯಲ್ಲಿ ಮುತ್ತಣ್ಣ ಹಾಗೂ ತಾಯಮ್ಮ ಅವರುಗಳ ವಿವರಗಳೊಂದಿಗೆ ಈರ್ವರ ಸಹಿ ಕೂಡ ಇರುತ್ತದೆ.
ಇದಕ್ಕೆ ಪ್ರತಿಯಾಗಿ ಅರಣ್ಯ ಇಲಾಖೆಯಿಂದ ೨೨-೫-೨೦೧೫ರಲ್ಲಿ ೪೭ ತೇಗದ ಮರಗಳನ್ನು ಕಡಿದು ತಾ.೩೧-೫-೨೦೧೫ರ ಒಳಗಡೆ ಕಡಿದು ಸಾಗಿಸುವಂತೆ ಅನುಮತಿ ನೀಡಲಾಗುತ್ತದೆ. ಆದರೆ, ಅನುಮತಿ ಪತ್ರದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಸಹಿ ಕೂಡ ಇರುವದಿಲ್ಲ.
ಅಧಿಕಾರಿಗಳಿಂದ ಆಕ್ಷೇಪ..!
ಇದಾದ ಬಳಿಕ ಮರ ಕಡಿಯಲು ಮುಂದಾಗಿದ್ದ ಗುತ್ತಿಗೆದಾರರ ನಡುವೆ ಚಕಮಕಿ ಉಂಟಾಗಿ ಓರ್ವ ಗುತ್ತಿಗೆದಾರ ಮರಕಡಿತಲೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆೆ. ಇದರಿಂದಾಗಿ ನಂತರದಲ್ಲಿ ಇಲಾಖೆಗೆ ನೇಮಕಗೊಂಡ ಮೂವರು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮರಕಡಿಯಲು ಅವಕಾಶ ನೀಡದೆ ಜಿಲ್ಲಾಧಿಕಾರಿಗಳಿಗೆ ಆಕ್ಷೇಪಣಾ ಪತ್ರ ಸಲ್ಲಿಸಿದ್ದರು. ಇದರಿಂದಾಗಿ ಕಡತ ಹಾಗೆಯೇ ಬಾಕಿ ಉಳಿದಿತ್ತು.
ಮತ್ತೆ ಅರ್ಜಿ ಸಲ್ಲಿಕೆ..!
ಇದಾದ ನಂತರ ಐದು ವರ್ಷಗಳ ಬಳಿಕ ೨೭-೧-೨೦೨೦ರಲ್ಲಿ ಮತ್ತೆ ತಿತಿಮತಿ ವಲಯ ಅರಣ್ಯಾಧಿಕಾರಿಗಳಿಗೆ ಅರ್ಜಿ ಸಲ್ಲಿಕೆಯಾಗುತ್ತದೆ. ಪಿ.ಎಂ. ತಾಯಮ್ಮ ಹಾಗೂ ಪಿ.ಎಸ್. ಮುತ್ತಣ್ಣ ಹೆಸರಿನಲ್ಲಿ ಸಲ್ಲಿಕೆಯಾಗುವ ಅರ್ಜಿಯಲ್ಲಿ ೨೦೧೫ರಲ್ಲಿ ಮರ ಕಡಿಯಲು ಅನುಮತಿ ಸಿಕ್ಕಿದ್ದರೂ ಮರ ಕಡಿಯಲು ಕೆಲಸಗಾರರು ಸಿಗದ ಕಾರಣ ಮರ ಕಡಿಯಲು ಸಾಧ್ಯವಾಗಿಲ್ಲ, ಈ ಹಿನ್ನೆಲೆಯಲ್ಲಿ ಮತ್ತೆ ಸಮಯಾವಕಾಶ ವಿಸ್ತರಿಸಿ ಮಂಜೂರು ಮಾಡಿಕೊಡಬೇಕಾಗಿ ಕೋರಲಾಗಿದೆ. ಆದರೆ, ಈ ಅರ್ಜಿಯಲ್ಲಿ ೫೪ ಮರ ಕಡಿಯಲು ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ ಇದರಲ್ಲಿ ತಾಯಮ್ಮ ಹಾಗೂ ಮುತ್ತಣ್ಣ ಅವರ ಸಹಿಯ ಬದಲಿಗೆ ಪೂವಯ್ಯ ಎಂಬವರ ಸಹಿ ಇದೆ..!
ಈ ಅರ್ಜಿ ಆಧಾರದಲ್ಲಿ ಆಗಿನ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ೫೪ ಮರಗಳನ್ನು ಕಡಿಯಲು ತಾ.೧೫-೪-೨೦೨೦ರವರೆಗೆ ಕಾಲಾವಕಾಶ ನೀಡಿ ತಾ.೨೮-೨-೨೦೨೦ರಂದು ಅನುಮತಿ ನೀಡುತ್ತಾರೆ.
೪೭ ಮರ ಕಡಿತಲೆ..!
ಇದಾದ ಬಳಿಕ ೧೯-೬-೨೦೨೦ರಲ್ಲಿ ತಿತಿಮತಿ ವಲಯ ಅರಣ್ಯಾಧಿಕಾರಿಗಳು ತಿತಿಮತಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮರ ಕಡಿದಿರುವ ಬಗ್ಗೆ, ಸ್ಥಳ ಪರಿಶೀಲನೆ ಮಾಡಿರುವ ಬಗ್ಗೆ ಹಾಗೂ ಕಡಿದಿರುವ ಮರಗಳನ್ನು ಸ್ಥಳದಲ್ಲಿಯೇ ದಾಸ್ತಾನು ಮಾಡಲು ಅನುಮತಿ ಕೋರಿ ಕಡಿದ ಮರಗಳ ವಿವರ ಸಹಿತ ಪತ್ರ ಬರೆಯುತ್ತಾರೆ. ಸ.ನಂ.೮೫/೨ರಲ್ಲಿ ೨೨ ಹಾಗೂ ಸ.ನಂ. ೮೫/೫ರಲ್ಲಿ ೨೫ ಸೇರಿ ೪೭ ಮರಗಳು ಸೇರಿದಂತೆ ಒಟ್ಟು ೨೨೮ ನಾಟಾಗಳು ಸೇರಿ ೩೨.೯೧೦ ಘ.ಮೀ. ನಾಟಾ ಹಾಗೂ ೧೩.೩೭೬ ಘ.ಮೀ ಸೌದೆ ಕಡಿದಿರುವದಾಗಿ ವರದಿ ಸಲ್ಲಿಸುತ್ತಾರೆ. ಈ ವರದಿಗಳಿಗೂ ದಿವಂಗತರಾಗಿರುವ ಮುತ್ತಣ್ಣ ಹಾಗೂ ತಾಯಮ್ಮ ಅವರುಗಳ ಸಹಿ ಪಡೆಯಲಾಗಿದೆ..!
೨೦೧೫ರಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲಿ ೮೫/೨ ಹಾಗೂ ೮೫/೫ ಎರಡೂ ಜಾಗಗಳು ವಾರ್ ಗ್ರಾö್ಯಂಟ್ ಸಾಗುಬಾಣೆ ಎಂದು ಅರ್ಜಿದಾರರೇ ಬರೆದಿದ್ದರೂ, ಆರ್‌ಎಫ್‌ಓ ಸಲ್ಲಿಸಿದ ವರದಿಯಲ್ಲಿ ೮೫.೫ರ ಜಾಗ ರೆಡೀಂ ಸಾಗು ಬಾಣೆ ಎಂದು ನಮೂದಿಸಲ್ಪಡುತ್ತದೆ.
ಸಾಗಾಟಕ್ಕೆ ತಡೆ
ಮರಗಳನ್ನು ಕಡಿದು ದಾಸ್ತಾನಿರಿಸಿ ದ್ದರೂ, ಅವುಗಳ ಸಾಗಾಟಕ್ಕೆ ಇಲಾಖೆ ಅನುಮತಿ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ದಿವಂಗತ ಮುತ್ತಣ್ಣ ಅವರ ಪುತ್ರ ಪಿ.ಎಂ. ಪೂವಯ್ಯ ೨೦೨೧ರಲ್ಲಿ ಹೈಕೋರ್ಟ್ನಲ್ಲಿ ದಾವೆ ಹೂಡಿ ಅರಣ್ಯ ಅಧಿಕಾರಿಗಳು ಈ ಮರಗಳ ಸಾಗಾಟಕ್ಕೆ ಅಡ್ಡಿಪಡಿಸುತ್ತಿದ್ದಾರೆಂದು ಆರೋಪಿಸಿರುತ್ತಾರೆ; ಅಲ್ಲದೆ, ಈ ಬಗ್ಗೆ ಇಲಾಖೆಗೆ ನಿರ್ದೇಶಿಸುವಂತೆ ಕೋರುತ್ತಾರೆ. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ತಾ. ೧-೨.೨೧ರಲ್ಲಿ ವೀರಾಜಪೇಟೆ ಡಿಎಫ್‌ಓ ಅವರು ೪ ವಾರಗಳ ಕಾಲಾವಕಾಶದಲ್ಲಿ ಮರ ಸಾಗಾಟಕ್ಕೆ ಅವಕಾಶ ಕಲ್ಪಿಸುವುದಾಗಿ ಹೇಳಿಕೆ ನೀಡಿದ್ದನ್ನು ಪರಿಗಣಿಸಿ, ಪ್ರಕರಣವನ್ನು ಇತ್ಯರ್ಥ ಮಾಡುತ್ತದೆ. ಆದರೆ, ಮತ್ತೆ ಮರ ಸಾಗಾಟಕ್ಕೆ ಅನುಮತಿ ನೀಡಲು ಇಲಾಖೆ ವಿಳಂಬ ಮಾಡಿದ ಕಾರಣ ಅರ್ಜಿದಾರ ಈಗಿನ ಡಿಎಫ್‌ಓ ಚಕ್ರವರ್ತಿ ಅವರ ಮೇಲೆ ನ್ಯಾಯಾಲಯ ನಿಂದನೆ ಪ್ರಕರಣ ದಾಖಲಿಸುತ್ತಾರೆ. ಆದರೆ, ಅರ್ಜಿಯಲ್ಲಿ ದಿನಾಂಕಗಳನ್ನು ತಪ್ಪಾಗಿ ನಮೂದಿಸಿದ್ದರಿಂದ ಅರ್ಜಿ ವಜಾಗೊಳ್ಳುತ್ತದೆ. ಡಿಎಫ್‌ಓ ಮರ ಸಾಗಾಣಿಕೆಗೆ ನಂತರ ಅನುಮತಿ ನೀಡುತ್ತಾರೆ.
ಅರಣ್ಯ ಕಾಯ್ದೆ ಉಲ್ಲಂಘನೆ..!
ಮರ ಕಡಿಯಲಾಗಿರುವ ಜಾಗ ವಾರ್ ಗ್ರಾಂಟ್‌ನಡಿ ಮಾಜಿ ಯೋಧರಿಗೆ ಮಂಜೂರಾಗಿರುವ ಜಾಗವಾಗಿದೆ. ಈ ಜಾಗ ಕಂದಾಯಕ್ಕೆ ಒಳಪಡದ್ದರಿಂದ ಅಲ್ಲಿರುವ ಮರಗಳು ಸರಕಾರದ ಸ್ವತ್ತಾಗಿರುತ್ತದೆ. ಮರ ಕಡಿಯಲು ಜಿಲ್ಲಾಧಿಕಾರಿಗಳಿಂದ ಮರಗಳ ಮಾಲೀಕತ್ವದ ಬಗ್ಗೆ ನಿರಾಪೇಕ್ಷಣಾ ಪತ್ರ ಕೂಡ ಪಡೆದಿಲ್ಲ. ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಂದ ಜಾಗದ ಜಂಟಿ ಸರ್ವೆ ಮಾಡಿಸಿಲ್ಲ. ಅಲ್ಲದೆ, ೨೦೧೫ರ ಬಳಿಕ ೨೦೨೦ರವರೆಗಿನ ಮರಗಳ ನೈಸರ್ಗಿಕ ಬೆಳವಣಿಗೆಯನ್ನೂ ಗಣನೆಗೆ ತೆಗೆದುಕೊಂಡಿಲ್ಲ. ಇವೆಲ್ಲವೂ ಕರ್ನಾಟಕ ಅರÀಣ್ಯ ಕಾಯ್ದೆ ಸೆಕ್ಷನ್ ೧೧೯ರ ಸ್ಪಷ್ಟ ಉಲ್ಲಂಘನೆಯಾಗಿದೆ. ಇದರಿಂದ ಸರಕಾರಕ್ಕೆ ಸಾಕಷ್ಟು ನಷ್ಟವಾದಂತಾಗಿದೆ.
ಏಕೀಕರಣ ರಂಗದಿAದ ದೂರು
ಈ ಅಕ್ರಮದ ಬಗ್ಗೆ ಕೊಡಗು ಏಕೀಕರಣ ರಂಗ ೧೩-೧೦-೨೦೨೦ರಂದೇ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಜಿಲ್ಲಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂಚಾರಿ ದಳ, ಭ್ರಷ್ಟಾಚಾರ ನಿಗ್ರಹ ದಳದವರಿಗೆ ದೂರು ಸಲ್ಲಿಸಿ ಈ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದರು. ಆದರೆ, ಇದುವರೆಗೂ ಯಾವದೇ ತನಿಖೆ ಅಥವಾ ಕ್ರಮ ಆಗಿರುವದಿಲ್ಲ.