ವೀರಾಜಪೇಟೆ, ಜ. ೯: ಅದು ೨೦೧೯ನೇ ಇಸವಿ ಆ ವರ್ಷ ವೀರಾಜಪೇಟೆ ತಾಲೂಕು ಮಳೆಗಾಲದ ಆರ್ಭಟದಲ್ಲಿ ಸಿಲುಕಿಕೊಂಡು ನಲುಗಿದ ವರ್ಷ. ಗೋಣಿಕೊಪ್ಪದ ಕೀರೆಹೊಳೆ ದಿಕ್ಕೆಟ್ಟು ಹರಿದಿದ್ದು, ಸಿದ್ದಾಪುರ ಭಾಗದ ಹೊಳೆದಂಡೆಯ ಜನರ ಬದುಕು ತತ್ತರಿಸಿದ್ದು, ತೋರ ಗ್ರಾಮದ ಬೆಟ್ಟ ಕುಸಿದು ಜನರ ಪ್ರಾಣ ಆಪೋಶನ ಪಡೆದಿದ್ದು, ಭೇತ್ರಿ, ಕೆದಮುಳ್ಳೂರು ಗ್ರಾಮಗಳು ನೀರಿನಿಂದ ಆವೃತ್ತವಾಗಿ ಕಷ್ಟ ಅನುಭವಿಸಿದ್ದು ಜೊತೆಗೆ ವೀರಾಜಪೇಟೆಯ ಪ್ರಮುಖ ಬೆಟ್ಟ ಮಲೆತಿರಿಕೆ ಬೆಟ್ಟದಲ್ಲಿ ಆಗಸ್ಟ್ ೧೦ ರಂದು ಬಿರುಕು ಮೂಡಿದ್ದು ಆಗಸ್ಟ್ ೧೪ ರ ಸುಮಾರಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಬಂದು ಬೆಟ್ಟದ ಸ್ಥಿತಿಗತಿಯ ಬಗ್ಗೆ ಪ್ರಾಥಮಿಕ ವರದಿ ನೀಡಿದ್ದು ನಡೆದಿತ್ತು.
ಇದೇ ಸಂದರ್ಭದಲ್ಲಿ ಈ ಮಲೆತಿರಿಕೆ ಬೆಟ್ಟದಲ್ಲಿರುವ ಅಯ್ಯಪ್ಪ ದೇವಸ್ಥಾನದ ಪಕ್ಕದ ಬರೆ ಸ್ವಲ್ಪ ಮಟ್ಟಿಗೆ ಕುಸಿದಿತ್ತು. ದೇವಸ್ಥಾನಕ್ಕೆ ಹಾನಿಯೇನು ಆಗಿರಲಿಲ್ಲ. ಆದರೆ ಮಲೆತಿರಿಕೆ ಬೆಟ್ಟಕ್ಕೆ ಭೇಟಿನೀಡಿ ಪರಿಶೀಲನೆ ಮಾಡಿದ್ದ ಗಣಿ ಮತ್ತು ಭೂವಿಜ್ಞಾನಿಗಳು ಈ ಬೆಟ್ಟ ಪ್ರದೇಶದ ಕೆಲವು ಸೂಕ್ಷö್ಮ ಜಾಗಗಳನ್ನು ಗುರುತುಮಾಡಿ ಈ ಬೆಟ್ಟ ಜನವಸತಿಗೆ ಯೋಗ್ಯವಾಗಿಲ್ಲ ಮುಂಬರುವ ದಿನಗಳಲ್ಲಿ ಹೆಚ್ಚು ಮಳೆಯಾದಾಗ ನೀರಿನ ಜೊತೆಗೆ ಬೆಟ್ಟದ ಮಣ್ಣು ಸೇರಿಕೊಂಡು ಹೊಳೆಯಂತೆ ಹರಿಯುವ ಹಾಗೂ ಕುಸಿಯುವ ಸಂಭವವಿದೆ ಎಂದು ವರದಿ ನೀಡಿದ್ದರು.
ಅದರಂತೆ ಇಲ್ಲಿನ ಸುಮಾರು ಅರವತ್ತಕ್ಕೂ ಅಧಿಕ ಕುಟುಂಬಗಳನ್ನು ಇಲ್ಲಿನ ಪಟ್ಟಣ ಪಂಚಾಯಿತಿ ಬೇರೆಡೆಗೆ ಸ್ಥಳಾಂತರ ಮಾಡಲು ಚಿಂತಿಸಿದೆ. ಹಾಗೂ ಮಳೆಗಾಲ ಕಳೆದ ಬಳಿಕ, ಮಳೆಪರಿಹಾರ ಯೋಜನೆಯಡಿಯಲ್ಲಿ ವೀರಾಜಪೇಟೆ ತಾಲೂಕಿನಾದ್ಯಂತ ಹಲವು ಕಾಮಗಾರಿಗಳನ್ನು ಅಲ್ಲಿನ ಸ್ಥಳೀಯ ಆಡಳಿತಗಳು, ಲೊಕೋಪಯೋಗಿ ಇಲಾಖೆ ಕೈಗೊಂಡವು. ಹೀಗೆ ಮಳೆ ಪರಿಹಾರ ಯೋಜನೆಯಡಿಯಲ್ಲಿ ಮಲೆತಿರಿಕೆ ಬೆಟ್ಟದ ಅಯ್ಯಪ್ಪ ದೇವಸ್ಥಾನಕ್ಕೆ ಕಟ್ಟಿದ ತಡೆಗೋಡೆಯೇ ಈಗ ಮಲೆತಿರಿಕೆ ಬೆಟ್ಟಕ್ಕೆ ಕಂಟಕ ಪ್ರಾಯವಾಗಿ ಪರಿಣಮಿಸುವ ಎಲ್ಲಾ ಸೂಚನೆಗಳು ಕಾಣಲಾರಂಭಿಸಿವೆ.
ಮಲೆತಿರಿಕೆ ಬೆಟ್ಟದ ಮಧ್ಯಭಾಗದಲ್ಲಿರುವ ಅಯ್ಯಪ್ಪ ದೇವಾಲಯ ಅಯ್ಯಪ್ಪ ಭಕ್ತಾದಿಗಳ ಭಕ್ತಿಯ ಆಗರದಂತೆ. ಈ ದೇವಾಲಯದ ಪಕ್ಕದ ಬರೆ ವರ್ಷ-ವರ್ಷವೂ ಮಳೆ ಜಾಸ್ತಿಯಾದಾಗ ಸ್ವಲ್ಪ ಪ್ರಮಾಣದಲ್ಲಿ ಮಣ್ಣು ಕುಸಿಯುತಿತ್ತು. ಇದರ ಬಗ್ಗೆ ದೇವಾಲಯ ಆಡಳಿತ ಮಂಡಳಿ ಅಷ್ಟು ದೊಡ್ಡದಾಗಿ ತಲೆಕೆಡಿಸಿಕೊಂಡಿರಲಿಲ್ಲ. ಏಕೆಂದರೆ ಕೊಡಗಿನಂಥ ಗುಡ್ಡಗಾಡು ಪ್ರದೇಶದಲ್ಲಿ ಜೋರು ಮಳೆಗೆ ಬರೆಯ ಮಣ್ಣು ಸ್ವಲ್ಪ ಕುಸಿತವಾಗುವುದು ತೀರಾ ಸಾಮಾನ್ಯವಾದ ಒಂದು ಪ್ರಕ್ರಿಯೆ ಎಂದು ಭಾವಿಸಿ ಸುಮ್ಮನಾಗಿದ್ದರು.
ಆದರೆ ಲೋಕೋಪಯೋಗಿ ಇಲಾಖೆಗೆ ಮಾತ್ರ ಇದು ಹಾಗೇ ಕಾಣಲಿಲ್ಲ. ಇಲ್ಲೊಂದು ದೊಡ್ಡ ಮಟ್ಟದ ಯಡವಟ್ಟು ಕಾಮಗಾರಿ ಮಾಡಿಯೇ ತೀರಬೇಕು. ಅದು ಹೆಸರಿಗೆ ಹಾಗೂ ನೋಡಲು ಮಾತ್ರ ತಡೆಗೋಡೆಯಂತೆ ಕಾಣಬೇಕು ಮಿಕ್ಕಂತೆ ಅದರ ಭವಿಷ್ಯ, ಅದರಿಂದ ಆಗುವ ಅನಾಹುತ ಯಾವುದು ಅವರಿಗೆ ಲೆಕ್ಕಕ್ಕೆ ಇರಲಿಲ್ಲ.!
ಲೆಕ್ಕಕ್ಕೆ ಇರಲಿಲ್ಲ ಅನ್ನುವುದಕ್ಕಿಂಥ ಅದೊಂದು ತೀರಾ ದೂರದೃಷ್ಟಿ ಹೋಗಲಿ, ನಾಲ್ಕು ತಿಂಗಳು ಕಳೆದ ನಂತರ ಬರುವ ಮಳೆಗಾಲವನ್ನು ಗಮನದಲ್ಲಿಟ್ಟುಕೊಂಡು ಈ ತಡೆಗೋಡೆಯನ್ನು ಅವರು ಕಟ್ಟಿಲ್ಲ ಎಂದೇ ಹೇಳಬಹುದು. ಬರೋಬ್ಬರಿ ಒಂದು ಕೋಟಿ ೧೬ ಲಕ್ಷ ರೂಪಾಯಿ ವೆಚ್ಚದಲ್ಲಿ ದೇವಾಲಯದ ಪಕ್ಕ ಹಾಗೂ ದೇವಸ್ಥಾನದ ಮೇಲ್ಭಾಗದಲ್ಲಿ ತಡೆಗೋಡೆಯನ್ನು ನಿರ್ಮಾಣ ಮಾಡಲಾಗಿದೆ. ಈ ತಡೆಗೋಡೆ ಕೆಲಸ ಮುಗಿದು ಹೆಚ್ಚೇನು ಸಮಯ ಆಗಿಲ್ಲ ಬರೇ ಎರಡು ತಿಂಗಳು ಕಳೆದಿದೆ ಅಷ್ಟೇ.
ಅಷ್ಟರಲ್ಲಿ ದೇವಸ್ಥಾನ ಆಡಳಿತ ಮಂಡಳಿಯವರು ದೇವಾಲಯದ ವಾರ್ಷಿಕ ಉತ್ಸವ ಮಾಡುವ ಸಂದರ್ಭ ಲೋಕೋಪಯೋಗಿ ಇಲಾಖೆ ಮಾಡಿದ ಕಾಮಗಾರಿಯಿಂದ ಅಪಾರ ಪ್ರಮಾಣದ ಮಣ್ಣನ್ನು ದೇವಾಲಯದ ಆವರಣಕ್ಕೆ ಸುರಿದು ಅದನ್ನು ತೆರವು ಮಾಡದೇ ಹಾಗೇ ಬಿಟ್ಟ ಕಾರಣ, ಅದನ್ನು ತೆಗಿಸಿ ಹಾಗೇ ದೇವಾಲಯಕ್ಕೆ ಪ್ರದಕ್ಷಿಣ ಪಥ ಮಾಡುವ ಸಲುವಾಗಿ ಮಣ್ಣು ತೆಗೆಯಲು ಹೋದಾಗ ಲೊಕೋಪಯೋಗಿ ಇಲಾಖೆ ಮಾಡಿದ ಕಳಪೆ ಹಾಗೂ ಬೇಜವಬ್ದಾರಿಯುತ ಕಾಮಗಾರಿ ಅರಿವಿಗೆ ಬಂದಿದೆ.
ಬರೆಯಿAದ ಮಣ್ಣು ಕುಸಿದ ಜಾಗದಲ್ಲಿ ತಡೆಗೋಡೆ ಕಟ್ಟುವಾಗ ಅಡಿಪಾಯವನ್ನೆ ಹಾಕದೇ ಹಾಗೆಯೇ ತಡೆಗೋಡೆ ಕಟ್ಟಿ, ಅದು ಕಾಣಬಾರದು ಎಂದು ಜೆಸಿಬಿಯಲ್ಲಿ ತಡೆಗೋಡೆಯ ಸಮೀಪ ರಾಶಿಯಂತೆ ಮಣ್ಣು ಸುರಿದು ಮುಚ್ಚಲಾಗಿದೆ. ಮಣ್ಣು ಸರಿಸಿ ನೋಡಿದರೆ ತಡೆಗೋಡೆ ಹಾಗೇ ಮಣ್ಣಿನ ಮೇಲೆ ಕಟ್ಟುತ್ತಾ ಹೋಗಲಾಗಿದೆ. ಮೊದಲೆರೆಡು ದಿನ ದೇವಸ್ಥಾನದ ಆಡಳಿತ ಮಂಡಳಿಯವರು ಕೆಲಸ ನಡೆಯುವಾಗ ನಿಂತ ಕಾರಣ ಆ ಜಾಗದಲ್ಲಿ ತಳಪಾಯ ಹಾಕಲಾಗಿದೆ. ಅಲ್ಲಿಂದ ಮುಂದಕ್ಕೆ ಯಾವುದೇ ಅಡಿಪಾಯ ಇಲ್ಲದೆ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಈಗಲೇ ತಡೆಗೋಡೆಯ ಒಂದು ಭಾಗ ಬೀಳಲು ಸಿದ್ಧವಾಗಿರುವಂತೆ ಬಾಗಿದೆ.
ಇನ್ನೂ ಲೋಕೋಪಯೋಗಿ ಇಲಾಖೆ ಬೆಟ್ಟ ಪ್ರದೇಶವನ್ನು ಜೆಸಿಬಿ ಬಳಸಿ ತೊಂದರೆ ಪಡಿಸಬಾರದು ಎಂದು ಗೊತ್ತಿದ್ದರೂ ಬೇಕಾಬಿಟ್ಟಿ ಜೆಸಿಬಿ ಬಳಸಿ ಬರೆಯಲ್ಲಿ ಅಡಕವಾಗಿದ್ದ ಬೃಹದಾಕಾರದ ಬಂಡೆಗಳನ್ನು ಕಿತ್ತು ದೇವಸ್ಥಾನದ ಮುಂಭಾಗದಲ್ಲಿ ರಾಶಿಯಾಗಿ ಸುರಿದು ಹೋಗಿದ್ದಾರೆ. ಅಲ್ಲದೇ ತಡೆಗೋಡೆಯ ಪಕ್ಕದಲ್ಲೇ ನೀರು ಮೇಲಿನಿಂದ ಹರಿದು ಬರಲು ಒಂದು ಕೊರಕಲು ಮಾದರಿಯಿದ್ದು ಅದನ್ನು ಕೂಡಾ ಸರಿಪಡಿಸದೆ ಹೋಗಿದ್ದಾರೆ. ಮಳೆಗಾಲದಲ್ಲಿ ಆ ಒಂದು ಜಾಗವೇ ಸಾಕು ನೀರು ರಭಸವಾಗಿ ತಳ್ಳಿದಂತೆ ಹರಿದು ತಡೆಗೋಡೆಯನ್ನು ಬೀಳಿಸಲು ಎಂಬದು ಗಂಭೀರವಾದ ವಿಚಾರವಾಗಿದೆ.
ಇಲ್ಲಿ ತನಕ ಕೇವಲ ಬರೆ ಕುಸಿಯಬಹುದು ಎನ್ನುವ ಆತಂಕವಿತ್ತು. ಆದರೆ ಈಗ ಲೋಕೋಪಯೋಗಿ ಇಲಾಖೆ ಮಾಡಿರುವ ಈ ಕಳಪೆ ಕಾಮಗಾರಿ ನೋಡಿದರೆ ಬರೆಯ ಜೊತೆಗೆ ತಡೆಗೋಡೆ ಅದರ ಜೊತೆಗೆ ಕಾಮಗಾರಿಯ ಹೆಸರಲ್ಲಿ ಕಿತ್ತಿರುವ ಬೃಹದಾಕಾರದ ಬಂಡೆಕಲ್ಲುಗಳು ಕೂಡಾ ಜಾರಿ, ಅನಾಹುತವನ್ನು ಇನ್ನೂ ಹೆಚ್ಚು ಮಾಡಬಹುದು ಎನ್ನುವುದು ಎಂಥಾ ಸಾಮಾನ್ಯರಿಗೂ ಈ ತಡೆಗೋಡೆ ನೋಡಿದರೆ ತಿಳಿಯುತ್ತದೆ.
ಈಗಂತೂ ಸುತ್ತಲಿನ ಗ್ರಾಮಸ್ಥರದ್ದು ಒಂದೇ ಪ್ರಶ್ನೆ. ಅವಶ್ಯಕತೆಯಿಲ್ಲದಿದ್ದರೂ ಇಲ್ಲಿ ಒಂದು ಕೋಟಿ ಹದಿನಾಲ್ಕು ಲಕ್ಷದ ತಡೆಗೋಡೆ ನಿರ್ಮಾಣ ಮಾಡಿ ಸರ್ಕಾರದ ಹಣ ಪೋಲು ಮಾಡಿದ್ದು ಯಾಕೆ? ಮಲೆತಿರಿಕೆ ಬೆಟ್ಟದ ಸ್ಥಿತಿಗತಿ ಗೊತ್ತಿದ್ದು, ಜೆಸಿಬಿ ಬಳಸಿ, ಬೆಟ್ಟದ ಒಡಲಲ್ಲಿ ಇದ್ದ ಬಂಡೆಕಲ್ಲುಗಳನ್ನು ಕಿತ್ತು ಬಿಸಾಡಿ ಹೋಗಿದ್ದು ಯಾಕಾಗೀ? ಅಡಿಪಾಯವನ್ನೇ ಸಮಪರ್ಕವಾಗಿ ಹಾಕದೇ ಅಡಿಗಟ್ಟಲೇ ಎತ್ತರದ ತಡೆಗೋಡೆ ನಿರ್ಮಾಣ ಮಾಡಿದರೆ ಅದು ಸ್ಥಿರವಾಗಿ ನಿಲ್ಲುತ್ತದೆ ಎಂದು ಲೊಕೋಪಯೋಗಿ ಇಲಾಖೆ ನಂಬಿದ್ದಾದರೂ ಹೇಗೆ ಎಂದು? ಮಲೆತಿರಿಕೆ ಬೆಟ್ಟವನ್ನಂಥೂ ಕಾಮಗಾರಿಯ ಹೆಸರಲ್ಲಿ ಲೋಕೋಪಯೋಗಿ ಇಲಾಖೆ ಅಗೆದು ಬಗೆದು ಅಸ್ತವ್ಯಸ್ತಮಾಡಿ ಹೋಗಿದೆ. ಈಗಲಾದರೂ ಇಂಥ ಬೇಜವಬ್ದಾರಿಯುತ ಕಾಮಗಾರಿ ಮಾಡಿದ ಇಲಾಖೆಯ ಸಂಬAಧಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ದೇವಾಲಯದ ಆಡಳಿತ ಮಂಡಳಿ ಆಗ್ರಹಿಸಿದೆ.
- ಉಷಾ ಪ್ರೀತಮ್