ಶ್ರೀಮಂಗಲ, ಜ. ೯: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರುಗ ಗ್ರಾಮದಲ್ಲಿ ಕಾಡಾನೆ ಹಿಂಡು ತೋಟದಲ್ಲಿ ಸೇರಿಕೊಂಡು ಕಾಫಿ, ಅಡಿಕೆ ಮರ, ಕಾಳುಮೆಣಸು ಬಳ್ಳಿಗಳಿಗೆ ಆಶ್ರಯಿಸಿದ ಮರಗಳನ್ನು ಬುಡ ಸಹಿತ ಮುರಿದು ನಾಶಮಾಡಿದೆ.
ಗ್ರಾಮದಲ್ಲಿ ಹಲವು ದಿನಗಳಿಂದ ಬೀಡುಬಿಟ್ಟಿರುವ ಕಾಡಾನೆ ಹಿಂಡು ಬೆಳೆಗಾರ ಅಜ್ಜಮಾಡ ಮಂದಣ್ಣ ಅವರಿಗೆ ಸೇರಿದ ತೋಟದಲ್ಲಿ ೩೦ ಅಡಿ ಎತ್ತರ ಹಬ್ಬಿರುವ ಕಾಳುಮೆಣಸು ಬಳ್ಳಿಗೆ ಆಶ್ರಯಿಸಿರುವ ಮರಗಳನ್ನು ಬುಡ ಸಹಿತ ಬೀಳಿಸಿವೆ.
ಇದರೊಂದಿಗೆ ಸುಮಾರು ೪೦ ಫಸಲು ಬರುವ ಅಡಿಕೆ ಮರ ಮುರಿದು ಹಾಕಿವೆ. ಇದಲ್ಲದೆ ಫಸಲು ಕುಯಿಲು ಮಾಡದೇ ಇರುವ ಸುಮಾರು ೨೦೦ರಷ್ಟು ಕಾಫಿ ಗಿಡಗಳನ್ನು ನಾಶಮಾಡಿದ್ದು, ಕಾಫಿ ಫಸಲು ಸಹಿತ ಅಪಾರ ನಷ್ಟ ಉಂಟಾಗಿದೆ.
ಮAದಣ್ಣ ಅವರ ೮ ಎಕರೆಯ ತೋಟದಲ್ಲಿ ಕಾಡಾನೆಗಳು ಸೇರಿಕೊಂಡು ಅಲ್ಲಿಯೇ ಸುತ್ತಾಡುತ್ತಿದ್ದು, ಇದರಿಂದ ಕಾಫಿ ಕುಯಿಲು ಮಾಡಲು ಕಾರ್ಮಿಕರು ತೋಟಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ.
ಅತಿವೃಷ್ಟಿಯಿಂದ ಅಪಾರ ಬೆಳೆ ನಷ್ಟವಾಗಿದ್ದು, ಇದೀಗ ಉಳಿದ ಫಸಲನ್ನು ಕಟಾವು ಮಾಡುವ ಮುನ್ನ ಕಾಡಾನೆಗಳು ನಾಶಪಡಿಸುತ್ತಿವೆ ಎಂದು ಬೆಳೆಗಾರ ಮಂದಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ಕಾಡಾನೆ ಹಿಂಡುಗಳನ್ನು ಅರಣ್ಯಕ್ಕೆ ಅಟ್ಟಲು ಉನ್ನತಾಧಿಕಾರಿಗಳ ಸಹಿತ ವಿಶೇಷ ದಳ ನೇಮಿಸಿ, ತಕ್ಷಣದಿಂದ ಕಾರ್ಯಾಚರಣೆ ಕೈಗೊಳ್ಳುವಂತೆ ಹಾಗು ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರಕ್ಕೆ ಅವರು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಶ್ರೀಮಂಗಲ ವಲಯ ಅರಣ್ಯಾಧಿಕಾರಿ ವೀರೇಂದ್ರ ಮರಿಬಸಣ್ಣವರ್ ಭೇಟಿ ನೀಡಿ ಪರಿಶೀಲಿಸಿದರು.