ಸೋಮವಾರಪೇಟೆ, ಜ. ೯: ಕೊಯ್ಲು ಮಾಡಿ ಚೀಲಗಳಲ್ಲಿ ಸಂಗ್ರಹಿಸಿಟ್ಟಿದ್ದ ಕಾಫಿ ಫಸಲನ್ನು ಕಾಡಾನೆಗಳ ಹಿಂಡು ಚೆಲ್ಲಾಡಿ, ಕಾಫಿ ತೋಟದೊಳಗೆ ದಾಂಧಲೆ ನಡೆಸಿದ ಘಟನೆ ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದ ಕೂತಿ ಗ್ರಾಮದಲ್ಲಿ ನಡೆದಿದೆ.
ಕೂತಿ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕೃಷಿಕರು ಕಂಗಾಲಾಗಿದ್ದಾರೆ. ಕೂತಿ ಗ್ರಾಮದ ಸಜನ್ ಎಂಬವರ ಕಾಫಿ ತೋಟದೊಳಗೆ ಕೊಯ್ಲು ಮಾಡಿ ಸುಮಾರು ೧೦ ಚೀಲಗಳಲ್ಲಿ ಶೇಖರಿಸಿಟ್ಟಿದ್ದ ಕಾಫಿಯನ್ನು ಕಾಡಾನೆಗಳ ಹಿಂಡು ಮನಸೋಯಿಚ್ಚೆ ಚೆಲ್ಲಾಡಿ ನಷ್ಟಪಡಿಸಿವೆ.
ಇದರೊಂದಿಗೆ ತೋಟದಲ್ಲಿರುವ ಕಾಫಿ, ಬಾಳೆ ಗಿಡಗಳು, ಬೈನೆ ಮರಗಳನ್ನು ಮುರಿದು ಹಾನಿಪಡಿಸಿವೆ. ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ತೋಟ, ಗದ್ದೆಗಳಿಗೆ ತೆರಳಿ ಕೆಲಸ ಕಾರ್ಯ ಮಾಡಲೂ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಜನವಸತಿ ಹಾಗೂ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಅರಣ್ಯ ಇಲಾಖೆ ಕ್ರಮವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.