ಸಿದ್ದಾಪುರ, ಜ. ೯: ಶಾಸಕರು ಮುತುವರ್ಜಿ ವಹಿಸಿದ ಹಿನ್ನೆಲೆಯಲ್ಲಿ ಕಾಡಾನೆ ದಾಳಿಗೆ ಸಿಲುಕಿ ಗಾಯಗೊಂಡಿದ್ದ ವ್ಯಕ್ತಿಗೆ ಚಿಕಿತ್ಸೆ ವೆಚ್ಚವನ್ನು ನೀಡುವುದಾಗಿ ಅರಣ್ಯ ಇಲಾಖಾಧಿಕಾರಿಗಳು ಭರವಸೆ ನೀಡಿದ್ದಾರೆ. ಮಾಲ್ದಾರೆ ಸಮೀಪದ ತಟ್ಟಳ್ಳಿಯಿಂದ ಕೆಲಸ ಮುಗಿಸಿ ಲಿಂಗಾಪುರ ಸಮೀಪವಿರುವ ಮಾಲಕಟ್ಟಿ ಹಾಡಿಗೆ ಬೈಕ್ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಕಾಡಾನೆ ದಾಳಿಯಿಂದ ಆದಿವಾಸಿ ಜನಾಂಗದ ಜೇನುಕುರುಬರ ರವಿ ಎಂಬಾತ ಗಾಯಗೊಂಡಿದ್ದ. ಗಂಭೀರ ಗಾಯಗೊಂಡಿದ್ದ ರವಿಯ ಚಿಕಿತ್ಸೆ ವೆಚ್ಚ ನೀಡದ ಅರಣ್ಯ ಇಲಾಖೆಯು ಕಳೆದ ಒಂದೂವರೆ ತಿಂಗಳಿನಿAದ ನಿರ್ಲಕ್ಷö್ಯ ವಹಿಸಿತ್ತು. ಈ ಹಿನ್ನೆಲೆಯಲ್ಲಿ ಆದಿವಾಸಿ ಮುಖಂಡ ಹಾಗೂ ಚೆನ್ನಯ್ಯನಕೋಟೆ ಗ್ರಾ.ಪಂ ಸದಸ್ಯ ಜೆ.ಕೆ ಅಪ್ಪಾಜಿ ನೇತೃತ್ವದಲ್ಲಿ ಆದಿವಾಸಿಗಳು ಅರಣ್ಯ ಇಲಾಖಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲು ತೀರ್ಮಾನ ಕೈಗೊಂಡಿದ್ದರು. ಈ ವಿಚಾರ ತಿಳಿದ ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಮುತುವರ್ಜಿ ವಹಿಸಿ ಗಾಯಾಳು ಆದಿವಾಸಿ ರವಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ತಗಲಿರುವ ವೆಚ್ಚವನ್ನು ಭರಿಸುವಂತೆ ಸೂಚನೆ ನೀಡಿದ್ದರು. ಇದೀಗ ಅರಣ್ಯ ಇಲಾಖಾಧಿಕಾರಿಗಳು ರವಿಯ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯ ವೆಚ್ಚ ರೂ. ೩.೮೦ ಲಕ್ಷ ಹಣವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆಂದು ಜೆ.ಕೆ ಅಪ್ಪಾಜಿ ತಿಳಿಸಿದ್ದಾರೆ.
- ವಾಸು.