ಕೂಡಿಗೆ, ಜ. ೯: ಜಿಲ್ಲೆಯಲ್ಲಿ ನೂರಾರು ರೈತರು ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ವಾಣಿಜ್ಯ ಬೆಳೆಯಾದ ಶುಂಠಿಯನ್ನು ಅವಲಂಬಿಸಿದ್ದಾರೆ. ಕೆಲ ರೈತರು ಗುತ್ತಿಗೆ ಆಧಾರದ ಮೇಲೆ ಭೂಮಿಯನ್ನು ಪಡೆದು ಶುಂಠಿ ಬೇಸಾಯ ಮಾಡಿದರೂ ಸಮರ್ಪಕವಾದ ಬೆಲೆಯಿಲ್ಲದೆ ಶುಂಠಿ ಬೆಳೆಯನ್ನು ಕೀಳದೆ ಜಮೀನಿನಲ್ಲಿ ಬಿಟ್ಟಿರುತ್ತಾರೆ. ಅದರೂ ಸಹ ಬದಲಿ ಜಾಗದಲ್ಲಿ ಮುಂದಿನ ವರ್ಷಗಳಲ್ಲಿ ಶುಂಠಿ ಬೇಸಾಯ ಮಾಡಲು ಅನೇಕ ರೈತರು ಭೂಮಿಯನ್ನು ಉಳುಮೆ ಮಾಡಿ ಬಿತ್ತನೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಕಳೆದ ಮೂರು ವರ್ಷಗಳಿಂದ ಶುಂಠಿಗೆ ಬೆಲೆ ಸಿಗುತ್ತಿರುವುದು ೬೦ ಕೆ.ಜಿ. ಮೂಟೆಗೆ ಕೇವಲ ರೂ. ೬೦೦ ರಿಂದ ೭೦೦ ಮಾತ್ರ. ಆದರೆ ಶುಂಠಿ ಬೇಸಾಯಕ್ಕೆ ಖರ್ಚು ಮಾಡಿದ ಹಣವು ಸಹ ಸಿಗುತ್ತಿಲ್ಲಾ ಎನ್ನುತ್ತಾರೆ ಶುಂಠಿ ಬೆಳೆಗಾರರು. ಈ ಬಾರಿ ಮಾರಾಟದ ಶುಂಠಿಗೆ ಬೆಲೆ ಕಡಿಮೆ ಆದರೆ ಬಿತ್ತನೆ ಬೀಜಕ್ಕೂ ಸಹ ಬೆಲೆ ಕಡಿಮೆ ಇದೆ. ಆದರೂ ಬೆಲೆ ಕುಸಿತದ ನಡುವೆ ಶುಂಠಿ ಬೇಸಾಯಕ್ಕೆ ರೈತರು ಮುಂದಾಗುತ್ತಿದ್ದಾರೆ. ಬೆಲೆ ಏರುಪೇರು ಆದರೂ ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ಆಗಬಹುದೆಂದು ನಂಬಿಕೆ ಮೂಲಕ ರೈತರು ಶುಂಠಿ ಕೃಷಿಯಲ್ಲಿ ತೊಡಗಿದ್ದಾರೆ.
ಕೊರೊನಾ ಹಿನ್ನೆಲೆ ಶುಂಠಿ ಬೆಳೆಯು ಹೊರ ರಾಜ್ಯಗಳಿಗೆ ಮಾರಾಟವಾಗದೆ ಬೆಲೆಯಲ್ಲಿ ಬಾರಿ ಕುಸಿತದಿಂದಾಗಿ ಸಂಕಷ್ಟ ಎದುರಿಸಿದ್ದಾರೆ. ಆದರೆ ಬಿತ್ತನೆ ಬೀಜದ ಶುಂಠಿ ಬೆಲೆಯು ತೀರಾ ಕಡಿಮೆ ಇರುವುದರಿಂದಾಗಿ ನೀರಿನ ವ್ಯವಸ್ಥೆಗೆ ಅನುಗುಣವಾಗಿ ರೈತರು ಶುಂಠಿ ಬೇಸಾಯ ಮಾಡಲು ಈಗಾಗಲೇ ತಮ್ಮ ಭೂಮಿಯನ್ನು ಸಿದ್ಧತೆ ಮಾಡಿಕೊಳ್ಳುವುದರಲ್ಲಿ ತೊಡಗಿದ್ದಾರೆ.
ಅಕಾಲಿಕ ಮಳೆಯಿಂದಾಗಿ ಭೂಮಿಯು ಹದವಾದ್ದರಿಂದ ಉಳುಮೆಗೆ ಅನುಕೂಲ ಮತ್ತು ಶುಂಠಿ ರೋಗರುಜಿನಗಳು ಬಾರದ ಹಾಗೆ ಕೃಷಿ ಇಲಾಖೆಯ ಅಧಿಕಾರಿ ಸಲಹೆಗಳನ್ನು ಪಡೆದು ಭೂಮಿಗೆ ರಂಜಕ ಮತ್ತು ಮಣ್ಣಿನ ಪೋಷಕಾಂಶಗಳ ಜೈವಿಕ ಸಾವಯವ ಗೊಬ್ಬರಗಳನ್ನು ಬಳಕೆ ಮಾಡಿ ಈಗಾಗಲೇ ಉಳುಮೆ ಮಾಡುವ ಕೆಲಸದಲ್ಲಿ ರೈತರು ತೊಡಗಿದ್ದಾರೆ.
ಭೂಮಿ ಸಿದ್ಧತೆ ಮಾಡಿಕೊಂಡು ಜನವರಿ ಅಂತ್ಯ ಅಥವಾ ಫೆಬ್ರವರಿ ತಿಂಗಳಲ್ಲಿ ಶುಂಠಿ ಬಿತ್ತನೆ ಮಾಡಿದರೆ ಮುಂಗಾರು ಮಳೆ ಪ್ರಾರಂಭ ಆಗುವ ಮುನ್ನ ಶುಂಠಿ ಬೆಳೆಗೆ ಬರುವ ಅನೇಕ ರೋಗಗಳನ್ನು ತಡೆಗಟ್ಟಲು ಸಹಕಾರವಾಗುವುದು ಎಂದು ಸೀಗೆಹೊಸೂರು ಗ್ರಾಮದ ಶುಂಠಿ ಬೆಳೆಗಾರರಾದ ವಿಶ್ವನಾಥ, ದಿವಾಕರ, ಅನಿಲ್, ಪ್ರಭಾಕರ್, ದೇವರಾಜ್ ಸೇರಿದಂತೆ ಹಲವಾರು ರೈತರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಸತತವಾಗಿ ಶುಂಠಿ ಬೆಳೆಗೆ ಮಹಾಕಾಳಿ ರೋಗ ಸೇರಿದಂತೆ ವಿವಿಧ ಬಗೆಯ ರೋಗ ಕಾಣಿಸಿಕೊಂಡು ಬಾರಿ ನಷ್ಟವನ್ನು ಅನುಭವಿಸುತ್ತಿರುವ ರೈತರು ಈ ಬಾರಿ ರೋಗವನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಬೇಕಾಗುವ ಯೋಜನೆಗಳನ್ನು ತಿಳಿದುಕೊಳ್ಳಲು ಮುಂದಾಗಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ