ಕಣಿವೆ, ಜ. ೮: ಬಾಣಾವರ ಬಳಿ ಇರುವ ಸೌಲಭ್ಯ ವಂಚಿತ ಕಾಡು ಹಾಡಿ ಗಿರಿಜನ ಹಾಡಿಗೆ ಆಲೂರುಸಿದ್ದಾಪುರ ಚೆಸ್ಕಾಂ ಅಧಿಕಾರಿಗಳು ಶನಿವಾರ ಭೇಟಿ ನೀಡಿ ಅಲ್ಲಿನ ಗಿರಿಜನ ನಿವಾಸಿಗಳ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ ಪರಿಶೀಲನೆ ನಡೆಸಿದರು.
ಕೊಡಗು ಜಿಲ್ಲಾ ಚೆಸ್ಕಾಂ ಕಾರ್ಯಪಾಲಕ ಅಭಿಯಂತರ ಅಶೋಕ್ ಅವರ ನಿರ್ದೇಶನದ ಮೇರೆಗೆ ಸಹಾಯಕ ಅಭಿಯಂತರ ಪಿ.ಸಿ. ರಮೇಶ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದರು.
ಈ ಸಂದರ್ಭ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ನೀಡಿದ ಚೆಸ್ಕಾಂ ಅಭಿಯಂತರ ರಮೇಶ್, ಈ ಕಾಡು ಹಾಡಿ ಗಿರಿಜನ ಹಾಡಿಗೆ ಈ ಹಿಂದೆಯೇ ಸೌಭಾಗ್ಯ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸುವ ಅವಕಾಶ ಬಂದಿತ್ತು. ಆದರೆ ಇಲಾಖೆಯಿಂದ ವಿದ್ಯುತ್ ಸಂಪರ್ಕ ಕಲ್ಪಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಬಿಡಲಿಲ್ಲ. ಹಾಗಾಗಿ ಸೌಲಭ್ಯ ಕಲ್ಪಿಸಲು ವಿಳಂಬವಾಗಿದೆ ಮತ್ತು ವಿಶೇಷವಾಗಿ ಈ ಹಾಡಿಯಲ್ಲಿನ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಈಗಿರುವ ಶೆಡ್ಗಳು ಪೂರಕವಾಗಿಲ್ಲ. ಏಕೆಂದರೆ ಕಬ್ಬಿಣದ ಹಾಗೂ ತಗಡಿನ ಶೀಟುಗಳನ್ನು ನಿಲ್ಲಿಸಿಕೊಂಡು ಮರೆಮಾಡಿಕೊಂಡು ಈ ಮಂದಿ ವಾಸವಿದ್ದಾರೆ. ವಿದ್ಯುತ್ ಸಂಪರ್ಕ ಒದಗಿಸಲು ನಮಗೆ ಮನೆಯ ಗಟ್ಟಿಯಾದ ಗೋಡೆಗಳು ಬೇಕು. ಇಲ್ಲಿನ ನಿವಾಸಿಗಳಿಗೆ ಮನೆಗಳು ನಿರ್ಮಾಣವಾಗದ ಹೊರತು ವಿದ್ಯುತ್ ಸಂಪರ್ಕ ಅಸಾಧ್ಯ ಎಂದು ಚೆಸ್ಕಾಂ ಅಧಿಕಾರಿಗಳು ವಿವರಿಸಿದರು.
ಈ ಹಾಡಿಯಲ್ಲಿ ಶಾಲೆ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿದ್ದು ರಾತ್ರಿ ವೇಳೆ ಪಠ್ಯ ಪುಸ್ತಕ ಹಿಡಿದು ಓದಲು ಕರೆಂಟ್ ಸೌಲಭ್ಯವೇ ಇಲ್ಲದುದರ ಬಗ್ಗೆ ‘ಶಕ್ತಿ’ ವರದಿ ಪ್ರಕಟಿಸಿತ್ತು. ಈ ವರದಿಯಿಂದ ಎಚ್ಚೆತ್ತುಕೊಂಡ ಚೆಸ್ಕಾಂ ಅಧಿಕಾರಿಗಳು ಇಂದು ಹಾಡಿಗೆ ಭೇಟಿ ನೀಡಿದ್ದರು.
-ಕೆ.ಎಸ್. ಮೂರ್ತಿ