ಮಡಿಕೇರಿ, ಜ. ೮ : ಪ್ರಕೃತಿ ರಮಣೀಯವಾದ., ಗಿರಿ ಕಂದರಗಳಿAದ ಕೂಡಿರುವ ಸುಂದರ ಪರಿಸರದಲ್ಲಿರುವ ನಿಶಾನೆ ಮೊಟ್ಟೆ ಮಡಿಕೇರಿ ಬಳಿಯ ಗಾಳಿಬೀಡು ವ್ಯಾಪ್ತಿಯಿಂದ ಆರಂಭಗೊAಡು ಬ್ರಹ್ಮಗಿರಿ ತಪ್ಪಲನ್ನು ಸೇರುತ್ತದೆ. ಚಾರಣಕ್ಕೆ ಪೂರಕವಾದ ವಾತಾವರಣ ವನ್ನು ಹೊಂದಿರುವ ಈ ಬೆಟ್ಟಕ್ಕೆ ಒಂದೊಮ್ಮೆ ಚಾರಣ ಪ್ರಿಯರು ಸ್ವೇಚ್ಛೆಯಿಂದ ಏರಿಳಿಯುತ್ತಿದ್ದರು. ಈಗಲೂ ಗಾಳಿಬೀಡು ಬಳಿ ಹಾಗೂ ತಣ್ಣಿಮಾನಿ ಬಳಿ ಚಾರಣ ಹೋಗುತ್ತಾರೆ. ಆದರೆ ತೊಡಿಕಾನ ಉಪ ವಲಯ ದಲ್ಲಿರುವ ಪ್ರದೇಶಕ್ಕೆ ಚಾರಣಕ್ಕೂ ಅವಕಾಶವಿಲ್ಲ. ಅಲ್ಲಿಗೆ ಚಾರಣ ಹೋದರೆ ಜೊತೆಯಲ್ಲಿ ಅರಣ್ಯ ಇಲಾಖೆಯವರು ಬರುತ್ತಾರೆ.., ದಾರಿ ತಪ್ಪಿಸಿ ಬೇರೆ ಕಡೆಯಿಂದಾಗಿ ಕರೆದೊಯ್ಯತ್ತಾರೆ. ಆದರೆ., ಲೂಟಿ ಕೋರರನ್ನು ಮಾತ್ರ ತಮ್ಮ ಕ್ಯಾಂಪಿ ನೊಳಗೆ ಸೇರಿಸಿಕೊಳ್ಳುತ್ತಾರೆ..! ಸ್ಥಳೀಯರು ಕೂಡ ಕಳ್ಳರಿಗೆ ದಾರಿ ತೋರಿಸಲು ಸಹಕರಿಸುತ್ತಾರೆ..,

(ಮೊದಲ ಪುಟದಿಂದ) ಸ್ಥಳೀಯರ ಸಹಕಾರದಿಂದಲೇ ಹರಳು ಕಲ್ಲು ದಂಧೆಕೋರರು ಈ ಬೆಟ್ಟ ಹತ್ತಿರುವ ವದಂತಿ ಈಗ ದಟ್ಟವಾಗಿದೆ..!

ನಿಶಾನೆ ಮೊಟ್ಟೆಗೆ ನೀರಿನ ಬಾಟಲಿ, ಒಂದಿಷ್ಟು ಚಿಪ್ಸ್ ಹೊತ್ತೊಯ್ಯವದು ಕೂಡ ತ್ರಾಸದಾಯಕ. ಅಂತಹದರಲ್ಲಿ ಗುದ್ದಲಿ, ಪಿಕಾಶಿ, ಟಾರ್ಪಲ್., ಹಗ್ಗ, ಚೀಲ.., ಹೀಗೇ ಎಲ್ಲ ಸಾಮಗ್ರಿಗಳನ್ನು ಹೊತ್ತೊಯ್ಯಬೇಕಾದರೆ ಕನಿಷ್ಟ ಹತ್ತಾರು ಮಂದಿಯಾದರೂ ಬೇಕು. ನಿಕ್ಷೇಪ ಇರುವ ಬಗ್ಗೆ ಹೇಳಿಕೊಡಲು, ಕಮಿಷನ್ ರೂಪದಲ್ಲಿ ಒಂದಿಷ್ಟು ಹಣ ಲಪಟಾಯಿಸಲು ಇದರ ಬಗ್ಗೆ ಗೊತ್ತಿರುವ ಸ್ಥಳೀಯರ ಸಹಕಾರ ಬೇಕು. ಜೊತೆಗೆ ದಾರಿ ತೋರಿಸಿ ಕಳ್ಳರ ಕಾವಲು ಕಾಯಲು ಇಲಾಖೆ ಸಿಬ್ಬಂದಿಗಳು ಇರಲೇಬೇಕು. ಇಲ್ಲಿ ನಿರಂತರವಾಗಿ ಇದೇ ಆಗುತ್ತಿರುವದು ಎಂದರೆ ತಪ್ಪಾಗಲಾರದು..!

ಸ್ಥಳೀಯರೇ ಪಾಲುದಾರರು..!

ನಿಶಾನೆ ಮೊಟ್ಟೆಯಲ್ಲಿ ಅಕ್ರಮ ಹರಳು ಕಲ್ಲು ಗಣಿಗಾರಿಕೆ ನಡೆಸಲು ಈ ಹಿಂದಿನಿAದಲೇ ಇಲ್ಲಿ ಗಣಿಗಾರಿಕೆ ನಡೆಸಿದ್ದವರೇ ಪ್ರಮುಖ ಪಾಲುದಾರರಾಗಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು ಹೇಳುತ್ತಾರೆ. ಬೆಟ್ಟದ ಮೇಲಿನಿಂದ ನೋಡುವಾಗ ಕೆಳಭಾಗದಲ್ಲಿ ಕಾಣುವ ಮನೆಯ ವ್ಯಕ್ತಿ ಇದರ ರೂವಾರಿಯೆಂದು ಹೇಳುತ್ತಾರೆ. ಈ ಹಿಂದೆ ೨೦೧೯ರಲ್ಲಿ ಗಣಿಗಾರಿಕೆ ನಡೆದ ಸಂದರ್ಭ ಈ ವ್ಯಕ್ತಿ ಸೇರಿದಂತೆ ಇತರರ ಮೇಲೆ ಮೊಕದ್ದಮೆ ದಾಖಲಾಗಿದ್ದರೂ ಇಲಾಖೆಯವರು ಕ್ರಮ ಕೈಗೊಂಡಿರಲಿಲ್ಲ. ಇದೀಗ ಮಾಡಿರುವಂತೆಯೇ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ನಮೂದಿಸಿ, ಕೆಲವು ಸಮಯ ಕಳೆದ ಬಳಿಕ ಬಿ ಶೀಟ್ ಜಾರಿ ಮಾಡಿ ಪ್ರಕರಣಕ್ಕೆ ತೆರೆ ಎಳೆದುಬಿಟ್ಟರು. ಇದೀಗ ಮತ್ತೆ ಅವರ ಹೆಸರುಗಳು ತಳುಕು ಹಾಕಿಕೊಳ್ಳುತ್ತಿದೆ. ಇವರೊಂದಿಗೆ ಇನ್ನೂ ಕೆಲವರ ಹೆಸರುಗಳು ಕೇಳಿ ಬರುತ್ತಿವೆ. ದಂಧೆಕೋರರಿAದ ಹಣ ಪಡೆದು ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೂ ನೀಡಿ ಹಾದಿ ಸುಗಮಗೊಳಿಸುವ ಮಧ್ಯವರ್ತಿಗಳಾಗಿ ಕೆಲಸ ಮಾಡಿರುವದು ಮೇಲ್ನೋಟಕ್ಕೆ ಕಂಡು ಬರುತ್ತಿದೆ..!

ಜನ ಪ್ರತಿನಿಧಿಗಳು ಮೌನ..!

ಅಕ್ರಮ ದಂಧೆಯ ಹಿಂದೆ ಬಹುತೇಕ ಭಾಗಮಂಡಲದ ಪ್ರಮುಖರ ಹೆಸರುಗಳು ಕೇಳಿ ಬರುತ್ತಿವೆ. ಸ್ಥಳೀಯ ಪ್ರಮುಖರೇ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಅವರುಗಳು ಪ್ರಮುಖ ರಾಜಕೀಯ ಪಕ್ಷದ ಕಾರ್ಯಕರ್ತರಾಗಿರುವದರಿಂದ ಈ ಪ್ರಕರಣದಲ್ಲಿ ಜನಪ್ರತಿನಿಧಿಗಳು ಮೌನ ತಾಳಿರುವದಾಗಿ ಜನ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ. ಜನಪ್ರತಿನಿಧಿಗಳು ಆಸಕ್ತಿ ವಹಿಸಿ ದಂಧೆಕೋರರೊAದಿಗೆ ಶಾಮೀಲಾಗಿರುವವರ ವಿರುದ್ಧ ಕ್ರಮ ಕೈಗೊಂಡಲ್ಲಿ ಪಕ್ಷಕ್ಕೆ ತಗಲುವ ಕೆಟ್ಟ ಹೆಸರನ್ನು ಅಳಿಸಬಹುದೆಂಬದು ಜನರ ಅಭಿಪ್ರಾಯವೂ ಆಗಿದೆ.

ಅಧಿಕಾರಿಯಿಂದ ವಾಚರ್‌ವರೆಗೆ..!

ಈ ದಂಧೆಯಲ್ಲಿ ಅರಣ್ಯ ಇಲಾಖೆಯ ಬಹುತೇಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗಿಯಾಗಿರುವದಾಗಿ ಹೇಳಲಾಗುತ್ತಿದೆ. ೨೦೦೧ರಿಂದಲೇ ಇಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಆ ಸಂದರ್ಭದಲ್ಲಿ ಅಲ್ಲಿ ಕರ್ತವ್ಯದಲ್ಲಿದ್ದ ಸೋಮಶೇಖರ್, ಲಕ್ಷö್ಮಣ್ ರೈ, ಜೋಯಪ್ಪ, ಸದಾನಂದ, ನಾಗರಾಜ್ ಅವರುಗಳ ಸಹಕಾರದಿಂದ ಗಣಿಗಾರಿಕೆ ನಡೆದಿರುವದಾಗಿ ಮಾಹಿತಿ ಲಭಿಸಿದೆ. ರಾಸಿಕ್, ಮಹಮ್ಮದ್ ಆಲಿ, ಹಮೀದ್, ಮಿಟ್ಟು, ಪಾಪು ಇವರುಗಳು ಗಣಿಗಾರಿಕೆ ನಡೆಸುತ್ತಿರುವವರೆಂದು ಹೇಳಲಾಗುತ್ತಿದೆ. ಇವರುಗಳೊಂದಿಗೆ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿAದ ಹಿಡಿದು ಭಾಗಮಂಡಲ ವಲಯದ ಅರಣ್ಯ ವೀಕ್ಷಕರವರೆಗೂ ಎಲ್ಲರೂ ಪಾಲುದಾರರೆಂಬದು ಗ್ರಾಮಸ್ಥರ ಆರೋಪವಾಗಿದೆ..!

ಮೊಬೈಲ್ ದಾಖಲೆ ಪಡೆಯಲಿ..!

ಇಲ್ಲಿ ೨೦ ವರ್ಷಗಳಿಂದ ನಿರಂತರ ಗಣಿಗಾರಿಕೆ ನಡೆಯುತ್ತಿದ್ದರೂ ಇದುವರೆಗೂ ಯಾವದೇ ಬಿಗಿ ಕ್ರಮ ಆಗಿಲ್ಲ. ಅರಣ್ಯ ಇಲಾಖೆಯೇ ತನಿಖೆ ನಡೆಸುವದರಿಂದ ಅಲ್ಲಿ ಏನೂ ಆಗುವದಿಲ್ಲವೆಂಬದು ದಂಧೆಕೋರರಿಗೂ, ಇಲಾಖಾ ಸಿಬ್ಬಂದಿಗಳಿಗೆ ಚೆನ್ನಾಗಿ ತಿಳಿದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ಸೂಕ್ತ ತನಿಖೆ ಮಾಡಿ ಕ್ರಮಕೈಗೊಂಡರೆ ಇಂತಹ ದಂಧೆಗಳಿಗೆ ಕಡಿವಾಣ ಹಾಕಬಹುದು. ಸದ್ಯದ ಮಟ್ಟಿಗೆ ನಿಶಾನೆ ಮೊಟ್ಟೆಯಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳ ಮೊಬೈಲ್ ಕರೆಗಳ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲಿಸಿದರೆ ಯಾರು ಯಾರಿಗೆಲ್ಲ ಕರೆ ಮಾಡಿದ್ದಾರೆ..? ಯಾರೆಲ್ಲ ಶಾಮೀಲಾಗಿದ್ದಾರೆ ಎಂಬದು ತಿಳಿಯಲಿದೆ. ಅಷ್ಟೂ ಮಾಡಲು ಇಲಾಖೆ ಮುಂದಾಗುತ್ತಿಲ್ಲ ವೆಂದಾದರೆ ಅವರೆಲ್ಲರೂ ಇದರೊಳಗಡೆ ಇದ್ದಾರೆಂದೇ ಅರ್ಥವಲ್ಲವೇ..!?

? ಸಂತೋಷ್, ಸುನಿಲ್