ವೀರಾಜಪೇಟೆ, ಜ. ೮: ವೀರಾಜಪೇಟೆಯ ಪುರಭವನದಲ್ಲಿ ನೂತನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಘಟಕದ ಸಮಾಲೋಚನಾ ಸಭೆ ನಡೆಯಿತು. ಮಾಜಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ಪಿ ರಮೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವೀರಾಜಪೇಟೆ ತಾಲೂಕು ನಿಕಟಪೂರ್ವ ಅಧ್ಯಕ್ಷ ಮಧೋಶ್ ಪೂವಯ್ಯ ಅವರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.

ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಕ.ಸಾ.ಪ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್‌ನಿಂದ ಮುಂಬರುವ ದಿನಗಳಲ್ಲಿ ಕೈಗೊಳ್ಳಲಿರುವ ರಚನಾತ್ಮಕ ಕಾರ್ಯಕ್ರಮಗಳ ಬಗ್ಗೆ ಸಭೆಗೆ ವಿವರಿಸಿದರು. ವೀರಾಜಪೇಟೆಯಲ್ಲಿ ಕನ್ನಡಕ್ಕಾಗಿ ಸೇವೆ ಸಲ್ಲಿಸಿದ ಡಿ.ಜೆ ಪದ್ಮನಾಭಾ ಅವರು ವೀರಾಜಪೇಟೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ ಮಾಡಿ ಹೆಸರಾಂತ ಖ್ಯಾತನಾಮ ಸಾಹಿತಿಗಳನ್ನು, ಸಿನಿಮಾ ನಟರನ್ನು ವೀರಾಜಪೇಟೆಗೆ ಅತಿಥಿಗಳಾಗಿ ಬರುವಂತೆ ಮಾಡಿದ್ದರು. ಎರಡನೇ ಹಂತದ ನಾಯಕರು ಕ.ಸಾ.ಪದಲ್ಲಿ ಬೆಳೆಯಲು ನಾಯಕತ್ವ ಕಲ್ಪಿಸಿಕೊಡುವ ವ್ಯವಸ್ಥೆಯಾಗಬೇಕು. ಯುವಕರು ಸಾಹಿತ್ಯ ಚಟುವಟಿಕೆಗಳಲ್ಲಿ ಭಾಗವಹಿಸುವಂತಾಗಬೇಕು ಎಂದರು.

ಬಳಿಕ ಮಾತನಾಡಿದ ವೀರಾಜಪೇಟೆ ತಾಲೂಕು ನಿಕಟಪೂರ್ವ ಅಧ್ಯಕ್ಷ ಮಧೋಶ್ ಪೂವಯ್ಯ ಇತ್ತೀಚೆಗೆ ಪದವಿ ತರಗತಿಗಳಲ್ಲಿ ಕನ್ನಡ ಭಾಷೆಯನ್ನು ದ್ವಿತೀಯ ಭಾಷೆಯಾಗಿಸಿರುವುದು ತೀರಾ ಶೋಚನೀಯ ಸಂಗತಿ. ಇದರ ವಿರುದ್ಧ ಕಾನೂನು ಸಮರವನ್ನು ಕ.ಸಾ.ಪ ಮಾಡಬೇಕು ಎಂದರು.

ಅಧ್ಯಕ್ಷೀಯ ಭಾಷಣ ಮಾಡಿದ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಕೇಶವ ಕಾಮತ್, ಯಾರಿಗೆ ಸಾಹಿತ್ಯಕ್ಕಾಗಿ ಕೆಲಸ ಮಾಡಲು ಮನಸು ಮತ್ತು ಸಮಯ ಇರುತ್ತದೆ ಅಂಥವರು ಕ.ಸಾ.ಪಕ್ಕೆ ಬನ್ನಿ. ಕನ್ನಡ ನಾಡು-ನುಡಿ ಬೆಳೆಸುವ ಜವಬ್ದಾರಿ ಕನ್ನಡ ಸಾಹಿತ್ಯ ಪರಿಷತ್ ಮೇಲಿದೆ. ಕನ್ನಡ ಸಾಹಿತ್ಯ ಪರಿಷತ್‌ಗೆ ಕನ್ನಡದ ಪ್ರಾತಿನಿಧಿಕ ಸಂಸ್ಥೆ ಎಂಬ ಹೆಗ್ಗಳಿಕೆಯ ಸ್ಥಾನವಿದೆ. ಜಿಲ್ಲೆಯಲ್ಲಿ ಸುಮಾರು ೨,೪೦೦ ಮಂದಿ ಸದಸ್ಯರು ಇದ್ದಾರೆ. ಸುಮಾರು ೨೨ ದತ್ತಿನಿಧಿಗಳಿವೆ. ಮುಂಬರುವ ದಿನಗಳಲ್ಲಿ ಹೆಚ್ಚೆಚ್ಚು ಜನರು ಸದಸ್ಯತ್ವ ಪಡೆಯುವಂತೆ ಮಾಡಬೇಕು ಹಾಗೂ ದತ್ತಿನಿಧಿಗಳನ್ನು ಸ್ಥಾಪಿಸಬೇಕು ಎಂದರು.

ಹಿರಿಯ ಪತ್ರಕರ್ತ ಮನುಶೆಣೈ ಕೊಡಗು ಜಿಲ್ಲೆಯಲ್ಲಿ ಕ.ಸಾ.ಪ. ಬೆಳೆಯುತ್ತಾ ಬಂದ ಹಾದಿಯನ್ನು ಸ್ಮರಿಸಿದರು. ಅಲ್ಲದೇ ನಿಜವಾಗಿಯೂ ಸಾಹಿತ್ಯ ಸೇವೆ ಮಾಡಬೇಕೆನ್ನುವವರಿಗೆ ಕ.ಸಾ.ಪದಲ್ಲಿ ಸದಸ್ಯತ್ವ ನೀಡಿ ಎನ್ನುವ ಸಲಹೆ ನೀಡಿದರು.

ಪುಷ್ಪಲತಾ ಅವರು ಸಲಹೆ ನೀಡುತ್ತಾ, ಕ.ಸಾ.ಪವೂ ಸ್ತಿçà ಶಕ್ತಿ ಸಂಘಟನೆಗಳನ್ನು ಬರೇ ಸಮ್ಮೇಳನಗಳಲ್ಲಿ ಕಳಶ ಹೊರಲು ಬಳಸಿಕೊಳ್ಳುತ್ತಿದೆ. ಅದರ ಬದಲಿಗೆ ಕ.ಸಾ.ಪ.ದ ನಿಜ ಉದ್ದೇಶದ ಬಗ್ಗೆ ಸ್ತಿçà ಶಕ್ತಿ ಸಂಘಟನೆಯವರಿಗೂ ಜ್ಞಾನ ಬರುವಂತೆ ಮಾಡಿ ಅವರಿಗೂ ಕ.ಸಾ.ಪದಲ್ಲಿ ಸದಸ್ಯತ್ವ ನೀಡುವ ಬಗ್ಗೆ ಚಿಂತನೆ ಮಾಡಿ ಎನ್ನುವ ಸಲಹೆ ನೀಡಿದರು.

ನಾ ಕನ್ನಡಿಗ ಟೋಮಿ ಥಾಮಸ್ ಅವರು ಹೋಬಳಿ ಘಟಕದಲ್ಲಿ ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿ ಆ ಮೂಲಕ ತಾಲೂಕು, ಜಿಲ್ಲಾ ಘಟಕಗಳ ಮಧ್ಯೆ ಸಮನ್ವಯತೆ ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು.

ವಕೀಲ ಐ.ಆರ್. ಪ್ರಮೋದ್ ಅವರು ಕನ್ನಡದಲ್ಲಿ ಪದಗಳಿದ್ದರೂ, ಮಾಧ್ಯಮಗಳಲ್ಲಿ ‘ನೈಟ್ ಕರ್ಫ್ಯೂ’, ‘ವೀಕೆಂಡ್ ಲಾಕ್ಡೌನ್’ ಇತ್ಯಾದಿಯಾಗಿ ಇಂಗ್ಲೀಷ್ ಪದಬಳಕೆ ಮಾಡುವುದನ್ನು ಪರಿಷತ್ ಗಮನಿಸಿ ಸಂಬAಧಿಸಿದವರ ಗಮನಕ್ಕೆ ತರುವ ಕೆಲಸ ಮಾಡಬೇಕು. ಹಾಗೇ ಕ.ಸಾ.ಪ ಆಳುವ ಸರ್ಕಾರದ ಎಲ್ಲಾ ಮಾತುಗಳಿಗೆ ತಲೆಯಲ್ಲಾಡಿಸದೆ ಸ್ವತಂತ್ರ ವಿಚಾರಧಾರೆಯನ್ನು ಹೊಂದಿರಬೇಕು ಎಂದು ತಿಳಿಸಿದರು.

ಉಪನ್ಯಾಸಕ ವನೀತ್ ಕುಮಾರ್ ಕನ್ನಡದ ಕಾರ್ಯಕ್ರಮಗಳನ್ನು ಕಾಲೇಜುಗಳಲ್ಲಿ ನಡೆಸುವಂತೆ ಸಲಹೆ ನೀಡಿದರು. ದರ್ಶನ್, ಶಬರೀಶ್ ಶೆಟ್ಟಿ, ನಳಿನಾಕ್ಷಿ, ಮಂಜುನಾಥ್ ಪಿ.ಎ ದಿವಾಕರ್ ಶೆಟ್ಟಿ ಶಿಕ್ಷಕರು ಹಾಗೂ ಮಕ್ಕಳು ಸಾಹಿತ್ಯದಲ್ಲಿ ತೊಡಗಿಸಿಕೊಳ್ಳಲು ಅನುವಾಗುವಂಥ ಕಾರ್ಯಕ್ರಮಗಳನ್ನು ರೂಪಿಸಿ ಎನ್ನುವ ಉಪಯುಕ್ತ ಸಲಹೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಸಂತ ಅನ್ನಮ್ಮ ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಶಿಕ್ಷಕ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಪ.ಪಂ ಸದಸ್ಯ ರಾಜೇಶ್ ಪದ್ಮನಾಭ ವಂದಿಸಿದರು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಸದಸ್ಯರುಗಳಾದ ದೇಚಮ್ಮ ಕಾಳಪ್ಪ, ಪಟ್ಟಡ ರಂಜಿ ಪೂಣಚ್ಚ, ರಜನಿಕಾಂತ್, ಬಿಜೆಪಿ ಮುಖಂಡರುಗಳಾದ ಮಧು ದೇವಯ್ಯ, ಪಟ್ರಪಂಡ ರಘುನಾಣಯ್ಯ, ಜೋಕಿಂ ರೋಡ್ರಿಗ್ರಸ್ ಹಾಜರಿದ್ದರು.