ಮಡಿಕೇರಿ, ಜ. ೮: ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಇತ್ತೀಚೆಗೆ ಅನಾಮಧೇಯ ಯುವಕನೊಬ್ಬ ಚೀಲವೊಂದನ್ನು ತಂದು ಅರ್ಚಕರಿಗೆ ಒಪ್ಪಿಸಿದ ಘಟನೆ ನಡೆದಿತ್ತು. ಇದರಲ್ಲಿ ಹಣ್ಣು - ತೆಂಗಿನಕಾಯಿ ಇದ್ದು, ದೇವರಿಗೆ ಅರ್ಪಿಸಬೇಕೆಂದು ನೀಡಿ ಅರ್ಚಕರು ಪೂಜಾದಿಗಳಲ್ಲಿ ತೊಡಗಿಸಿಕೊಂಡಾಗ, ಸ್ಥಳದಿಂದ ಮರೆಯಾಗಿದ್ದ. ಪ್ರಧಾನ ಅರ್ಚಕರಾದ ಕುಶ ಭಟ್ ಅವರು ಚೀಲವನ್ನು ಒಳಗೆ ಒಯ್ದು ತೆರೆದಾಗ, ಹಣ್ಣು - ಕಾಯಿಯೊಂದಿಗೆ ಪಾದರಕ್ಷೆಯೂ ಇರಿಸಲ್ಪಟ್ಟಿದ್ದುದು ಕಂಡುಬAದಿತು. ಅದರಲ್ಲಿ ಹಳೆ ಬಟ್ಟೆಗಳನ್ನು ಇಡಲಾಗಿತ್ತು. ಜೊತೆಗೆ ಕೀ ಗೊಂಚಲು, ರೂ. ೨೨,೦೦೦ ಮೌಲ್ಯದ ಮೊಬೈಲ್ ಹಾಗೂ ಮೊಬೈಲ್‌ನ ಚಾರ್ಜರ್ ಕೂಡ ಇರಿಸಲ್ಪಟ್ಟಿತ್ತು.

ಇದೀಗ ವ್ಯಕ್ತಿ ಯಾರು ಎಂದು ಪತ್ತೆಯಾಗಿದೆ. ನಾಪೋಕ್ಲು ಹಳೇ ತಾಲೂಕಿನ ನಿವಾಸಿಯೊಬ್ಬರ ಪುತ್ರನೇ ಈ ವ್ಯಕ್ತಿ. ಈತ ಮಾನಸಿಕ ರೋಗದಿಂದ ಬಳಲುತ್ತಿದ್ದು, ಈ ಹಿಂದೆಯೂ ನಿಮ್ಹಾನ್ಸ್ನಲ್ಲಿ ಚಿಕಿತ್ಸೆ ಪಡೆದಿದ್ದುದಾಗಿ ಹೇಳಲಾಗಿದೆ. ಅನೇಕ ಸಂದರ್ಭ ಇದ್ದಕ್ಕಿದ್ದಂತೆ ಮಾನಸಿಕ ಸಮತೋಲನ ಕಳೆದುಕೊಂಡು ಉಲ್ಬಣಗೊಂಡಾಗ ಈ ರೀತಿಯ ಸನ್ನಿವೇಶ ಉಂಟಾಗಿರುವುದು ಅವರ ತಂದೆಯಿAದಲೇ ತಿಳಿದುಬಂದ ವಿದ್ಯಮಾನ. ಇತ್ತೀಚೆಗೆ ಈ ಯುವಕ ಸಮಸ್ಥಿತಿಯಲ್ಲಿಯೇ ನಾಮಕರಣ ಸಮಾರಂಭವೊAದಕ್ಕೂ ತೆರಳಿದ್ದುದಾಗಿ ತಿಳಿದುಬಂದಿದೆ. ಈ ಕುರಿತಾಗಿ ಆತನ ತಂದೆ ದೇವಾಲಯಕ್ಕೆ ಪುತ್ರನ ಸಹಿತ ಬಂದು ಸಂಭವಿಸಿದ ಈ ಅಪವಿತ್ರ ಸನ್ನಿವೇಶಕ್ಕಾಗಿ ಕ್ಷಮೆ ಕೋರಿದ್ದಾರೆ.

ಪ್ರಕರಣದ ಕುರಿತು ಮಾತನಾಡಿದ ದೇವತಕ್ಕ ಕುಟುಂಬದ ಪರದಂಡ ಸುಬ್ರಮಣಿ ಅವರು, ಯುವಕನ ಪೋಷಕರನ್ನು ದೇವಾಲಯಕ್ಕೆ ಮತ್ತೆ ಕರೆಸಲಾಗುತ್ತದೆ; ತಪ್ಪೊಡಕ ಕಟ್ಟಿಸಲಾಗುತ್ತದೆ. ಭಾನುವಾರ ಬೆಳಿಗ್ಗೆ ದೇವನಡೆಯಲ್ಲಿ ಘಟನೆಗಾಗಿ ಕ್ಷಮೆ ಕೋರಲಾಗುತ್ತದೆ. ಅಚಾತುರ್ಯ ದಿಂದಾದAತಹ ಈ ಪ್ರಕರಣವನ್ನು ದೈವ ಸನ್ನಿಧಿಯಲ್ಲಿ ಪ್ರಾರ್ಥನೆ ಮೂಲಕ ಪರಿಹಾರ ಮಾಡಲಾಗುತ್ತದೆ ಎಂದು ಮಾಹಿತಿಯಿತ್ತರು.